ADVERTISEMENT

ಕಿಂಗ್‌ಫಿಷರ್‌ಗೆ ಗಡುವು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2012, 19:30 IST
Last Updated 21 ಫೆಬ್ರುವರಿ 2012, 19:30 IST

ನವದೆಹಲಿ (ಪಿಟಿಐ): ಬ್ಯಾಂಕ್ ಖಾತೆ ಮುಟ್ಟುಗೋಲಿನ ಕಾರಣ ನೀಡಿ ಮಂಗಳವಾರ ಸುಮಾರು 40 ವಿಮಾನಗಳ ಹಾರಾಟ ರದ್ದುಗೊಳಿಸಿದ ಕಿಂಗ್‌ಫಿಷರ್ ಸಂಸ್ಥೆಗೆ, ವಿಮಾನ ಹಾರಾಟದ ಹೊಸ ವೇಳಾಪಟ್ಟಿಯನ್ನು 24 ಗಂಟೆಗಳೊಳಗೆ ಸಲ್ಲಿಸುವಂತೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಗಡುವು ವಿಧಿಸಿದೆ.
ಆದಾಯ ತೆರಿಗೆ ಇಲಾಖೆ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿರುವುದರಿಂದ ವಿಮಾನಗಳ ಸಂಚಾರ ರದ್ದುಗೊಳಿಸಲಾಗಿದೆ ಎಂಬ ಕಂಪೆನಿಯ ಸಮಜಾಯಿಷಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಡಿಜಿಸಿಎ ಸ್ಪಷ್ಟಪಡಿಸಿದೆ. ಇದೇ ವೇಳೆ, ಪ್ರಯಾಣಿಕರಿಗೆ ಇನ್ನಷ್ಟು ತೊಂದರೆ ತಪ್ಪಿಸುವ ಸಲುವಾಗಿ ಸಂಸ್ಥೆಯ ವಿರುದ್ಧ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯನ್ನೂ ಅದು ತಳ್ಳಿಹಾಕಿದೆ. ಏನೇ ಕ್ರಮ ಕೈಗೊಳ್ಳುವುದಾದರೂ ಸರ್ಕಾರದ ಜತೆ ಚರ್ಚಿಸಿದ ನಂತರ ನಿರ್ಧಾರಕ್ಕೆ ಬರಲಾಗುವುದು ಎಂದು ಡಿಜಿಸಿಎ ಮುಖ್ಯಸ್ಥ ಭರತ್ ಭೂಷಣ್ ಸ್ಪಷ್ಟಪಡಿಸಿದ್ದಾರೆ.

ಮತ್ತೊಂದೆಡೆ, ಕಿಂಗ್‌ಫಿಷರ್ ಸಂಸ್ಥೆಗೆ ಪರಿಹಾರ ಪ್ಯಾಕೇಜ್ ನೀಡುವ ಯಾವುದೇ ಪ್ರಸ್ತಾವವನ್ನು ಸೋಮವಾರವಷ್ಟೇ ತಳ್ಳಿಹಾಕಿದ್ದ ನಾಗರಿಕ ವಿಮಾನಯಾನ ಸಚಿವ ಅಜಿತ್ ಸಿಂಗ್, ಸರ್ಕಾರ ಕಂಪೆನಿಯ ಅಹವಾಲನ್ನು ಆಲಿಸಲಿದೆ ಎಂದು ಹೇಳಿದ್ದಾರೆ.

`ನಾವು ಅವರ ಅಹವಾಲು ಆಲಿಸಬೇಕಾಗಿದೆ. ಸಂಸ್ಥೆಯ ಮುಂದಿನ ಯೋಜನೆ  ಏನು ಎಂಬುದು ನಮಗೆ ಗೊತ್ತಿಲ್ಲ. ವಿಮಾನ ಹಾರಾಟ ವ್ಯತ್ಯಯವಾಗದಂತೆ ಹೇಗೆ ಕ್ರಮ ಕೈಗೊಳ್ಳುತ್ತಾರೋ ತಿಳಿಯಬೇಕಾಗಿದೆ. ಅಲ್ಲದೇ, ಸುರಕ್ಷಾ ಕ್ರಮಗಳ ಬಗ್ಗೆಯೂ ಸಂಸ್ಥೆ ಉತ್ತರಿಸಬೇಕಾಗಿದೆ~ ಎಂದಿದ್ದಾರೆ.

ADVERTISEMENT

ಈ ಮಧ್ಯೆ, ಸತತ ಐದನೇ ದಿನವಾದ ಮಂಗಳವಾರ ಕೂಡ ಪ್ರಯಾಣಿಕರು ಪರದಾಡಬೇಕಾಯಿತು.
ಹಳೆಯ ವೇಳಾಪಟ್ಟಿಗೆ ಬದಲಾಗಿ ಹೊಸ ವೇಳಾಪಟ್ಟಿಯನ್ನು 24 ತಾಸುಗಳೊಳಗೆ ಸಲ್ಲಿಸುವಂತೆ ಸಂಸ್ಥೆಗೆ ಸೂಚಿಸಲಾಗಿದೆ ಎಂದು ಡಿಜಿಸಿಎ ಮುಖ್ಯಸ್ಥ ಇ.ಕೆ.ಭರತ್ ಭೂಷಣ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ವಿಮಾನಗಳ ಹಾರಾಟದ ಪುನರಾರಂಭ ಕುರಿತು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಜಯ್ ಅಗರ್‌ವಾಲ್ ಹಾಗೂ ಇತರ ಉನ್ನತ ಅಧಿಕಾರಿಗಳೊಂದಿಗೆ ಎರಡು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ ನಂತರ ಈ ವಿಷಯ ತಿಳಿಸಿದರು.

`ಸದ್ಯ ಈ ಸಂದರ್ಭದಲ್ಲಿ ಸಂಸ್ಥೆಯ ವಿರುದ್ಧ ಕಠಿಣ ಕ್ರಮದ ಯೋಚನೆ ಬೇಡ. ಸಂಸ್ಥೆಯು ವಿಮಾನಗಳ ಮರು ಹಾರಾಟ ಆರಂಭಿಸಬೇಕೆಂಬುದು ನಮ್ಮ ಮೊದಲ ಆದ್ಯತೆ~ ಎಂದು ಭೂಷಣ್ ಸ್ಪಷ್ಟಪಡಿಸಿದ್ದಾರೆ.

64 ವಿಮಾನಗಳನ್ನು ಹೊಂದಿರುವ ಕಂಪೆನಿಯು ನವೆಂಬರ್- ಮಾರ್ಚ್ ಅವಧಿಗೆ ಪ್ರತಿದಿನ 400 ಹಾರಾಟಗಳನ್ನು ನಡೆಸಲು ಅನುಮತಿ ಪಡೆದಿತ್ತು. ಈಗ ಸಂಚರಿಸುತ್ತಿರುವ 28 ವಿಮಾನಗಳಿಂದ 175 ಹಾರಾಟಗಳನ್ನು ಮಾತ್ರ ನಡೆಸಬಹುದು ಎಂದಿದ್ದಾರೆ.

ಕಂಪೆನಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಹಿತೇಶ್ ಪಟೇಲ್ ಕೂಡ ಹಾಜರಿದ್ದ ಸಭೆಯಲ್ಲಿ ಸಿಬ್ಬಂದಿಯ ವೇತನ ಪಾವತಿ ವಿಳಂಬಕ್ಕೆ ಕಾರಣವೇನು ಎಂಬ ಬಗ್ಗೆಯೂ ಚರ್ಚೆ ನಡೆದಿದೆ.  ತಾವು ನಡೆಸಿದ ಚರ್ಚೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ವರದಿ ಸಲ್ಲಿಸುವುದಾಗಿ ಭೂಷಣ್ ತಿಳಿಸಿದ್ದಾರೆ.

ವಿಮಾನಯಾನ ನಿಯಮಾವಳಿ 140 (ಎ), 1937ರ ಅನುಸಾರ ಯಾವುದೇ ಪೂರ್ವನಿಗದಿತ ವಿಮಾನ ಸಂಚಾರ ರದ್ದುಗೊಳಿಸುವ ಮುನ್ನ ಸಂಸ್ಥೆಯು ಡಿಜಿಸಿಎ ಅನುಮತಿ ಪಡೆಯಬೇಕು. ಅದನ್ನು ಉಲ್ಲಂಘಿಸಿದರೆ ಕಟ್ಟಕಡೆಯ ಕ್ರಮವಾಗಿ ಸಂಸ್ಥೆಗೆ ನೀಡಲಾಗಿರುವ ಹಾರಾಟ ಪರವಾನಗಿ ರದ್ದುಗೊಳಿಸಬಹುದಾಗಿದೆ.

ನಾಲ್ಕೈದು ದಿನಗಳಲ್ಲಿ ಹಾರಾಟ ವಿಶ್ವಾಸ

ಆದಾಯ ತೆರಿಗೆ ಇಲಾಖೆಗೆ ರೂ 100 ಕೋಟಿಗೂ ಹೆಚ್ಚು ಬಾಕಿ ಪಾವತಿಸಬೇಕಿರುವ ಕಿಂಗ್‌ಫಿಷರ್ ಸಂಸ್ಥೆ, ಮಂಗಳವಾರ ರೂ 21 ಕೋಟಿ  ಪಾವತಿಸಿರುವಾಗಿ ತಿಳಿಸಿದೆ. ಇದೇ ವೇಳೆ ಮುಟ್ಟುಗೋಲು ಹಾಕಿಕೊಂಡಿರುವ ತನ್ನ ಖಾತೆಗಳ ಮೂಲಕ ವ್ಯವಹರಿಸಲು ತೆರಿಗೆ ಇಲಾಖೆ ಅವಕಾಶ ಮಾಡಿಕೊಡಲಿದೆ ಎಂಬ ವಿಶ್ವಾಸವನ್ನು  ವ್ಯಕ್ತಪಡಿಸಿದೆ.

ಕೆಲವು ವಿಮಾನಗಳನ್ನು ಯಾರಿಂದ ಭೋಗ್ಯಕ್ಕೆ ಪಡೆಯಲಾಗಿದೆಯೋ ಅವರಿಗೇ ಒಪ್ಪಿಸಿ, ನಷ್ಟದ ಭಾರ ತಗ್ಗಿಸಿಕೊಳ್ಳುವ ತನ್ನ ಯೋಚನೆಯನ್ನೂ ಸಂಸ್ಥೆಯು ಡಿಜಿಸಿಎ ಜತೆ ನಡೆದ ಸಭೆಯ ವೇಳೆ ಗಮನಕ್ಕೆ ತಂದಿದೆ ಎನ್ನಲಾಗಿದೆ.

ಸಂಸ್ಥೆಯು ಸೇವಾ ತೆರಿಗೆ ಬಾಕಿ ಉಳಿಸಿಕೊಂಡಿರುವ ಬಗ್ಗೆ, ಮೂಲದಲ್ಲೇ ಕಡಿತವಾಗುವ ತೆರಿಗೆಯನ್ನು ಪಾವತಿ ಮಾಡದಿರುವ ಬಗ್ಗೆ, ಭಾರತೀಯ ವಿಮಾನ ಪ್ರಾಧಿಕಾರಕ್ಕೆ ವಿಮಾನಯಾನ ಶುಲ್ಕ ನೀಡದಿರುವುದಕ್ಕೆ ಹಾಗೂ ತೈಲ ಕಂಪೆನಿಗಳ ಇಂಧನ ಶುಲ್ಕ ಬಾಕಿ ಉಳಿಸಿಕೊಂಡಿರುವ ಬಗ್ಗೆ ಡಿಜಿಸಿಎ ಮುಖ್ಯಸ್ಥರು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಭೆಯ ವಿವರಗಳನ್ನು ನೀಡಲು ಕಿಂಗ್‌ಫಿಷರ್ ಸಿಇಒ ಸಂಜಯ್ ಅಗರ್‌ವಾಲ್ ನಿರಾಕರಿಸಿದ್ದು, ರದ್ದುಗೊಳಿಸಿರುವ ವಿಮಾನಗಳ ಹಾರಾಟವನ್ನು ನಾಲ್ಕೈದು ದಿನಗಳಲ್ಲಿ ಪುನರಾರಂಭಿಸುವುದಾಗಿ ತಿಳಿಸಿದ್ದಾರೆ.

ಮತ್ತೊಂದೆಡೆ ವೇತನ ಪಾವತಿಗೆ ಒತ್ತಾಯಿಸಿ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಮೂರು ತಿಂಗಳುಗಳಿಂದ ಸ್ಥಗಿತಗೊಳಿಸಲಾಗಿದ್ದ ಕೋಲ್ಕತ್ತಾದಲ್ಲಿನ ಸೇವೆಯನ್ನು ಕಿಂಗ್‌ಫಿಷರ್ ಬುಧವಾರ ಆರಂಭಿಸುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.