ADVERTISEMENT

ಕಪ್ಪು ಹಣ: ಕ್ಷಮಾದಾನ ಯೋಜನೆಗೆ ಫಿಕ್ಕಿ ಸಲಹೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2012, 19:30 IST
Last Updated 26 ಜನವರಿ 2012, 19:30 IST

ನವದೆಹಲಿ (ಪಿಟಿಐ): ವಿದೇಶಗಳಲ್ಲಿ ಇರುವ ಭಾರಿ ಪ್ರಮಾಣದ ಕಪ್ಪು ಹಣವನ್ನು ಸ್ವದೇಶಕ್ಕೆ ಮರಳಿ ತರಲು ಕ್ಷಮಾದಾನ ಯೋಜನೆ ಜಾರಿಗೆ ತರಬೇಕು ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟವು (ಫಿಕ್ಕಿ) ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.

ವಿದೇಶಗಳಲ್ಲಿನ ಕಪ್ಪು ಹಣದ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕಾಗಿದೆ. ಯಾರು ಹಣ ಮರಳಿ ತರಲು ಬಯಸುವರೋ ಅವರಿಗೆ ಸೂಕ್ತ ರಕ್ಷಣೆ ನೀಡಬೇಕು ಮತ್ತು ಅವರ ಹೆಸರನ್ನು ಬಹಿರಂಗಪಡಿಸಬಾರದು ಎಂದು `ಫಿಕ್ಕಿ~ಯ ಹೊಸ ಅಧ್ಯಕ್ಷ ಆರ್. ವಿ. ಕನೋರಿಯಾ, ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ. 

ಸೂಕ್ತ ದಂಡದ ಜೊತೆ  ಕಪ್ಪು ಹಣವು ಸ್ವದೇಶಕ್ಕೆ ಮರಳಿ ಬಂದು, ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸದ್ಬಳಕೆ ಆದರೆ ಅದರಿಂದ ದೇಶಕ್ಕೆ ಒಳಿತಾಗಲಿದೆ. ಭಾರತೀಯರು ವಿದೇಶಗಳಲ್ಲಿ ಹಣ ಠೇವಣಿ ಇಟ್ಟಿರುವುದಕ್ಕೆ ಐತಿಹಾಸಿಕ ಕಾರಣಗಳಿವೆ. ಒಂದು ಹಂತದಲ್ಲಿ ತೆರಿಗೆ ದರಗಳು ಶೇ 97.75ರಷ್ಟು ಇದ್ದ ನಿದರ್ಶನಗಳೂ ನಮ್ಮಲ್ಲಿವೆ. ಹಣ ಗಳಿಸಿ  ತಮ್ಮ ಬಳಿ ಇಟ್ಟುಕೊಳ್ಳುವುದೇ ಅಪರಾಧ ಎಂಬಂತೆ ಪರಿಗಣಿಸಲಾಗುತ್ತಿತ್ತು.  ಇದೇ ಕಾರಣಕ್ಕೆ  ತೆರಿಗೆ ವ್ಯಾಪ್ತಿಗೆ ಒಳಪಡದ ಹಣವು ವಿದೇಶಿ ಬ್ಯಾಂಕ್‌ಗಳಿಗೆ ಹರಿದು ಹೋಗುತ್ತಿತ್ತು. ವಿನಿಮಯ ದರದ ಕಾರಣಕ್ಕೆ ಇಂತಹ ಹಣವು ದ್ವಿಗುಣಗೊಳ್ಳುತ್ತಿತ್ತು ಎಂದರು.

ಕಪ್ಪು ಹಣ ಮರಳಿ ತರುವ ಬಗ್ಗೆ ಪ್ರತಿಪಕ್ಷ, ನಾಗರಿಕ ಸಮಾಜ ಮತ್ತು ನ್ಯಾಯಾಲಯಗಳ ಒತ್ತಡದ ಹಿನ್ನೆಲೆಯಲ್ಲಿ  `ಕ್ಷಮಾದಾನ ಯೋಜನೆ~ಯು ಈ ಸಮಸ್ಯೆಗೆ ಪರಿಹಾರ ಒದಗಿಸಬಲ್ಲದು ಎಂದು ಕೆಲವರು ಪ್ರತಿಪಾದಿಸುತ್ತಿದ್ದಾರೆ. ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.