ADVERTISEMENT

ಕಿಂಗ್‌ಫಿಷರ್ ರೆಡ್ ಸೇವೆ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2011, 19:30 IST
Last Updated 28 ಸೆಪ್ಟೆಂಬರ್ 2011, 19:30 IST
ಕಿಂಗ್‌ಫಿಷರ್ ರೆಡ್ ಸೇವೆ ಸ್ಥಗಿತ
ಕಿಂಗ್‌ಫಿಷರ್ ರೆಡ್ ಸೇವೆ ಸ್ಥಗಿತ   

ಬೆಂಗಳೂರು: ಅಗ್ಗದ ವಿಮಾನ ಯಾನ ಸಂಸ್ಥೆಯಾಗಿರುವ `ಕಿಂಗ್‌ಫಿಷರ್ ರೆಡ್~ನ ಸೇವೆ  ಸ್ಥಗಿತಗೊಳಿಸಲಾಗುವುದು ಎಂದು ಕಿಂಗ್‌ಫಿಷರ್ ಏರ್‌ಲೈನ್ಸ್ (ಕೆಎಫ್‌ಎ) ಮುಖ್ಯಸ್ಥ ವಿಜಯ್ ಮಲ್ಯ ಪ್ರಕಟಿಸಿದ್ದಾರೆ.

ಕಿಂಗ್‌ಫಿಷರ್‌ನ ಪೂರ್ಣ ಪ್ರಮಾಣದ ವಿಮಾನ ಯಾನ ಸೇವೆಗೆ ಸಾಕಷ್ಟು ಪ್ರಯಾಣಿಕರಿದ್ದಾರೆ. ಹೀಗಾಗಿ  ಅಗ್ಗದ ವಿಮಾನ ಯಾನ ರಂಗದಲ್ಲಿ ನಮ್ಮ ಅಂಗ ಸಂಸ್ಥೆಯಾಗಿರುವ `ಕಿಂಗ್‌ಫಿಷರ್ ರೆಡ್~ ಸೇವೆ ಮುಂದುವರೆಸಲು ನಾವು ಬಯಸುವುದಿಲ್ಲ. ಅದನ್ನು ಶೀಘ್ರದಲ್ಲಿಯೇ ರದ್ದುಪಡಿಸಲಾಗುವುದು ಎಂದು ಬುಧವಾರ ಇಲ್ಲಿ ಹೇಳಿದರು.  ಸಂಸ್ಥೆಯ ಸರ್ವ ಸದಸ್ಯರ ಸಭೆಯಲ್ಲಿ ಭಾಗವಹಿಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡುತ್ತಿದ್ದರು.

`ಕಿಂಗ್‌ಫಿಷರ್ ಕ್ಲಾಸ್~ ವರ್ಗದ್ಲ್ಲಲಿಯೇ ಪ್ರಯಾಣಿಸಲು ಸಾಕಷ್ಟು ಸಂಖ್ಯೆಯಲ್ಲಿ ಪ್ರಯಾಣಿಕರು ಇದ್ದಾರೆ ಎಂದು ನಾವು ನಂಬುತ್ತೇವೆ. `ಕಿಂಗ್‌ಫಿಷರ್ ರೆಡ್~ಗೆ ಹೋಲಿಸಿದರೆ `ಕಿಂಗ್‌ಫಿಷರ್ ಕ್ಲಾಸ್~ ಸೇವೆಯಲ್ಲಿಯೇ ಪ್ರಯಾಣಿಕರ ಸಂಖ್ಯೆ ಹೆಚ್ಚಿಗೆ ಇದೆ ಎಂದರು.

ತೀವ್ರ ಸ್ವರೂಪದ ಹಣದ ಮುಗ್ಗಟ್ಟಿಗೆ ಗುರಿಯಾಗಿರುವ ಕಿಂಗ್‌ಫಿಷರ್ ವಿಮಾನ ಯಾನ ಸಂಸ್ಥೆಯು ತನ್ನ ಸೇವೆ ಮುಂದುವರೆಸುವ ಕುರಿತು ವ್ಯಕ್ತವಾಗಿರುವ ಸಂದೇಹಗಳಿಗೆ ಪ್ರತಿಕ್ರಿಯಿಸಿರುವ ಮಲ್ಯ, ಕಿಂಗ್‌ಫಿಷರ್ ವಿಮಾನ ಯಾನ ಸಂಸ್ಥೆಯು ದೇಶದಲ್ಲಿ ಅತಿ ಹೆಚ್ಚು ಪ್ರಶಸ್ತಿ ಪಡೆದ ಸಂಸ್ಥೆಯಾಗಿದೆ. ದೇಶಿ ವಿಮಾನ ಯಾನ ಮಾರುಕಟ್ಟೆಯಲ್ಲಿ ಗಮನಾರ್ಹ ಎನ್ನಬಹುದಾದ ಶೇ 20ರಷ್ಟು ಪಾಲು ಹೊಂದಿದ್ದು, ಅತಿದೊಡ್ಡ ವಿಮಾನ ಯಾನ ಸಂಸ್ಥೆಯಾಗಿದೆ. ವಿಮಾನ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವುದರಿಂದ ಸಂಸ್ಥೆಯ ಭವಿಷ್ಯ ಉಜ್ವಲವಾಗಿದೆ. ಗುಣಮಟ್ಟದ ಉತ್ಪನ್ನ ಮತ್ತು ಸೇವೆಗಳಿಗೆ ಸಂಸ್ಥೆಯ ಸಾಕಷ್ಟು ಸಂಖ್ಯೆಯಲ್ಲಿ ಪ್ರಶಸ್ತಿಗೆ ಭಾಜನವಾಗಿದೆ ಎಂದು ಅವರು ಸಂಸ್ಥೆಯ ಷೇರುದಾರರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ರೂ 2000 ಕೋಟಿ ಸಂಗ್ರಹ: ಸಂಸ್ಥೆಯ ಹಣಕಾಸಿನ ಪರಿಸ್ಥಿತಿ ಬಗ್ಗೆ ಷೇರುದಾರರಲ್ಲಿ ಮೂಡಿರುವ ಅನುಮಾನಗಳನ್ನು ದೂರ ಮಾಡಲು ಯತ್ನಿಸಿರುವ ಮಲ್ಯ, ಸಂಸ್ಥೆಯ ವಿಮಾನ ಯಾನ ಸೇವೆ ಮುಂದುವರೆಸಲು ಹೆಚ್ಚು ಬಂಡವಾಳ ಕ್ರೋಡೀಕರಣ ಮಾಡಬೇಕಾಗಿದ್ದು ಈ ನಿಟ್ಟಿನಲ್ಲಿ ಗಂಭೀರ ಪ್ರಯತ್ನಗಳು ನಡೆದಿವೆ. `ಹಕ್ಕಿನ ಷೇರು~ಗಳ ಮೂಲಕ ರೂ 2000 ಕೋಟಿಗಳನ್ನು ಸಂಗ್ರಹಿಸಲಾಗುವುದು ಎಂದು ಹೇಳಿದ್ದಾರೆ.
 

ಹಕ್ಕಿನ  ಷೇರುಗಳು
ಸಂಸ್ಥೆಯು ತನ್ನ ಹಾಲಿ ಷೇರುದಾರರ ಮೂಲಕ ಹೆಚ್ಚುವರಿ ಷೇರುಗಳನ್ನು (ಸಂಪನ್ಮೂಲ) ಸಂಗ್ರಹಿಸುವುದಕ್ಕೆ `ಹಕ್ಕಿನ ಷೇರು~ ಎನ್ನುತ್ತಾರೆ. ಸಂಸ್ಥೆಯ ಷೇರುದಾರರು ಈ ಸಂದರ್ಭದಲ್ಲಿ ನಿರ್ದಿಷ್ಟ ಸಂಖ್ಯೆಯ ಹೊಸ ಷೇರುಗಳನ್ನು ಖರೀದಿಸುವ ಹಕ್ಕು ಹೊಂದಿರುತ್ತಾರೆ. ನಿರ್ದಿಷ್ಟ ಸಮಯದಲ್ಲಿ ನಿರ್ದಿಷ್ಟ ಬೆಲೆಗೆ ಈ ಷೇರುಗಳನ್ನು ಖರೀದಿಸಬೇಕಾಗುತ್ತದೆ.

ಈ `ಹಕ್ಕಿನ ಷೇರು~ಗಳು `ಐಪಿಒ~ಗಿಂತ ಭಿನ್ನವಾಗಿರುತ್ತವೆ. ಪ್ರಾಥಮಿಕ ಪೇಟೆಯಲ್ಲಿ ಆರಂಭಿಕ ಸಾರ್ವಜನಿಕ ನೀಡಿಕೆ (ಐಪಿಒ) ಮೂಲಕ ಬಂಡವಾಳ ಸಂಗ್ರಹಿಸಲಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT