ADVERTISEMENT

ಕಾರು ಮಾರಾಟ ಸತತ 7ತಿಂಗಳು ಕುಸಿತ

ಉದ್ಯೋಗ ಕಡಿತ ಭೀತಿ: ಎಸ್‌ಐಎಎಂ

​ಪ್ರಜಾವಾಣಿ ವಾರ್ತೆ
Published 13 ಜೂನ್ 2013, 19:59 IST
Last Updated 13 ಜೂನ್ 2013, 19:59 IST

ನವದೆಹಲಿ(ಪಿಟಿಐ): ದೇಶದಲ್ಲಿ ಕಾರುಗಳ ಮಾರಾಟ ಮೇ ತಿಂಗಳಲ್ಲಿ ಶೇ 12.26ರಷ್ಟು ಕುಸಿತ ಕಂಡಿದೆ. ಏಳು ತಿಂಗಳಿಂದಲೂ ಕಾರು ಮಾರಾಟ ಸತತ ಇಳಿಮುಖವಾಗಿಯೇ ಸಾಗಿದೆ.

ದೇಶದ ವಾಹನ ಉದ್ಯಮ ಕ್ಷೇತ್ರದಲ್ಲಿ ಕಾರುಗಳ ಮಾರಾಟದಲ್ಲಿನ ಕುಸಿತ ಹೀಗೆ ನಿರಂತರವಾಗಿರುವುದನ್ನು ನೋಡಿದರೆ ಮುಂದಿನ ದಿನಗಳಲ್ಲಿ ಇದು ಉದ್ಯೋಗ ಕಡಿತ ಕ್ರಮಕ್ಕೂ ಕಾರಣವಾಗಬಹುದು ಎಂದು `ಭಾರತೀಯ ವಾಹನ ತಯಾರಿಕಾ ಕಂಪೆನಿಗಳ ಸಂಘಟನೆ'(ಎಸ್‌ಐಎಎಂ) ಕಳವಳ ವ್ಯಕ್ತಪಡಿಸಿದೆ.

`ಎಸ್‌ಐಎಎಂ' ಬಿಡುಗಡೆ ಮಾಡಿದ ಅಂಕಿ-ಅಂಶ ಪ್ರಕಾರ ಮೇ ತಿಂಗಳಲ್ಲಿ 1,43,216 ಕಾರು ಮಾರಾಟವಾಗಿದೆ. 2012ರ ಇದೇ ತಿಂಗಳು 1,63,222 ಕಾರುಗಳು ಮಾರಾಟವಾಗಿದ್ದವು.

ಈ ಬಾರಿ ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಶೇ 8.25, ಟಾಟಾ ಮೋಟಾರ್ಸ್ ಶೇ 48.60ರಷ್ಟು ಕುಸಿತ ಕಂಡಿವೆ. ಹೋಂಡಾ ಕಾರ್ಸ್ ಇಂಡಿಯಾ ಶೇ 9.31ರಷ್ಟು ಮತ್ತು ಹುಂಡೈ ಮೋಟಾರ್ ಇಂಡಿಯಾ ಶೇ 0.35ರಷ್ಟು ಅಲ್ಪ ಪ್ರಮಾಣದ ಏರಿಕೆ ದಾಖಲಿಸಿವೆ.

`2012ರ ನವೆಂಬರ್‌ನಿಂದಲೂ ಕಾರುಗಳ ಮಾರಾಟ ಕಡಿಮೆ ಆಗುತ್ತಲೇ ಬರುತ್ತಿದೆ. 2008-09ನೇ ಸಾಲಿನಲ್ಲಿ ಜಾಗತಿಕ ಆರ್ಥಿಕ ಹಿಂಜರಿತ ಇದ್ದ ಸಂದರ್ಭದಲ್ಲಿಯೂ ಇಂಥ ಪರಿಸ್ಥಿತಿ ಎದುರಾಗಿರಲಿಲ್ಲ. ಇದು ದೇಶದ ವಾಹನ ಉದ್ಯಮಕ್ಕೆ ನಿಜಕ್ಕೂ ಚಿಂತೆ ತಂದಿದೆ' ಎಂದು `ಎಸ್‌ಐಎಎಂ' ಮಹಾ ನಿರ್ದೇಶಕ ವಿಷ್ಣು ಮಾಥುರ್ ಇಲ್ಲಿ ಬುಧವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ಒಟ್ಟಾರೆ ಮಂದಗತಿ ಆರ್ಥಿಕ ಪಗ್ರತಿ, ಹಣದುಬ್ಬರ ಮತ್ತು ಬಡ್ಡಿದರ ಗರಿಷ್ಠ ಮಟ್ಟದಲ್ಲಿರುವುದು, ಅದೇ ವೇಳೆ ಗ್ರಾಹಕರ ಖರೀದಿ ಆಸಕ್ತಿ ತಗ್ಗಿರುವುದು, ಜತೆಗೆ ಉದ್ಯೋಗ ಅಭದ್ರತೆ ಭೀತಿಯೂ ಸೇರಿಕೊಂಡು ಕಾರು ಮಾರಾಟ ಕುಸಿಯುವಂತೆ ಮಾಡಿವೆ ಎಂದು ಅವರು ವಿಶ್ಲೇಷಿಸಿದ್ದಾರೆ. 1997-98ರ ಏಪ್ರಿಲ್‌ನಲ್ಲಿಯೂ ಕಾರು ಮಾರಾಟ ಶೇ 10.43ರಷ್ಟು ಕುಸಿದಿತ್ತು. ಆಗ 1,50,789 ಕಾರು ಮಾರಾಟವಾಗಿದ್ದವು.

ಮೇ ತಿಂಗಳಲ್ಲಿ 8,81,288 ಮೋಟಾರ್ ಬೈಕ್ ಮಾರಾಟವಾಗಿದ್ದು, ಶೇ 0.72ರಷ್ಟು ಕುಸಿತವಾಗಿದೆ. ಇದೇ ವೇಳೆ ಸ್ಕೂಟರ್‌ಗಳಿಗೆ ಮಾತ್ರ ಬೇಡಿಕೆ ಹೆಚ್ಚುತ್ತಿದೆ. 2012ರ ಮೇ ತಿಂಗಳಲ್ಲಿ 2.35 ಲಕ್ಷ ಸ್ಕೂಟರ್ ಮಾರಾಟವಾಗಿದ್ದರೆ, 2013ರ ಮೇನಲ್ಲಿ 2.66 ಲಕ್ಷಕ್ಕೇರಿದೆ. ಶೇ 13 ಪ್ರಗತಿ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.