ADVERTISEMENT

ಇಳಿಕೆ ಹಾದಿಯಲ್ಲಿ ಚಿನ್ನ-ಬೆಳ್ಳಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2012, 19:30 IST
Last Updated 14 ಜುಲೈ 2012, 19:30 IST
ಇಳಿಕೆ ಹಾದಿಯಲ್ಲಿ ಚಿನ್ನ-ಬೆಳ್ಳಿ
ಇಳಿಕೆ ಹಾದಿಯಲ್ಲಿ ಚಿನ್ನ-ಬೆಳ್ಳಿ   

ನವದೆಹಲಿ (ಪಿಟಿಐ): ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಿದರೂ, ದೇಶೀಯ ಬೇಡಿಕೆ ಗರಿಷ್ಠ ಮಟ್ಟದಲ್ಲಿ ತಗ್ಗಿರುವುದರಿಂದ ಚಿನ್ನ ಮತ್ತು ಬೆಳ್ಳಿ ಧಾರಣೆ ಕಳೆದೊಂದು ವಾರದಲ್ಲಿ ಗಣನೀಯ ಇಳಿಕೆ ಕಂಡಿವೆ.

ಸಾಮಾನ್ಯವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಧಾರಣೆಯನ್ನು ಆಧರಿಸಿಯೇ ಭಾರತದಲ್ಲಿನ ಚಿನಿವಾರ ಪೇಟೆಯ ದರ ನಿಗದಿಯಾಗುತ್ತದೆ. ಆದರೆ, ಕಳೆದೊಂದು ವಾರದ  ಬೆಳವಣಿಗೆ ಇದಕ್ಕೆ ತದ್ವಿರುದ್ಧವಾಗಿದೆ. ನ್ಯೂಯಾರ್ಕ್ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ (28 ಗ್ರಾಂ) ಚಿನ್ನದ ಬೆಲೆ  ಶೇ 0.8ರಷ್ಟು ಏರಿಕೆ ಕಂಡಿದ್ದು 1,592 ಡಾಲರ್(ರೂ87,560)ಗಳಷ್ಟಾಗಿದೆ. ಇದೇ ವೇಳೆ ದೇಶೀಯ ಮಾರುಕಟ್ಟೆಯಲ್ಲಿ ಶೇ 99.9 ಮತ್ತು ಶೇ 99.5 ಶುದ್ಧ ಚಿನ್ನದ ಬೆಲೆ  ಕ್ರಮವಾಗಿ ರೂ380ರಷ್ಟು ಇಳಿಕೆ ಕಂಡಿದ್ದು, ರೂ30,030 ಮತ್ತು ರೂ29,830ಕ್ಕೆ ಬಂದಿದೆ.

ಖರೀದಿದಾರರು, ಚಿನ್ನಾಭರಣ ವರ್ತಕರು ಮತ್ತು ಹೂಡಿಕೆದಾರರಿಂದ ಚಿನ್ನದ ಬೇಡಿಕೆ ತಗ್ಗಿದೆ. ಜತೆಗೆ ತಮ್ಮಲ್ಲಿ ಹೆಚ್ಚಾಗಿ ಸಂಗ್ರಹವಾಗಿರುವ ಚಿನ್ನವನ್ನು ಮಾರಾಟ ಮಾಡಲು ವರ್ತಕರೂ ಮುಂದಾಗಿದ್ದಾರೆ. ಈ ಅಂಶಗಳೇ ಬೆಲೆ ಇಳಿಯಲು ಪ್ರಮುಖ ಕಾರಣವಾಗಿವೆ ಎಂದು ಮಾರುಕಟ್ಟೆ ಪಂಡಿತರ ವಿಶ್ಲೇಷಿಸಿದ್ದಾರೆ.

ಇದೇ ಅವಧಿಯಲ್ಲಿ ಬೆಳ್ಳಿ ಧಾರಣೆಯೂ ಕೆ.ಜಿಗೆ ರೂ450ರಷ್ಟು ತಗ್ಗಿದ್ದು, ರೂ52,750ಕ್ಕೆ ಬಂದಿದೆ. ಹಬ್ಬಗಳ ಕಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಬೆಳ್ಳಿ ನಾಣ್ಯಗಳಿಗೆ ಬೇಡಿಕೆ ಹೆಚ್ಚಿದೆ. 100 ಬೆಳ್ಳಿ ನಾಣ್ಯಗಳ ಬೆಲೆ ಕಳೆದ1 ವಾರದಲ್ಲಿ  ರೂ1 ಸಾವಿರದಷ್ಟು ತುಟ್ಟಿಯಾಗಿ ರೂ62,000ಕ್ಕೇರಿದೆ.

ಮತ್ತೆ ಕುಸಿತ: ಶನಿವಾರದ ವಹಿವಾಟಿನಲ್ಲಿ ದೆಹಲಿ ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆ ಮತ್ತೆ ಕುಸಿತ ಕಂಡಿದೆ.

ಚಿನ್ನ ರೂ15 ಇಳಿಕೆಯಾಗಿ ರೂ29,650ರಲ್ಲಿ ಮಾರಾಟವಾಗಿದೆ. ಬೆಳ್ಳಿ ಧಾರಣೆ ಕೆ.ಜಿಗೆ ರೂ400 ಕುಸಿದು ರೂ52,400ಕ್ಕೆ ಬಂದಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.