ADVERTISEMENT

ಏರಿಕೆ ಹಾದಿಗೆ ಮರಳಿದ ಚಿನ್ನ, ಬೆಳ್ಳಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2013, 19:59 IST
Last Updated 19 ಏಪ್ರಿಲ್ 2013, 19:59 IST

ಮುಂಬೈ(ಪಿಟಿಐ): ದೇಶದ ಚಿನಿವಾರ ಪೇಟೆಯಲ್ಲಿ ಬಂಗಾರದ ಬೆಲೆ ಮತ್ತೆ ಏರಿಕೆಯ ಹಾದಿಗೇ ಮರಳಿದೆ.ಗುರುವಾರ ಮುಂಬೈನಲ್ಲಿರೂ240, ನವದೆಹಲಿಯಲ್ಲಿರೂ250ರಷ್ಟು ಏರಿಕೆ ದಾಖಲಿಸಿದ್ದ ಚಿನ್ನ, ಮರುದಿನವೂ ಅದೇ ದಾರಿಯಲ್ಲಿ ಮುನ್ನಡೆಯಿತು.

ಮುಂಬೈನಲ್ಲಿ 10 ಗ್ರಾಂ ಸ್ಟ್ಯಾಂಡರ್ಡ್ ಚಿನ್ನ ಶುಕ್ರವಾರರೂ340ರಷ್ಟು ಬೆಲೆ ಹೆಚ್ಚಿಸಿಕೊಂಡುರೂ26,260ರಲ್ಲಿ ಮಾರಾಟವಾಯಿತು. ಅಪರಂಜಿ ಚಿನ್ನರೂ335ರಷ್ಟು ದುಬಾರಿಯಾಗಿರೂ26,395ರಲ್ಲಿ ವಹಿವಾಟು ನಡೆಸಿತು. ಸಿದ್ಧ ಬೆಳ್ಳಿರೂ90ರಷ್ಟು ಹೆಚ್ಚಳವಾಗಿ ಕೆ.ಜಿ.ಗೆರೂ46,125 ಧಾರಣೆ ಪಡೆಯಿತು.

ನವದೆಹಲಿಯಲ್ಲಿನ `ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್'(ಎಂಸಿಎಕ್ಸ್)ನಲ್ಲಿ ವಾಯಿದೆ ವಹಿವಾಟಿನಲ್ಲಿ ಜೂನ್ ವಿತರಣೆಯ 10 ಗ್ರಾಂ ಚಿನ್ನರೂ297(ಶೇ 1.14) ದುಬಾರಿಯಾಗಿರೂ26,421ರಲ್ಲಿಯೂ, ಆಗಸ್ಟ್ ವಿತರಣೆ ಸರಕುರೂ287 ಬೆಲೆ ಏರಿಸಿಕೊಂಡುರೂ25,987ರಲ್ಲಿ ವಹಿವಾಟಾಯಿತು.

ಕುಸಿತದ ಪರಿಣಾಮ
ಈ ವಾರದ ಮೊದಲ ದಿನ ದಿಢೀರನೆ ಕುಸಿಯಲಾರಂಭಿಸಿದ ಚಿನ್ನದ ಧಾರಣೆ, ಸತತ ನಾಲ್ಕು ದಿನಗಳ ಕಾಲ ಇಳಿಜಾರಿನಲ್ಲೇ ಸಾಗಿತ್ತು. ಆ ಮೂಲಕ ಹೂಡಿಕೆದಾರರಲ್ಲಿ ಆಸಕ್ತಿ ತಗ್ಗುವಂತೆ ಮಾಡಿತ್ತು. ಜತೆಗೆ ಚಿನ್ನ ಸಂಗ್ರಾಹರರೂ ದಾಸ್ತಾನು ಖಾಲಿ ಮಾಡಿಕೊಳ್ಳುವಂತೆ ದೊಡ್ಡ ಪ್ರಮಾಣದಲ್ಲಿ ಮಾರಲಾರಂಭಿಸಿದ್ದರು. ಇದೆಲ್ಲವೂ ಬಂಗಾರದ ಮೌಲ್ಯವನ್ನು ಒಟ್ಟು ಮೂರು ಸಾವಿರ ರೂಪಾಯಿಗಿಂತ ಧಿಕ ತಗ್ಗಿಸಿತ್ತು.

ಆದರೆ, ಬೆಲೆ ಕುಸಿತ ಚಿನ್ನಾಭರಣ ಪ್ರಿಯರಲ್ಲಿ ಖರೀದಿ ಸಂತಸ ಹೆಚ್ಚು ಮಾಡಿತ್ತು. ಮದುವೆಗೆ ಸಿದ್ಧತೆ ನಡೆಸುತ್ತಿದ್ದ ಕುಟುಂಬಗಳಲ್ಲಿ ನಿರಾಳ ಭಾವ ಮೂಡಿಸಿತ್ತು. ಇದು ಚಿನ್ನದ ಮಾರಾಟ ನಿಧಾನವಾಗಿ ಹೆಚ್ಚುವಂತೆ ಮಾಡಿದೆ. ಪರಿಣಾಮ ಮತ್ತೆ ಧಾರಣೆ ಏರಿಕೆಯ ಹಾದಿಗೆ ಮರಳಿದೆ' ಎಂದು ಮುಂಬೈ ಚಿನಿವಾರ ಪೇಟೆ ವರ್ತಕರು ಪ್ರತಿಕ್ರಿಯಿಸಿದ್ದಾರೆ.

ವಾಯಿದೆ ಪೇಟೆ ವದಂತಿ
ವಾಯಿದೆ ಪೇಟೆಯಲ್ಲಿನ ವರ್ತಕರು ಹುಟ್ಟುಹಾಕಿದ ವದಂತಿಗಳ ಕಾರಣದಿಂದಾಗಿಯೇ ಇತ್ತೀಚೆಗೆ ಚಿನ್ನದ ಧಾರಣೆಯಲ್ಲಿ ದಿಢೀರ್ ಕುಸಿತವಾಗಿದೆ ಎಂದು `ಜಾಗತಿಕ ಚಿನ್ನ ಸಮಿತಿ'(ಡಬ್ಲ್ಯುಜಿಸಿ) ವಿಶ್ಲೇಷಿಸಿದೆ.

ಬೆಲೆ ಕುಸಿತವಾದರೂ ಭಾರತ, ಚೀನಾ, ಅಮೆರಿಕ, ಜಪಾನ್ ಮತ್ತು ಯೂರೋಪ್‌ನಲ್ಲಿ ಚಿನ್ನಾಭರಣ ಮಾರಾಟದಲ್ಲಿ ಹೆಚ್ಚಳವಾಯಿತು. ಆದರೆ, ಬಂಗಾರದ ಸರಕು ಸರಬರಾಜು ಮಾತ್ರ ಮೊದಲಿನಷ್ಟೇ ಇದ್ದಿತು ಎಂದು ಬ್ರಿಟನ್ ಮೂಲದ `ಡಬ್ಲ್ಯುಜಿಸಿ'ಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಆರ್ಮ್ ಶಿಷ್ಮೇನಿಯನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT