ADVERTISEMENT

ಕುಸಿತದ ಹಾದಿಯಲ್ಲಿ ಕಾಳುಮೆಣಸು

ಕೈಹಿಡಿಯದ ಕನಿಷ್ಠ ದರ ನಿಗದಿ ಕ್ರಮ, ನೆರವಿಗೆ ಕಾಫಿ ಬೆಳೆಗಾರರ ಮೊರೆ

ಅದಿತ್ಯ ಕೆ.ಎ.
Published 10 ಮಾರ್ಚ್ 2018, 20:26 IST
Last Updated 10 ಮಾರ್ಚ್ 2018, 20:26 IST
ಕುಸಿತದ ಹಾದಿಯಲ್ಲಿ ಕಾಳುಮೆಣಸು
ಕುಸಿತದ ಹಾದಿಯಲ್ಲಿ ಕಾಳುಮೆಣಸು   

ಮಡಿಕೇರಿ: ಮಲೆನಾಡು ಜಿಲ್ಲೆಗಳಲ್ಲಿ ಕಾಳುಮೆಣಸು ಮಾರಾಟಕ್ಕೆ ಅಣಿಯಾಗಿದ್ದ ಬೆಳೆಗಾರರಿಗೆ ಈಗ ಆಘಾತವಾಗಿದೆ. ಧಾರಣೆಯು ದಿನದಿಂದ ದಿನಕ್ಕೆ ಕುಸಿತದ ಹಾದಿಯಲ್ಲಿದ್ದು ಬೆಳೆಗಾರರು ಕಂಗಾಲಾಗಿದ್ದಾರೆ.

ಕೊಡಗು, ಚಿಕ್ಕಮಗಳೂರು, ಹಾಸನದ ಕೆಲವು ತಾಲ್ಲೂಕುಗಳಲ್ಲಿ ಕಾಳು ಮೆಣಸನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಕಾಫಿ ಬೆಲೆ ಕುಸಿತದಿಂದ ಬೆಳೆಗಾರರು ನಷ್ಟದಲ್ಲಿದ್ದರು.

‘ಕಪ್ಪು ಬಂಗಾರ’ವೆಂದೇ ಕರೆಸಿಕೊಳ್ಳುವ ಕಾಳುಮೆಣಸು ಕೈಹಿಡಿಯಲಿದೆ ಎಂಬ ಆಶಾಭಾವನೆಯೂ ಈಗ ಹುಸಿಯಾಗಿದೆ ಎನ್ನುತ್ತಾರೆ ರೈತರು. ಗುಣಮಟ್ಟದ ಕಾಳುಮೆಣಸು ಬೆಳೆಗೆ ಕೊಡಗು ಹೆಸರುವಾಸಿ. ಪ್ರತಿ ವರ್ಷ 15 ಸಾವಿರ ಟನ್‌ ಉತ್ಪಾದನೆ ಆಗುತ್ತಿದೆ.

ADVERTISEMENT

ಕಳೆದ ವರ್ಷ ದೇಸಿ ಮಾರುಕಟ್ಟೆಯಲ್ಲಿ ಧಾರಣೆ ಕುಸಿದಿತ್ತು. ಶ್ರೀಲಂಕಾ, ವಿಯೆಟ್ನಾಂನಿಂದ ಕಳಪೆ ಗುಣಮಟ್ಟದ ಉತ್ಪನ್ನ ಖರೀದಿಸಿ, ಅದನ್ನು ಪುಡಿ ಮಾಡಿ ಸ್ಥಳೀಯ ಬೆಳೆಯೊಂದಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಅದಕ್ಕೆ ಪುಷ್ಟಿ ನೀಡುವಂತೆ ಪೊಲೀಸರ ದಾಳಿ ವೇಳೆ ಕೊಡಗಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯೊಂದರ ಗೋದಾಮಿನಲ್ಲಿ ವಿಯೆಟ್ನಾಂನಿಂದ ಆಮದು ಮಾಡಿಕೊಂಡಿದ್ದ ನೂರಾರು ಚೀಲ ಕಾಳುಮೆಣಸು ಪುಡಿ ದೊರೆತಿತ್ತು. ಆ ಸಂದರ್ಭದಲ್ಲಿ ದಿಢೀರ್‌ ಆಗಿ ಪ್ರತಿ ಕೆ.ಜಿ ಕಾಳುಮೆಣಸಿನ ದರವು ₹ 700ರಿಂದ ₹ 350ಕ್ಕೆ ಕುಸಿದು ಆತಂಕ ಸೃಷ್ಟಿಸಿತ್ತು.

ಬೆಳೆಗಾರರ ಮನವಿ ಮೇರೆಗೆ ಕೇಂದ್ರ ಸರ್ಕಾರವು ಕನಿಷ್ಠ ಆಮದು ದರ ನಿಗದಿಗೊಳಿಸಿ ಡಿಸೆಂಬರ್‌ನಲ್ಲಿ ಆದೇಶ ಹೊರಡಿಸಿತ್ತು. ಸಾಂಬಾರು ಮಂಡಳಿ ಪ್ರಸ್ತಾವದಂತೆ ₹ 500 ದರ ನಿಗದಿ ಮಾಡಲಾಗಿತ್ತು. ಬಳಿಕ ಧಾರಣೆಯು ₹ 470ರ ವರೆಗೂ ಏರಿಕೆ ಕಂಡಿತ್ತು. ಈಗ ಮತ್ತೆ ದರವು ₹ 320– 340ರ ಆಸುಪಾಸಿಗೆ ಬಂದಿದೆ. ಕೇಂದ್ರದ ಆದೇಶವು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬಂದಿಲ್ಲ ಎಂಬ ಕೊರಗು ಜಿಲ್ಲೆಯ ಬೆಳೆಗಾರರು, ವ್ಯಾಪಾರಸ್ಥರದ್ದು.

ಕಾರ್ಮಿಕರ ಕೊರತೆಯಿಂದ ಬಳ್ಳಿಗಳಲ್ಲಿ ಕಾಳುಮೆಣಸು ಹಸಿರಾಗಿರುವ ವೇಳೆಗೆ ಬೆಳೆಗಾರರು ಮಾರಾಟ ಮಾಡುತ್ತಾರೆ. ಕೇಂದ್ರದ ಆದೇಶದಿಂದ ಖರೀದಿದಾರರು ಲಾಭದ ನಿರೀಕ್ಷೆಯಲ್ಲಿ ಮುಂಗಡವಾಗಿ ಹಣ ಪಾವತಿಸಿದ್ದರು. ಅವರು ಫೆಬ್ರುವರಿ ಅಂತ್ಯಕ್ಕೆ ಕೊಯ್ಲು ಮಾಡಬೇಕಿತ್ತು. ದರ ಕುಸಿತದಿಂದ ವ್ಯಾಪಾರಸ್ಥರು ಕಾಫಿ ತೋಟಗಳತ್ತ ಸುಳಿಯುತ್ತಿಲ್ಲ.

ಕೊಯ್ಲಿಗೆ ಮುಂದಾದರೆ ಮತ್ತಷ್ಟು ನಷ್ಟವಾಗಲಿದ್ದು, ಪಾವತಿಸಿರುವ ಹಣ ವಾಪಸ್‌ ಬಾರದಿದ್ದರೂ ಚಿಂತೆಯಿಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಪ್ರತಿ ಕೆ.ಜಿ.ಗೆ ₹ 550ರಿಂದ 600ರ ತನಕ ಬೆಲೆ ಸಿಗಬಹುದೆಂಬ ನಿರೀಕ್ಷೆಯಲ್ಲಿ ಖರೀದಿದಾರರು ಹಣ ಪಾವತಿಸಿದ್ದರು.

ಅಧಿಕಾರಿಗಳೇ ಶಾಮೀಲು: ‘ಶ್ರೀಲಂಕಾದ ಮೂಲಕ ನೂರಾರು ಟನ್‌ ಕಳಪೆ ಗುಣಮಟ್ಟದ ಮೆಣಸು ಆಮದಾಗಿದೆ. ಶ್ರೀಲಂಕಾದ ಉತ್ಪನ್ನಕ್ಕೆ ಶೇ 8ರಷ್ಟು ತೆರಿಗೆಯಿದೆ. ಇತರೆ ದೇಶಗಳ ಉತ್ಪನ್ನಕ್ಕೆ ನಾಲ್ಕುಪಟ್ಟು ಹೆಚ್ಚು ತೆರಿಗೆ ವಿಧಿಸಲಾಗುತ್ತಿದ್ದು, ಶ್ರೀಲಂಕಾದ ಮೂಲಕ ಭಾರತಕ್ಕೆ ಕಳಪೆ ಗುಣಮಟ್ಟದ ಉತ್ಪನ್ನ ಬಂದು ಸೇರುತ್ತಿದೆ. ಈ ಅಕ್ರಮಕ್ಕೆ ಕೆಲವು ಅಧಿಕಾರಿಗಳೂ ಕೈಜೋಡಿಸಿರುವ ಸಾಧ್ಯತೆಯಿದೆ. ಸಮಗ್ರ ತನಿಖೆ ನಡೆಸ
ಬೇಕು’ ಎಂದು ಜಿಲ್ಲೆಯ ಬೆಳೆಗಾರರ ಸಂಘಟನೆಗಳು ಒತ್ತಾಯಿಸುತ್ತಿವೆ.

*
ಕಳ್ಳಮಾರ್ಗದ ಮೂಲಕ ಕಾಳುಮೆಣಸು ಆಮದಾಗುತ್ತಿರುವುದು ಇನ್ನೂ ನಿಂತಿಲ್ಲ. ಇದರಿಂದ ರಾಜ್ಯದ ಬೆಳೆಗಾರರು ತೊಂದರೆಗೆ ಸಿಲುಕಿದ್ದಾರೆ.
– ನಂದ ಸುಬ್ಬಯ್ಯ, ಅಧ್ಯಕ್ಷ, ಸಣ್ಣ ಬೆಳೆಗಾರರ ಸಂಘ, ಕೊಡಗು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.