ADVERTISEMENT

ಉತ್ತಮ ಏರಿಕೆ ಕಂಡ ಷೇರುಪೇಟೆ

ಹಣದುಬ್ಬರ ನಿಯಂತ್ರಣಕ್ಕೆ ಆರ್‌ಬಿಐ ನಿರ್ಧಾರ

ಪಿಟಿಐ
Published 7 ಏಪ್ರಿಲ್ 2018, 19:30 IST
Last Updated 7 ಏಪ್ರಿಲ್ 2018, 19:30 IST
ಉತ್ತಮ ಏರಿಕೆ ಕಂಡ ಷೇರುಪೇಟೆ
ಉತ್ತಮ ಏರಿಕೆ ಕಂಡ ಷೇರುಪೇಟೆ   

ಮುಂಬೈ: ದೇಶದ ಷೇರುಪೇಟೆ ವಹಿವಾಟು ಸತತ ಎರಡನೇ ವಾರವೂ ಸಕಾರಾತ್ಮಕ ಅಂತ್ಯ ಕಂಡಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ವಾರದಲ್ಲಿ 658 ಅಂಶ ಏರಿಕೆ ಕಂಡು 33,627 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 10,300 ಅಂಶಗಳ ಮಟ್ಟವನ್ನು ದಾಟಿ 218 ಅಂಶಗಳ ಏರಿಕೆಯೊಂದಿಗೆ 10,331 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿತು.

ADVERTISEMENT

ಜಾಗತಿಕ ವಾಣಿಜ್ಯ ಸಮರದ ಆರಂಭವಾಗುವ ಸಾಧ್ಯತೆ ಪ್ರಭಾವಕ್ಕೆ ಸಿಲುಕಿ ಐದು ದಿನಗಳ ವಹಿವಾಟಿನಲ್ಲಿ ಒಂದು ದಿನ ಸೂಚ್ಯಂಕ ಕುಸಿತ ಕಂಡಿತ್ತಾದರೂ, ಉಳಿದ ದಿನಗಳಲ್ಲಿ ಗೂಳಿ ಓಟವೇ ಜೋರಾಗಿತ್ತು.

ನಿರೀಕ್ಷೆಯಂತೆಯೇ ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಹಣಕಾಸು ನೀತಿ ಪರಾಮರ್ಶೆಯಲ್ಲಿ ಬಡ್ಡಿದರವನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಂಡಿತು.

ಚಿಲ್ಲರೆ ಹಣದುಬ್ಬರವನ್ನು ಶೇ 4 ರಲ್ಲಿ ನಿಯಂತ್ರಿಸುವ ಮತ್ತು 2018–19ರಲ್ಲಿ ಜಿಡಿಪಿ ಶೇ 7.4ರಷ್ಟು ವೃದ್ಧಿ ಕಾಣಲಿದೆ ಎನ್ನುವ ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ)ಆರ್ಥಿಕ ಮುನ್ನೋಟ ಹೂಡಿಕೆದಾರರ ಉತ್ಸಾಹವನ್ನು ಹೆಚ್ಚಿಸಿತು.

ಅಮೆರಿಕ ಮತ್ತು ಚೀನಾ ನಡುವೆ ವಾಣಿಜ್ಯ ಬಿಕ್ಕಟ್ಟು ತೀವ್ರಗೊಂಡಿರುವುದರಿಂದ ಜಾಗತಿಕ ಷೇರುಪೇಟೆಗಳಲ್ಲಿ ಕಂಡು ಬಂದ ಕುಸಿತವು, ಬುಧವಾರ ದೇಶಿ ಪೇಟೆಯ ಮೇಲೂ ನಕಾರಾತ್ಮಕ ಪರಿಣಾಮ ಬೀರಿತ್ತು. ಇದರಿಂದ ಸೂಚ್ಯಂಕ 351 ಅಂಶ ಕುಸಿಯುವಂತಾಗಿತ್ತು. ನಂತರ ಗುರುವಾರ ಮತ್ತು ಶುಕ್ರವಾರದ ವಹಿವಾಟಿನಲ್ಲಿ ಒಟ್ಟಾರೆ 607 ಅಂಶಗಳಷ್ಟು ಏರಿಕೆ ದಾಖಲಿಸಿತು.

ನಿಲ್ಲದ ಸಮರ: ಚೀನಾದ ಸರಕುಗಳ ಆಮದು ನಿರ್ಬಂಧಿಸಲು ಹೆಚ್ಚುವರಿಯಾಗಿ ₹ 6.50 ಲಕ್ಷ ಕೋಟಿ ಮೊತ್ತದ ಸುಂಕ ವಿಧಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬೆದರಿಕೆ ಒಡ್ಡಿದ್ದಾರೆ.

ಅಮೆರಿಕದ ಈ ಹೊಸ ವ್ಯಾಪಾರ ನಿರ್ಬಂಧ ಪ್ರಸ್ತಾವದ ವಿರುದ್ಧ ಯಾವುದೇ ಬೆಲೆ ತೆತ್ತಾದರೂ ಹೋರಾಟ ನಡೆಸುವುದಾಗಿ ಚೀನಾ ಎಚ್ಚರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.