ADVERTISEMENT

ಕಿಂಗ್‌ಫಿಷರ್ ಏರ್‌ಲೈನ್ಸ್ ರೂ 651 ಕೋಟಿ ನಷ್ಟ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2012, 19:30 IST
Last Updated 11 ಆಗಸ್ಟ್ 2012, 19:30 IST
ಕಿಂಗ್‌ಫಿಷರ್ ಏರ್‌ಲೈನ್ಸ್  ರೂ 651 ಕೋಟಿ ನಷ್ಟ
ಕಿಂಗ್‌ಫಿಷರ್ ಏರ್‌ಲೈನ್ಸ್ ರೂ 651 ಕೋಟಿ ನಷ್ಟ   

ಮುಂಬೈ(ಪಿಟಿಐ): ಕಿಂಗ್‌ಫಿಷರ್ ಏರ್‌ಲೈನ್ಸ್‌ನ ಸಂಕಷ್ಟ ಹೆಚ್ಚುತ್ತಲೇ ಇದೆ. ಒಂದೆಡೆ ಪೈಲಟ್‌ಗಳ ಮುಷ್ಕರ, ಇನ್ನೊಂದೆಡೆ ಕಂಪೆನಿಯ ನಷ್ಟದ ಪ್ರಮಾಣ ದುಪ್ಪಟ್ಟು.ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಿಂಗ್‌ಫಿಷರ್ ಏರ್‌ಲೈನ್ಸ್ ರೂ. 650.80 ಕೋಟಿ ನಷ್ಟ ಅನುಭವಿಸಿದೆ.

2011-12ರ ಏಪ್ರಿಲ್-ಜೂನ್ ಅವಧಿಯಲ್ಲಿ 263.50 ಕೋಟಿಯಷ್ಟಿದ್ದ ನಷ್ಟದ ಪ್ರಮಾಣ, ಈ ವರ್ಷ ಶೇ 147ರಷ್ಟು ಹೆಚ್ಚಳವಾಗಿದ್ದು, ಕಂಪೆನಿಯ ಕಷ್ಟದ ಹೊರೆಯನ್ನು ದುಪ್ಪಟ್ಟುಗೊಳಿಸಿದೆ. ಸಿಬ್ಬಂದಿ ಮುಷ್ಕರದ ಹಿನ್ನೆಲೆಯಲ್ಲಿ ವಿಮಾನಗಳ ಹಾರಾಟ ರದ್ದಾಗಿದ್ದು, ಸಾಲದ ಬಡ್ಡಿದರ ಹೆಚ್ಚಿರುವುದರಿಂದ ನಷ್ಟ ಭಾರಿ ಪ್ರಮಾಣದ್ದಾಗಿದೆ.

ಷೇರುಪೇಟೆಯಲ್ಲಿ ನೋಂದಾಯಿತವಾಗಿರುವ ಮೂರು ವಿಮಾನ ಯಾನ ಸಂಸ್ಥೆಗಳಲ್ಲಿ ಮೊದಲ ತ್ರೈಮಾಸಿಕದಲ್ಲಿ ನಷ್ಟಕ್ಕೆ ಒಳಗಾಗಿರುವ ಸಂಸ್ಥೆ ಕಿಂಗ್‌ಫಿಷರ್ ಒಂದೇ ಆಗಿದೆ. ಇನ್ನೆರಡು ಷೇರುಪೇಟೆ ನೋಂದಾಯಿತ ಸಂಸ್ಥೆಗಳಲ್ಲಿ ಜೆಟ್ ಏರ್‌ವೇಸ್ ಮತ್ತು ಸ್ಪೈಸ್ ಜೆಟ್ ಏಪ್ರಿಲ್-ಜೂನ್ ಅವಧಿಯಲ್ಲಿ ಲಾಭ ಗಳಿಸಿವೆ.

ಕಳೆದ ಐದು ತ್ರೈಮಾಸಿಕಗಳಿಂದ ಸತತವಾಗಿ ನಷ್ಟದಲ್ಲಿದ್ದ ಜೆಟ್ ಮತ್ತು ಸ್ಪೈಸ್‌ಜೆಟ್, ಇಂಧನ ದರ ತುಸು ತಗ್ಗಿದ್ದರಿಂದ ನಿರ್ವಹಣಾ ವೆಚ್ಚದಲ್ಲಿ ಕಡಿತವಾಗಿದ್ದು ಮತ್ತು ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದರಿಂದ ಈ ಬಾರಿ ಲಾಭ ಗಳಿಸಲು ಸಾಧ್ಯವಾಗಿದೆ.

`ನಿರ್ವಹಣಾ ವೆಚ್ಚದಲ್ಲಿ ಕಡಿತವಾಗಿದ್ದರೂ, ಬಡ್ಡಿದರ ದುಬಾರಿಯಾಗಿದ್ದುದು, ರೂಪಾಯಿ ಅಪಮೌಲ್ಯ ಮತ್ತು ಸಾಕಷ್ಟು ವಿಮಾನಗಳ ಪ್ರಯಾಣ ರದ್ದಾಗಿದ್ದರ ಪರಿಣಾಮ ನಷ್ಟದ ಬಾಬ್ತು ಜಾಸ್ತಿಯಾಗಿದೆ~ ಎಂದು ಕಿಂಗ್‌ಫಿಷರ್ ಏರ್‌ಲೈನ್ಸ್ ಷೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸಿದ ಲೆಕ್ಕಪತ್ರದಲ್ಲಿ ವಿವರಿಸಿದೆ.ಅಚ್ಚರಿ ಬೆಳವಣಿಗೆ ಎಂದರೆ,  ಪ್ರಯಾಣಿಕರ ಪ್ರಮಾಣದಲ್ಲಿ ಹೆಚ್ಚಳವಾಗಿದ್ದರಿಂದ ಕಳೆದ ಎರಡು ವಾರಗಳಲ್ಲಿ ರೂ. 56 ಕೋಟಿಯಷ್ಟು ಲಾಭವಾಗಿದೆ ಎಂದು ಕಿಂಗ್‌ಫಿಷರ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.