ADVERTISEMENT

ಏ.5ಕ್ಕೆ ರಿಸರ್ವ್ ಬ್ಯಾಂಕ್ ಹಣಕಾಸು ನೀತಿ ಪ್ರಕಟ

ಪಿಟಿಐ
Published 21 ಮಾರ್ಚ್ 2018, 19:30 IST
Last Updated 21 ಮಾರ್ಚ್ 2018, 19:30 IST
ಉರ್ಜಿತ್‌
ಉರ್ಜಿತ್‌   

ಮುಂಬೈ: ಮುಂದಿನ ಹಣಕಾಸು ವರ್ಷಕ್ಕೆ (2018–19) ಸಂಬಂಧಿಸಿದಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಏಪ್ರಿಲ್‌ 4 ಮತ್ತು 5ರಂದು ಸಭೆ ಸೇರಿ ಅಲ್ಪಾವಧಿ ಬಡ್ಡಿ ದರಗಳ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ.

2018–19ರಲ್ಲಿ ಹಣಕಾಸು ನೀತಿ ಸಮಿತಿಯು ಆರು ಬಾರಿ ಸಭೆ ಸೇರಲಿದೆ. ಆರ್‌ಬಿಐ ಗವರ್ನರ್‌ ಉರ್ಜಿತ್‌ ಪಟೇಲ್‌ ನೇತೃತ್ವದ ‘ಎಂಪಿಸಿ’ಯ ಮೊದಲ ಸಭೆ ಏಪ್ರಿಲ್ ಮೊದಲ ವಾರದಲ್ಲಿ ನಡೆಯಲಿದೆ. ಕೊನೆಯ ಸಭೆ ಮುಂದಿನ ವರ್ಷದ ಫೆಬ್ರುವರಿ 5 ಮತ್ತು 6ರಂದು ನಡೆಯಲಿದೆ. ‘ಆರ್‌ಬಿಐ ಕಾಯ್ದೆ 1934’ರ ಪ್ರಕಾರ, ವರ್ಷಕ್ಕೆ ಕನಿಷ್ಠ ನಾಲ್ಕು ಬಾರಿ ಹಣಕಾಸು ಸಮಿತಿ ಸಭೆ ಕರೆಯಬೇಕಾಗುತ್ತದೆ. ಹಿಂದಿನ ಮೂರು ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಗಳಲ್ಲಿ ಆರ್‌ಬಿಐ, ಬಡ್ಡಿ ದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಂಡು ಬಂದಿದೆ. ಇದಕ್ಕೆ ಹಣದುಬ್ಬರ ಹೆಚ್ಚಳದ ಕಾರಣ ನೀಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಹಣದುಬ್ಬರ ಕುಸಿತದ ಹಾದಿಯಲ್ಲಿ ಇದೆ. ಚಿಲ್ಲರೆ ಹಣದುಬ್ಬರ ಆಧರಿಸಿದ ಗ್ರಾಹಕರ ಬೆಲೆ ಸೂಚ್ಯಂಕವು (ಸಿಪಿಐ) ಫೆಬ್ರುವರಿ ತಿಂಗಳಲ್ಲಿ 4 ತಿಂಗಳ ಕನಿಷ್ಠ ಮಟ್ಟವಾದ ಶೇ 4.44ಕ್ಕೆ ಇಳಿದಿದೆ. ಆಹಾರ ಪದಾರ್ಥಗಳು ಅಗ್ಗವಾಗಿರುವುದು ಮತ್ತು ಇಂಧನ ಬೆಲೆ ಇಳಿದಿರುವುದೇ ಇದಕ್ಕೆ ಕಾರಣ.

ಆರ್‌ಬಿಐ ತನ್ನ ಅಲ್ಪಾವಧಿ ಬಡ್ಡಿ ದರಗಳನ್ನು ಇಳಿಸಬೇಕು ಎಂದು ಉದ್ಯಮ ವಲಯ ಒತ್ತಾಯಿಸುತ್ತಿದೆ. ಏರುಗತಿಯಲ್ಲಿ ಇರುವ ಕೈಗಾರಿಕಾ ಉತ್ಪಾದನಾ ಸೂಚ್ಯಂಕಕ್ಕೆ (ಐಐಪಿ) ಚೇತರಿಕೆ ನೀಡಲು ಬಡ್ಡಿ ದರ ಕಡಿತ ಮಾಡಬೇಕು ಎಂಬುದು ಅದರ ನಿಲುವಾಗಿದೆ. ಚಿಲ್ಲರೆ ಮತ್ತು ಸಗಟು ಹಣದುಬ್ಬರವು ಕಡಿಮೆಯಾಗುತ್ತಿರುವುದರಿಂದ ಆರ್‌ಬಿಐ ಬಡ್ಡಿ ದರ ಕಡಿತದ ದೃಢ ನಿರ್ಧಾರ ಕೈಗೊಳ್ಳಬೇಕು ಎಂದು ಉದ್ಯಮಿಗಳು ನಿರಂತರವಾಗಿ ಒತ್ತಾಯಿಸುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.