ADVERTISEMENT

ಕಿಂಗ್‌ಫಿಷರ್; ಅ.5ರಿಂದ ಹಾರಾಟ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 19:30 IST
Last Updated 2 ಅಕ್ಟೋಬರ್ 2012, 19:30 IST

ನವದೆಹಲಿ (ಪಿಟಿಐ): ಆರ್ಥಿಕ ಮುಗ್ಗಟ್ಟಿನಿಂದ ಭಾಗಶಃ ಬೀಗಮುದ್ರೆ ಸ್ಥಿತಿ ತಲುಪಿರುವ ಕಿಂಗ್‌ಫಿಷರ್ ಏರ್‌ಲೈನ್ಸ್, ತನ್ನ ಸಿಬ್ಬಂದಿಗಳಿಗೆ ಬಾಕಿ ಉಳಿಸಿಕೊಂಡಿರುವ ಆರು ತಿಂಗಳ ವೇತವನ್ನು ಮುಂದಿನ ಎರಡು-ಮೂರು ದಿನಗಳಲ್ಲಿ ಪಾವತಿಸುವುದಾಗಿ ಹಾಗೂ ಶುಕ್ರವಾರದಿಂದ ವಿಮಾನ ಹಾರಾಟ ಪುನರಾರಂಭಿಸುವುದಾಗಿ ಹೇಳಿದೆ.

ಕಿಂಗ್‌ಫಿಷರ್ ಏರ್‌ಲೈನ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಜಯ್ ಅಗರ್‌ವಾಲ್, ಉಪಾಧ್ಯಕ್ಷ ಹಿತೇಶ್ ಪಟೇಲ್ ಅವರನ್ನೊಳಗೊಂಡ ಹಿರಿಯ ಅಧಿಕಾರಿಗಳ ತಂಡ ಮಂಗಳವಾರ ಇಲ್ಲಿ  ನಾಗರಿಕ ವಿಮಾನಯಾನ ಮಹಾನಿರ್ದೇಶನಾಯಲದ (ಡಿಜಿಸಿಎ) ಮುಖ್ಯಸ್ಥ ಅರುಣ್ ಮಿಶ್ರಾ ಅವರನ್ನು ಭೇಟಿಯಾಗಿ ಈ ಕುರಿತು ಚರ್ಚೆ ನಡೆಸಿತು.

ಸುಮಾರು 80 ಪೈಲೆಟ್‌ಗಳು ಮತ್ತು 270ಕ್ಕೂ ಹೆಚ್ಚು ಎಂಜಿನಿಯರ್‌ಗಳು ಮಾರ್ಚ್  ತಿಂಗಳಿಂದ ಬಾಕಿ ಉಳಿಸಿಕೊಂಡಿರುವ ವೇತನ ಪಾವತಿಗೆ ಆಗ್ರಹಿಸಿ  ಮುಷ್ಕರ ನಡೆಸುತ್ತಿದ್ದಾರೆ. ಇದರಿಂದ ಕಿಂಗ್‌ಫಿಷರ್ ಹಾರಾಟ ಭಾಗಶಃ ಸ್ಥಗಿತಗೊಂಡಿದೆ. ಅ. 4ರವರೆಗೆ ಮುಷ್ಕರ ನಡೆಯಲಿದ್ದು, ಆ ವರೆಗಿನ ಟಿಕೆಟ್ ಮಾರಾಟವನ್ನೂ ಸಂಸ್ಥೆ ಸ್ಥಗಿತಗೊಳಿಸಿದೆ. ಆದರೆ, ಅ.5ರಿಂದ ಹಾರಾಟ ಪುನರಾರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.

ವಿಮಾನ ಹಾರಾಟ ಭಾಗಶಃ ಸ್ಥಗಿತಗೊಂಡಿರುವುದರಿಂದ ಕಳೆದ ಜನವರಿಯಿಂದ ಇಲ್ಲಿಯವರೆಗೆ ಕಂಪೆನಿಗೆ ರೂ8 ಸಾವಿರ ಕೋಟಿಗಳಷ್ಟು ನಷ್ಟವಾಗಿದೆ. ಇದರ ಜತೆಗೆ ರೂ7 ಸಾವಿರ ಕೋಟಿಗಳಷ್ಟು ಸಾಲದ ಹೊರೆಯೂ ಸಂಸ್ಥೆಯ ಮೇಲಿದೆ. ಹಲವು ವಿಮಾನಗಳನ್ನು ಗುತ್ತಿಗೆ ನೀಡಿದ ಕಂಪೆನಿಗಳು ವಾಪಾಸ್ ತೆಗೆದುಕೊಂಡಿವೆ.
`ಪ್ರಯಾಣಿಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ. ಹಾಗಾಗಿ ಸುರಕ್ಷತೆ ಖಾತರಿಯಾಗದ ಹೊರತು ಕಿಂಗ್‌ಫಿಷರ್ ಹಾರಾಟಕ್ಕೆ ಅವಕಾಶ ನೀಡುವುದಿಲ್ಲ~ ಎಂದು ನಾಗರಿಕ ವಿಮಾನಯಾನ ಸಚಿವ ಅಜಿತ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಏರ್ ಇಂಡಿಯಾ ಮತ್ತು ಇಂಡಿಗೊ ಸಂಸ್ಥೆಗಳ ಅಧಿಕೃತ ಎಂಜಿನಿಯರ್‌ಗಳ ನೆರವು ಪಡೆದು ಕಿಂಗ್‌ಫಿಷರ್ ಹಾರಾಟ ನಡೆಸುವ ಸಾಧ್ಯತೆ ಕುರಿತು ಸಚಿವರು ಸೋಮವಾರ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ, ಕಿಂಗ್‌ಫಿಷರ್ ಅಧಿಕಾರಿಗಳು ಶುಕ್ರವಾರದಿಂದ ಹಾರಾಟ ಪ್ರಾರಂಭಿಸುವುದಾಗಿ `ಡಿಜಿಸಿಎ~ಗೆ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.