ADVERTISEMENT

ಕಾರ್ಮಿಕರ ಭದ್ರತೆಗೆ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 19:40 IST
Last Updated 7 ಫೆಬ್ರುವರಿ 2012, 19:40 IST

ಬೆಂಗಳೂರು:ಕಾರ್ಮಿಕರ ಕೌಶಲ ಹೆಚ್ಚಳ, ಯುವಕರಿಗೆ ಉದ್ಯೋಗ, ಗಣಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಭದ್ರತೆ ಮತ್ತು ಇತರೆ ಉದ್ಯೋಗ ಕ್ಷೇತ್ರಗಳಲ್ಲಿ ಭದ್ರತೆ ಕುರಿತು ಪರಸ್ಪರ ಸಹಕರಿಸುವ ಉದ್ದೇಶದಿಂದ ಕೇಂದ್ರ ಕಾರ್ಮಿಕ ಇಲಾಖೆ ಅಮೆರಿಕದ ಕಾರ್ಮಿಕ ಇಲಾಖೆಯ ಜೊತೆ ಒಪ್ಪಂದ ಮಾಡಿಕೊಂಡಿದೆ.

ಕಾರ್ಮಿಕ ಕ್ಷೇತ್ರದಲ್ಲಿ ಸಹಕರಿಸುವ ಉದ್ದೇಶದಿಂದ ಜರ್ಮನಿ ಮತ್ತು ಅಪ್ಘಾನಿಸ್ತಾನದ ಜೊತೆಯೂ ಒಪ್ಪಂದಕ್ಕೆ ಬರಲಾಗಿದೆ. ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ ಕಾರ್ಮಿಕ ಇಲಾಖೆ ವಿದೇಶಗಳ ಜೊತೆ ಮಾಡಿಕೊಳ್ಳುತ್ತಿರುವ ಮೊದಲ ಒಪ್ಪಂದ ಇದಾಗಿದೆ.

ಇಲ್ಲಿನ `ಕುಮಾರಕೃಪಾ~ ಅತಿಥಿಗೃಹದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ, `ಈ ಒಪ್ಪಂದದ ಕುರಿತು ಸಚಿವ ಸಂಪುಟ ಈಗಾಗಲೇ ಒಪ್ಪಿಗೆ ನೀಡಿದೆ. ಒಪ್ಪಂದದ ಅನುಷ್ಠಾನಕ್ಕೆ ಅಗತ್ಯವಿರುವ ಹಣವನ್ನು 12ನೇ ಪಂಚವಾರ್ಷಿಕ ಯೋಜನೆಯಲ್ಲಿ ಮೀಸಲಿಡಲಾಗುವುದು~ ಎಂದರು.


ಒಪ್ಪಂದದ ಅಡಿ ಭಾರತ ಮತ್ತು ಅಮೆರಿಕ ನಡುವೆ ಪರಸ್ಪರ ಹಣಕಾಸಿನ ಸಹಾಯ ಇರುವುದಿಲ್ಲ. ಆದರೆ ನಾಲ್ಕು ವಿಷಯಗಳ ಕುರಿತು ವಿಚಾರ ಸಂಕಿರಣ, ಅಧಿಕಾರಿಗಳ ವಿನಿಮಯ ನಡೆಯಲಿವೆ. ಒಪ್ಪಂದ ಮೂರು ವರ್ಷಗಳ ಅವಧಿಯದ್ದಾಗಿದೆ ಎಂದು ತಿಳಿಸಿದರು.

ಖಾಸಗಿ ವಲಯದ ಕಾರ್ಮಿಕರಿಗೆ ಕನಿಷ್ಠ ಪಿಂಚಣಿ ನಿಗದಿ ಮಾಡುವ ಸಂಬಂಧ ಕಾರ್ಮಿಕ ಸಂಘಟನೆಗಳು ಮತ್ತು ಖಾಸಗಿ ಕಂಪೆನಿಗಳ ಜೊತೆ ಮಾತುಕತೆ ನಡೆಸಲಾಗಿದೆ. ಆದರೆ ಪಿಂಚಣಿ ನೀಡುವ ಸಂಬಂಧ ಹಣ ತೊಡಗಿಸಲು ಖಾಸಗಿ ಕಂಪೆನಿಗಳು ಹೆಚ್ಚಿನ ಆಸಕ್ತಿ ತೋರಿಸಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT