ADVERTISEMENT

ಎಂಎನ್‌ಪಿ: ಗ್ರಾಹಕನೇ ದೊರೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2011, 19:30 IST
Last Updated 19 ಮಾರ್ಚ್ 2011, 19:30 IST

ನವದೆಹಲಿ (ಐಎಎನ್‌ಎಸ್): ಸೇವಾ ಸಂಸ್ಥೆ ಬದಲಿಸಿದರೂ, ಮೂಲ ಮೊಬೈಲ್ ಸಂಖ್ಯೆಯನ್ನೇ ಉಳಿಸಿಕೊಳ್ಳಬಹುದಾದ ‘ಎಂಎನ್‌ಪಿ’ (ಮೊಬೈಲ್ ನಂಬರ್ ಫೊರ್ಟಬಿಲಿಟಿ) ಸೇವೆಯಿಂದ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಿದೆ.

ಈ ಹಿಂದೆ ಗ್ರಾಹಕ ದೂರುಗಳನ್ನು ನಿಧಾನವಾಗಿ ಪರಿಶೀಲಿಸುತ್ತಿದ್ದ ಸೇವಾ ಸಂಸ್ಥೆಗಳು ಈಗ ತ್ವರಿತವಾಗಿ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಮತ್ತೊಂದು ಸಂಸ್ಥೆಗೆ ಗ್ರಾಹಕ ತನ್ನ ನಿಷ್ಠೆ ಬದಲಿಸಿಕೊಳ್ಳುವುದನ್ನು ತಪ್ಪಿಸಲು ಹಲವಾರು ಮೌಲ್ಯವರ್ಧಿತ ಸೇವೆಗಳನ್ನು ಪ್ರಕಟಿಸಲಾಗಿದೆ.  ಹೀಗಾಗಿ ಇಲ್ಲಿ ಗ್ರಾಹಕನೇ ದೊರೆಯಾಗಿದ್ದಾನೆ. ಸಂಪರ್ಕ ಜಾಲದ ಸಮಸ್ಯೆ, ಅಗ್ಗದ ಕರೆ ದರ, ಉಚಿತ ಎಸ್‌ಎಂಎಸ್ ಹೀಗೆ ಹೊಸ ಹೊಸ  ಪ್ಯಾಕೇಜ್‌ಗಳನ್ನು ಸಂಸ್ಥೆಗಳು ಒಂದರ ಹಿಂದೊಂದು ಘೋಷಿಸಲು ಆರಂಭಿಸಿವೆ.  ‘ಎಂಎನ್‌ಪಿ’ಯಿಂದ ನಿಜವಾಗಿಯೂ ಅನುಕೂಲವಾಗಿರುವುದು ಗ್ರಾಹಕರಿಗೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

ಕಳೆದ ಜನವರಿ 20ರಿಂದ ‘ಎನ್‌ಎಂಪಿ’ ಸೇವೆ ಪ್ರಾರಂಭವಾಗಿದ್ದು, ಇದುವರೆಗೆ ದೇಶವ್ಯಾಪಿ 3.8 ದಶಲಕ್ಷ ಚಂದಾದಾರರು ಹೊಸ ಸೇವೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಸದ್ಯ ದೇಶದಲ್ಲಿ 771 ದಶಲಕ್ಷ ಮೊಬೈಲ್  ಸಂಪರ್ಕಗಳಿವೆ.

‘ಎಂಎನ್‌ಪಿ’ ಜಾರಿಗೊಂಡ ನಂತರ ಮೊಬೈಲ್ ಕಂಪೆನಿಗಳು ತಮ್ಮ ಸೇವಾ ಗುಣಮಟ್ಟವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಿವೆ ಎನ್ನುತ್ತಾರೆ  ಭಾರತೀಯ ದೂರವಾಣಿ ಸೇವಾ ಪೂರೈಕೆದಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಸ್.ಸಿ ಖನ್ಹಾ.‘ಬಿಎಸ್‌ಎನ್‌ಎಲ್’ ‘ಎಂಎನ್‌ಪಿ’ ಸೇವೆ ಜಾರಿಯಾದ ನಂತರ,  ತನ್ನ ಪೂರ್ವ ಪಾವತಿ ಹಾಗೂ ನಂತರ ಪಾವತಿ ಗ್ರಾಹಕರ ಮೊದಲ ತಿಂಗಳ   ಶುಲ್ಕದಲ್ಲಿ  ಕ್ರಮವಾಗಿ ್ಙ 100 ಹಾಗೂ ್ಙ50  ಕಡಿತ ಮಾಡಿದೆ. ‘ಭಾರ್ತಿ ಏರ್‌ಟೆಲ್ ‘ಅಚ್ಚರಿ’ಯ ಉಚಿತ ಕರೆ  ಹಾಗೂ ‘ಎಸ್‌ಎಂಎಸ್’ ಕೊಡುಗೆ ಪ್ರಕಟಿಸಿದೆ. ‘ಐಡಿಯಾ’ ಸಂಸ್ಥೆ        ‘ನೊ ಐಡಿಯಾ-ಗೆಟ್ ಐಡಿಯಾ’ ಅಭಿಯಾನ ಪ್ರಾರಂಭಿಸಿದೆ. ವೊಡಾಫೋನ್ ದೇಶವ್ಯಾಪಿ ‘ಎಂಎನ್‌ಪಿ’ ಪ್ರಚಾರ ಆಂದೋಲನ ನಡೆಸುತ್ತಿದೆ.

ಇದುವರೆಗಿನ ಅಂಕಿ ಅಂಶಗಳಂತೆ ‘ಐಡಿಯಾ’ ಮತ್ತು ವೋಡಾಫೋನ್ ಸಂಸ್ಥೆಗಳಿಗೆ ಹೆಚ್ಚಿನ ಗ್ರಾಹಕರು ಸೇವೆ ಬದಲಿಸಿಕೊಂಡಿದ್ದಾರೆ. ಬಿಎಸ್‌ಎನ್‌ಎಲ್ ಅತಿ ಹೆಚ್ಚಿನ ಚಂದಾದಾರರನ್ನು ಕಳೆದುಕೊಂಡಿದೆ. ಆದರೆ, ಮೊಬೈಲ್ ಕಂಪೆನಿಗಳು ಏನೆಲ್ಲಾ ತಂತ್ರಗಳನ್ನು ಅನುಸರಿಸಿದರೂ, ಒಟ್ಟು ಗ್ರಾಹಕರಲ್ಲಿ ಸೇವಾ ಸಂಸ್ಥೆಯನ್ನು ಬದಲಿಸಿಕೊಳ್ಳುವವರ ಸಂಖ್ಯೆ ಶೇ 8ನ್ನು ದಾಟುವುದಿಲ್ಲ ಎನ್ನುತ್ತಾರೆ ಭಾರತೀಯ ಮೊಬೈಲ್ ಸೇವಾ ಸಂಸ್ಥೆಗಳ ಒಕ್ಕೂಟದ (ಸಿಒಎಐ) ನಿರ್ದೇಶಕ ರಾಜನ್ ಎಸ್. ಮ್ಯಾಥ್ಯೂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.