ADVERTISEMENT

`ಎಂಎಸ್‌ಎಂಇ'ಗೆ ವಿಶೇಷ ಪ್ಯಾಕೇಜ್

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2013, 19:59 IST
Last Updated 2 ಏಪ್ರಿಲ್ 2013, 19:59 IST

ನವದೆಹಲಿ(ಪಿಟಿಐ): ಮಂದಗತಿಯಲ್ಲಿರುವ ದೇಶದ ಆರ್ಥಿಕ ವ್ಯವಸ್ಥೆಗೆ ಶಕ್ತಿ ತುಂಬುವ ಸಲುವಾಗಿ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮ (ಎಂಎಸ್‌ಎಂಇ)ಗಳಿಗಾಗಿ `ವಿಶೇಷ ಪ್ರೋತ್ಸಾಹ ಯೋಜನೆ'ಯನ್ನು `ಎಂಎಸ್‌ಎಂಇ' ಸಚಿವಾಲಯ ರೂಪಿಸುತ್ತಿದೆ ಎಂದು ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ದೇಶದ ರಫ್ತು ಚಟುವಟಿಕೆಗೆ `ಎಂಎಸ್‌ಎಂಇ' ವಲಯದ ಕೊಡುಗೆ ಮೊದಲು ಶೇ 40ರಷ್ಟಿತ್ತು. ಈಗ ಶೇ 36ಕ್ಕಿಳಿದಿದೆ. ಈ ವಲಯದ ಉತ್ಪನ್ನಗಳಿಗೆ ದೇಶ-ವಿದೇಶದ ಮಾರುಕಟ್ಟೆಗಳಲ್ಲಿ ಬೇಡಿಕೆ ತಗ್ಗಿರುವುದೇ ಸಾಧನೆಯಲ್ಲಿನ ಹಿನ್ನಡೆಗೆ ಕಾರಣ ಎಂದರು.

ಮತ್ತೆ ಮೊದಲಿನ ಮಟ್ಟಕ್ಕೆ ಬರುವ ಸಲುವಾಗಿ `ಎಂಎಸ್‌ಎಂಇ'ಕ್ಕೆ ಹೆಚ್ಚಿನ ಉತ್ತೇಜನ ನೀಡಬೇಕಿದ್ದು, ವಿಶೇಷ ಪ್ಯಾಕೇಜ್‌ಗೆ ರೂಪುರೇಷೆ ನೀಡುವಲ್ಲಿ ಸಚಿವಾಲಯದ ಅಧಿಕಾರಿಗಳು ಮಗ್ನರಾಗಿದ್ದಾರೆ ಎಂದು ವಿವರಿಸಿದರು.

11ನೇ ಪಂಚವಾರ್ಷಿಕ ಯೋಜನೆಯಲ್ಲಿ `ಎಂಎಸ್‌ಎಂಇ'ಗೆ  ರೂ.11,000 ಕೋಟಿ  ಮೀಸಲಿಟ್ಟಿದ್ದರೆ, 12ನೇ ಪಂಚವಾರ್ಷಿಕ ಅವಧಿಗೆ ರೂ. 24,000 ಕೋಟಿಗೆ ಹೆಚ್ಚಿಸಲಾಗಿದೆ. ಮುಂಬರುವ ದಿನಗಳಲ್ಲಿ ಪ್ರತಿ ಜಿಲ್ಲೆಯಲ್ಲಿಯೂ ಹೊಸದಾಗಿ 100 ಎಂಎಸ್‌ಎಂಇ ಘಟಕಗಳ ಸ್ಥಾಪನೆ ಗುರಿ ಇಟ್ಟುಕೊಳ್ಳಲಾಗಿದೆ ಎಂದರು.

ಬಡ್ಡಿ ದರ ತಗ್ಗಿಸಲು ಆಗ್ರಹ
ಟೋಕಿಯೊ(ಪಿಟಿಐ):
ಆರ್ಥಿಕ ಪ್ರಗತಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಅಲ್ಪಾವಧಿ ಬಡ್ಡಿದರ ತಗ್ಗಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ)ಗೆ ಒತ್ತಾ ಯಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಹೇಳಿದರು.

ಗ್ರಾಹಕ ಬೆಲೆ ಸೂಚ್ಯಂಕ ಆಧರಿಸಿದ (ಸಿಪಿಐ) ಚಿಲ್ಲರೆ ಹಣದುಬ್ಬರ ಏರಿಕೆ ಆಗಿರುವುದರಿಂದ ಚಾಲ್ತಿ ಖಾತೆ ಕೊರತೆ    (ಸಿಎಡಿ) ಹೆಚ್ಚಿದೆ. ಆದರೆ, ಸಗಟು ಬೆಲೆ ಸೂಚ್ಯಂಕ(ಡಬ್ಲ್ಯುಪಿಐ) ಆಧರಿಸಿದ ಹಣದುಬ್ಬರ ಇಳಿದಿದೆ. ಈ ಅಂಶವನ್ನು `ಆರ್‌ಬಿಐ' ಪರಿಗಣಿಸಬೇಕು. ಸರ್ಕಾರ ಯಾವಾಗಲೂ ಆರ್ಥಿಕ ಪ್ರಗತಿಯ ಪರವಾಗಿರುತ್ತದೆ. ಬಡ್ಡಿದರ ತಗ್ಗಿಸುವಂತೆ ಮನವಿ ಸಲ್ಲಿಸಲಾಗುವುದು ಎಂದು ಅವರು ಮಂಗಳವಾರ ಇಲ್ಲಿ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದರು. `ಆರ್‌ಬಿಐ' ಮೇ 3ರಂದು ಹಣಕಾಸು ನೀತಿ ಪರಾಮರ್ಶೆ ಪ್ರಕಟಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.