ADVERTISEMENT

ಕಾರು ಮಾರಾಟ ಚೇತರಿಕೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 19:59 IST
Last Updated 2 ಸೆಪ್ಟೆಂಬರ್ 2013, 19:59 IST
ಕಾರು ಮಾರಾಟ ಚೇತರಿಕೆ
ಕಾರು ಮಾರಾಟ ಚೇತರಿಕೆ   

ನವದೆಹಲಿ (ಪಿಟಿಐ):ದೇಶದ ಪ್ರಮುಖ ಕಾರು ತಯಾರಿಕಾ ಕಂಪೆನಿಗಳಾದ ಮಾರುತಿ ಸುಜುಕಿ, ಹುಂಡೈ ಮೋಟಾರ್, ಹೋಂಡಾ  ಆಗಸ್ಟ್ ತಿಂಗಳ ಮಾರಾಟದಲ್ಲಿ ಏರಿಕೆ ದಾಖಲಿಸಿವೆ. ಮಹೀಂದ್ರಾ ಅಂಡ್ ಮಹೀಂದ್ರಾ, ಟೊಯೊಟಾ, ಟಾಟಾ ಮೋಟಾರ್ಸ್ ಮಾರಾಟದಲ್ಲಿ ಇಳಿಕೆ ಕಂಡಿವೆ. ದ್ವಿಚಕ್ರ ವಾಹನ ತಯಾರಿಕಾ ಕಂಪೆನಿಗಳಾದ ಹೀರೊ ಮೋಟೊಕಾರ್ಪ್, ಹೋಂಡಾ ಮೋಟಾರ್ ಸೈಕಲ್ಸ್ ಅಂಡ್ ಸ್ಕೂಟರ್ ಇಂಡಿಯಾ ಮಾರಾಟ ಏರಿಕೆ ಕಂಡಿವೆ. 

ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ಆಗಸ್ಟ್‌ನಲ್ಲಿ ಒಟ್ಟಾರೆ 76,018 ಕಾರುಗಳನ್ನು ಮಾರಾಟ ಮಾಡಿದ್ದು ಶೇ 51.6ರಷ್ಟು ಪ್ರಗತಿ ದಾಖಲಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಕಂಪೆನಿ 50,129 ಕಾರುಗಳನ್ನು ಮಾರಾಟ ಮಾಡಿತ್ತು.  ಮಾರುತಿ-800, ಆಲ್ಟೊ, ಎ-ಸ್ಟಾರ್, ವ್ಯಾಗನ್-ಆರ್ ಸೇರಿದಂತೆ ಸಣ್ಣ ಕಾರುಗಳಿಗೆ ಬೇಡಿಕೆ ಹೆಚ್ಚಿದ್ದು ಶೇ 45.1ರಷ್ಟು ಪ್ರಗತಿ ದಾಖಲಾಗಿದೆ. ಒಟ್ಟಾರೆ 32,019 ಸಣ್ಣ ಕಾರುಗಳನ್ನು ಕಂಪೆನಿ ಮಾರಾಟ ಮಾಡಿದೆ. ಸ್ವಿಫ್ಟ್, ಎಸ್ಟಿಲೊ, ರಿಟ್ಚ್ ಮಾದರಿಗಳ ಮಾರಾಟ ಎರಡು ಪಟ್ಟು ಹೆಚ್ಚಿದೆ. ಸೆಡಾನ್ ಡಿಸೈರ್ ಬೇಡಿಕೆ 4 ಪಟ್ಟು ಹೆಚ್ಚಿದ್ದು ಒಟ್ಟು 13,723 ಕಾರುಗಳು ಮಾರಾಟವಾಗಿವೆ.

ಹೋಂಡಾ ಕಾರ್ಸ್‌ ಇಂಡಿಯಾ  ತಿಂಗಳ ಮಾರಾಟದಲ್ಲಿ ಏರಿಕೆ ದಾಖಲಿಸಿದೆ. ಇತ್ತಿಚೆಗೆ ಮಾರುಕಟ್ಟೆಗೆ ಬಿಡುಗಡೆಗೊಂಡ ಸೆಡಾನ್ ಅಮೇಜ್‌ಗೆ ಗ್ರಾಹಕರಿಂದ  ಉತ್ತಮ ಬೇಡಿಕೆ ವ್ಯಕ್ತವಾಗಿದೆ.   ಒಟ್ಟು ಮಾರಾಟ ಶೇ 63ರಷ್ಟು ಹೆಚ್ಚಿದ್ದು 8,913 ಕಾರುಗಳು ಮಾರಾಟವಾಗಿವೆ. ಹಬ್ಬಗಳ ಸಂದರ್ಭದಲ್ಲಿ ಅಮೇಜ್‌ಗೆ ಬೇಡಿಕೆ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದೆ ಎಂದು  ಕಂಪೆನಿಯ ಹಿರಿಯ ಉಪಾಧ್ಯಕ್ಷ ಜ್ಞಾನೇಶ್ವರ್ ಸೆನ್ ತಿಳಿಸಿದ್ದಾರೆ. 

ಪೋರ್ಡ್ ಇಂಡಿಯಾದ ತಿಂಗಳ ಮಾರಾಟ ಶೇ 2.14ರಷ್ಟು ಹೆಚ್ಚಿದೆ. `ಇಕೊ ಸ್ಪೋರ್ಟ್ಸ್ ಮಾದರಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ. ಕಂಪೆನಿ ಒಟ್ಟಾರೆ 7,840 ಕಾರುಗಳನ್ನು ಮಾರಾಟ ಮಾಡಿದೆ.

ಹುಂಡೈ ಕಂಪೆನಿ ದೇಶೀಯ ಮಾರುಕಟ್ಟೆಯಲ್ಲಿ ಒಟ್ಟು 28,311 ಕಾರುಗಳನ್ನು ಮಾರಾಟ ಮಾಡಿದೆ. `ಮಾರುಕಟ್ಟೆ ಅಸ್ಥಿರತೆ ಮುಂದುವರಿದಿದೆ. ಇದರಿಂದ ಗ್ರಾಹಕರ ಆತ್ಮವಿಶ್ವಾಸ ತಗ್ಗಿದೆ' ಎಂದು ಹುಂಡೈ ಮೋಟಾರ್‌ನ ಹಿರಿಯ ಉಪಾಧ್ಯಕ್ಷ ರಾಕೇಶ್ ಶ್ರೀವಾಸ್ತವ ಅಭಿಪ್ರಾಯಪಟ್ಟಿದ್ದಾರೆ.  ಫೋಕ್ಸ್‌ವ್ಯಾಗನ್ ಕಾರುಗಳ ಮಾರಾಟ ಶೇ 9ರಷ್ಟು ಹೆಚಿದ್ದು ಒಟ್ಟು 4,410 ಕಾರುಗಳು ಮಾರಾಟವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.