ನವದೆಹಲಿ(ಪಿಟಿಐ): `ರಾಷ್ಟ್ರೀಯ ಸರಕು ತಯಾರಿಕಾ ಕ್ಷೇತ್ರ ಮತ್ತು ಬಂಡವಾಳ ಹೂಡಿಕೆ ವಲಯ~(ಎನ್‌ಎಂಐಜೆಡ್)ದಲ್ಲಿ, ಅದರಲ್ಲೂ ಮುಖ್ಯವಾಗಿ ತರಬೇತಿ ಮತ್ತು ಸಂಶೋಧನೆ ಕ್ಷೇತ್ರದಲ್ಲಿ ಬಂಡವಾಳ ಹೂಡುವಂತೆ ಬೆಲ್ಜಿಯಂ ಸರ್ಕಾರವನ್ನು ಭಾರತ ಕೋರಿದೆ.
`ಎನ್‌ಎಂಜೆಡ್~ ವಿಶ್ವ ದರ್ಜೆಯ ಮೂಲ ಸೌಕರ್ಯವನ್ನು ಹೊಂದಲಿದ್ದು, ಇದ ಅತಿದೊಡ್ಡ ಕೈಗಾರಿಕಾ ವಲಯವಾಗಿರಲಿದೆ. ಇಲ್ಲಿನ ಕೈಗಾರಿಕಾ ಚಟುವಟಿಕೆಗಳಿಗೆ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ರಿಯಾಯಿತಿಯೂ ಲಭಿಸಲಿದೆ. ಈ ವಲಯಕ್ಕೆ ಹೆಚ್ಚಿನ ಬೆಂಬಲ ಮತ್ತು ಪ್ರೋತ್ಸಾಹ ನೀಡುವ ಸಲುವಾಗಿ ಕಾರ್ಮಿಕರು ಮತ್ತು ಪರಿಸರ ನಿಯಮಗಳ ವಿಚಾರದಲ್ಲಿ ಉದಾರತೆಯನ್ನೂ ತೋರಲಾಗುವುದು ಎಂದು ಕೇಂದ್ರ ಸರ್ಕಾರ, ಬೆಲ್ಜಿಯಂನ ಗಮನ ಸೆಳೆಯಲೆತ್ನಿಸಿದೆ.
ಎರಡು ದಿನಗಳ ಭಾರತ ಪ್ರವಾಸಕ್ಕೆಂದು ಆಗಮಿಸಿರುವ ಬೆಲ್ಜಿಯಂ ಉಪ ಪ್ರಧಾನಿ ಡೀಡಿಯರ್ ರೇಂಡರ್ಸ್ ಅವರ ಜತೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಆನಂದ ಶರ್ಮಾ ಗುರುವಾರ ಮಾತುಕತೆ ನಡೆಸಿದರು.
ತ್ಯಾಜ್ಯ ವಿಲೇವಾರಿ, ಕೊಳಚೆ ನೀರಿನ ಸಂಸ್ಕರಣೆ ಮತ್ತು ಇಂಧನ ಕ್ಷೇತ್ರಗಳಲ್ಲಿ ತಮ್ಮ ದೇಶದ ಉದ್ಯಮದ ಕಾರ್ಯನಿರ್ವಹಣೆ ಉತ್ತಮವಾಗಿದ್ದು, ಈ ಕ್ಷೇತ್ರಗಳಲ್ಲಿ ತರಬೇತಿ ನೀಡಲು ಸಿದ್ಧ ಎಂದು ಬೆಲ್ಜಿಯಂ ಹೇಳಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದೇ ವೇಳೆ, ಔಷಧ ಕ್ಷೇತ್ರದ ಸಂಶೋಧನೆ ಮತ್ತು ಅಭಿವೃದ್ಧಿ ಕೆಲಸಗಳನ್ನು ಭಾರತದ ಕಂಪೆನಿಗಳಿಗೆ ಹೊರಗುತ್ತಿಗೆ ನೀಡುವಂತೆಯೂ ಸಚಿವ ಆನಂದ್ ಶರ್ಮಾ ಅವರು ಬೆಲ್ಜಿಯಂ ಉಪ ಪ್ರಧಾನಿಯ ಗಮನ ಸೆಳೆದಿದ್ದಾರೆ ಎಂದೂ ಅಧಿಕಾರಿ ಮಾಹಿತಿ ನೀಡಿದ್ದಾರೆ.
ರೈಲ್ವೆ ಆಧುನೀಕರಣ
ಬೆಲ್ಜಿಯಂನ ವಿದೇಶ ವ್ಯವಹಾರಗಳು, ವಿದೇಶಿ ವ್ಯಾಪಾರ ಮತ್ತು ಯೂರೋಪಿಯನ್ ವ್ಯವಹಾರಗಳ ಖಾತೆ ಸಚಿವರೂ ಆಗಿರುವ ಡೀಡಿಯರ್ ರೇಂಡಸ್‌ಆ ಅವರು ನಂತರ ರೈಲ್ವೆ ಭವನದಲ್ಲಿ ಸಚಿವ ಮುಕುಲ್ ರಾಯ್ ಅವರ ಜತೆ ಉಭಯ ದೇಶಗಳ ರೈಲ್ವೆ ಸೇವೆ ಮತ್ತು ನಿಲ್ದಾಣಗಳ ಆಧುನೀಕರಣ ಕುರಿತು ಮಾತುಕತೆ ನಡೆಸಿದರು. ನಂತರ ಪರಸ್ಪರ ಸಹಕಾರ ಒಡಂಬಡಿಕೆಗೆ ಸಹಿ ಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.