ADVERTISEMENT

ಕುಸಿದ ಸೂಚ್ಯಂಕ; ಆತಂಕದಲ್ಲಿ ಹೂಡಿಕೆದಾರರು

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 18:30 IST
Last Updated 13 ಫೆಬ್ರುವರಿ 2011, 18:30 IST

 ಇತ್ತೀಚಿನ ದಿನಗಳಲ್ಲಿ ಷೇರುಪೇಟೆಯು ಹೆಚ್ಚಿನ ಅಸ್ಥಿರತೆಯನ್ನು ಪ್ರದರ್ಶಿಸುತ್ತಿದೆ. ದಿನದ ವಹಿವಾಟಿನಲ್ಲಿ ಏರಿಕೆ ಮತ್ತು ಇಳಿಕೆ ಅಥವಾ ಇಳಿಕೆ ಏರಿಕೆಗಳನ್ನು ಪ್ರದರ್ಶಿಸಿ ಎಲ್ಲರ ವಿಶ್ಲೇಷಣೆಗಳನ್ನು ದೃಢೀಕರಿಸುತ್ತಿದೆ. ಹಿಂದಿನ ವಾರದಲ್ಲಿ ಹಣದುಬ್ಬರದ ಏರಿಕೆ, ಬಡ್ಡಿದರದ ಹೆಚ್ಚಳ, ವಿದೇಶೀ ವಿತ್ತೀಯ ಸಂಸ್ಥೆಗಳ ಮಾರಾಟದ ಒತ್ತಡ ಮುಂತಾದ ನಕಾರಾತ್ಮಕವಾದ ಅಂಶಗಳೊಂದಿಗೆ ಗಾಳಿ ಸುದ್ದಿಗಳೂ ಸಹ ಒತ್ತಡವನ್ನು ಹೇರಿ ಹೂಡಿಕೆದಾರರಲ್ಲಿ ಭಯ ಮೂಡಿಸಿತ್ತು. ಈ ಮಧ್ಯೆ ಸಂವೇದಿ ಸೂಚ್ಯಂಕವು ಹದಿನಾರು ಸಾವಿರದ ಐದುನೂರರವರೆಗೂ ಕುಸಿಯಬಹುದೆಂಬ ಮಾಧ್ಯಮ ವರದಿಯು ಹೂಡಿಕೆದಾರರ ನಿದ್ದೆ ಕೆಡಿಸಿತಲ್ಲದೆ, ‘ಆಪತ್ತಿನಲ್ಲಿ ಅವಕಾಶ’ ಹುಡುಕುವ ಗುಣಕ್ಕೆ ತಡೆಯೊಡ್ಡಿತು. ಪ್ರಮುಖ ಕಂಪೆನಿಗಳು ನಿರೀಕ್ಷಿತ ಮಟ್ಟದ ಫಲಿತಾಂಶ ಪ್ರಕಟಿಸಿದ್ದರೂ ಪ್ರಭಾವಿಯಾಗಲಿಲ್ಲ.

ಶುಕ್ರವಾರದ ಮಧ್ಯಂತರದಲ್ಲಿ ಸಂವೇದಿ ಸೂಚ್ಯಂಕವು 17,295 ಪಾಯಿಂಟುಗಳನ್ನು ತಲುಪಿ ಕಳೆದ 8 ತಿಂಗಳ ಕನಿಷ್ಠ ಮಟ್ಟವನ್ನು ತಲುಪಿತು. ಈ ಹಂತದಲ್ಲಿ ಬಂಗಾರದಂತಹ ಕಂಪೆನಿಗಳನ್ನು ಕಡೆಗಣಿಸಲಾಯಿತು. ಆದರೆ ಮಧ್ಯಾಹ್ನ 12 ಗಂಟೆಯ ಸುಮಾರಿನಿಂದ ದಿಶೆ ಬದಲಿಸಿದ ಸಂವೇದಿ ಸೂಚ್ಯಂಕವು ಎಲ್ಲ ಬಗೆಯ ಷೇರುಗಳಲ್ಲಿ ಏರಿಕೆಯನ್ನು ಪ್ರದರ್ಶಿಸಿ ಸುಮಾರು 430 ಪಾಯಿಂಟುಗಳ ಏಕಮುಖ ಏರಿಕೆಯು, ಶೂನ್ಯ ಮಾರಾಟಗಾರರ ಕೊಳ್ಳುವಿಕೆಯ ಕಾರಣ ವಾತಾವರಣ ಬದಲಾಯಿಸಿತು. ಇತ್ತೀಚೆಗೆ ಭಾರತೀಯ ಪೇಟೆಗಳು ಜಾಗತಿಕ ಪೇಟೆಗಳನ್ನವಲಂಭಿಸದೆ ತಮ್ಮದೇ ಆದ ದಾರಿ ಕಂಡುಕೊಂಡಿವೆ.

ಒಟ್ಟಾರೆ ವಾರದಲ್ಲಿ 279 ಪಾಯಿಂಟುಗಳ ಇಳಿಕೆ ಪ್ರದರ್ಶಿಸಿರುವ ಸೂಚ್ಯಂಕ ತನ್ನೊಂದಿಗೆ ಮಧ್ಯಮ ಶ್ರೇಣಿ ಸೂಚ್ಯಂಕವನ್ನು 258 ಪಾಯಿಂಟುಗಳಷ್ಟು ಕೆಳಜಗ್ಗಿತು. ಶುಕ್ರವಾರದ ಏರಿಕೆ ಇಲ್ಲದಿದ್ದರೆ ಈ ಅಂಕಿ ಅಂಶಗಳು ಕಳಾಹೀನ ವಾತಾವರಣ ನಿರ್ಮಿಸುವಂತಿತ್ತು. ವಿದೇಶೀ ವಿತ್ತೀಯ ಸಂಸ್ಥೆಗಳು ಸತತವಾಗಿ ಎಲ್ಲಾ 5 ದಿನಗಳೂ ಮಾರಾಟ ಮಾಡಿ ಒಟ್ಟು ್ಙ2893 ಕೋಟಿ ಮೌಲ್ಯದ ಷೇರಿನಿಂದ ಹೊರಬಂದರೆ ಸ್ಥಳೀಯ ವಿತ್ತೀಯ ಸಂಸ್ಥೆಗಳು ್ಙ1708 ಕೋಟಿ ಮೌಲ್ಯದ ಷೇರನ್ನು ಖರೀದಿಸಿ ಸಮತೋಲನೆ ಪ್ರಯತ್ನ ಮಾಡಿವೆ ಪೇಟೆಯ ಬಂಡವಾಳೀಕರಣ ಮೌಲ್ಯವು ಕಳೆದ ವಾರದ ್ಙ 65 ಲಕ್ಷ ಕೋಟಿಯಿಂದ ಈ ವಾರ ್ಙ  62-97 ಲಕ್ಷ ಕೋಟಿಗೆ ಕುಸಿಯಿತು.

ಹೊಸ ಷೇರಿನ ವಿಚಾರ
* ಓಂಕಾರ್ ಸ್ಪೆಷಲಿಟೀ ಕೆಮಿಕಲ್ಸ್ ಲಿಮಿಟೆಡ್ ಕಂಪೆನಿಯು ಇತ್ತೀಚೆಗೆ ್ಙ 98 ರಂತೆ ಸಾರ್ವಜನಿಕ ವಿತರಣೆ ಮಾಡಿದ್ದು 10 ರಿಂದ ‘ಬಿ’ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಯಿತು. ಆರಂಭದ ದಿನ ್ಙ 42.50 ಯಿಂದ ್ಙ 101 ರವರೆಗೆ ಏರಿಳಿತ ಕಂಡುವಬಂತು.

*ಹ್ಯಾರಿಸನ್ ಮಲಯಾಳಂ ಕಂಪೆನಿಯ ಹೂಡಿಕೆ ವ್ಯವಹಾರವನ್ನು ಬೇರ್ಪಡಿಸಿ ಸೆಂಟಿನಾಲ್ ಟೀ ಅಂಡ್ ಎಕ್ಸ್‌ಪೋರ್ಟ್ಸ್ ಲಿಮಿಟೆಡ್‌ನಲ್ಲಿ ಸೇರಿಸಲಾಗಿದ್ದು, ಸೆಂಟಿನಾಲ್ ಟೀ ಅಂಡ್ ಎಕ್ಸ್‌ಪೋರ್ಟ್ಸ್ ಲಿ. 9 ರಿಂದ ‘ಟಿ’ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಯಿತು.

* ಕೃಷಿ ಉತ್ಪನ್ನಗಳ ವಿಭಾಗ, ಪೊಲಿಮರ್ಸ್ ವಿಭಾಗ ಮತ್ತು ಐಎಂಎಫ್‌ಎಲ್ ವಿಭಾಗಗಳನ್ನು ಜುಬಿಲಿಯಂಟ್ ಲೈಫ್ ಸೈನ್ಸಸ್‌ನಿಂದ ಬೇರ್ಪಡಿಸಿ. ಜುಬಿಲಿಯಂಟ್ ಇಂಡಸ್ಟ್ರೀಸ್‌ನಲ್ಲಿ ವಿಲೀನಗೊಳಿಸಲಾಗಿದ್ದು ಜುಬಿಲಿಯಂಟ್ ಇಂಡಸ್ಟ್ರೀಸ್ 14 ರಿಂದ ‘ಟಿ’ ವಿಭಾಗದಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.

* ಬಿಲ್ ಪವರ್ ಲಿಮಿಟೆಡ್‌ನ ಉತ್ಪಾದನಾ ಘಟಕವನ್ನು ಬೇರ್ಪಡಿಸಿ ಬಿಲ್‌ಎನರ್ಜಿ ಸಿಸ್ಟಂಸ್ ಲಿಮಿಟೆಡ್‌ನಲ್ಲಿ ವಿಲೀನಗೊಳಿಸಲಾಗಿದ್ದು ಈ ಷೇರನ್ನು 15 ರಿಂದ ‘ಟಿ’ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.

ಬೋನಸ್ ಷೇರಿನ ವಿಚಾರ

ಎಸಿಐಎಲ್ ಕಾಟನ್ ಇಂಡಸ್ಟ್ರೀಸ್ ಲಿ. ಕಂಪೆನಿಯು ನಡೆಸಬೇಕಿದ್ದ ಆಡಳಿತ ಮಂಡಳಿ ಸಭೆಯು 24ರ ಬದಲಾಗಿ 23ಕ್ಕೆ ನಡೆಯಲಿದ್ದು ಅಂದು ಬೋನಸ್ ಷೇರು ಪ್ರಕಟಿಸಿರುವ ಕಾರ್ಯಸೂಚಿ ಇದೆ.

ಲಾಭಾಂಶ ವಿಚಾರ
ಅಂಬಿಕಾ ಕಾಟನ್ ಮಿಲ್ಸ್ ಶೇ. 20 (ನಿಗದಿತ ದಿನ: 23.2.11) ಅಮೃಂತಾಜನ್ ಹೆಲ್ತ್‌ಕೇರ್ ಶೇ. 50 (ನಿ.ದಿ. 22.2.11) ಎ.ಕೆ. ಕ್ಯಾಪಿಟಲ್ ಶೇ. 30 (ನಿ.ದಿ. 1.3.11), ಡೈನಮೆಟಿಕ್ ಟೆಕ್ನಾಲಜಿ ಶೇ. 30, ಡಿಐಎಲ್ ಶೇ. 150 ಹೆಚ್.ಇ.ಜಿ. ಶೇ. 50 (ನಿ.ದಿ. 15.2.11) ಹನಿವೆಲ್ ಆಟೋ ಶೇ. 100 (ನಿ.ದಿ. 5.4.11), ಲಾಯಲ್ ಟೆಕ್ಸ್‌ಟೈಲ್ಸ್ ಶೇ. 100 (ನಿ.ದಿ. 24.2.11) ಮುಂದ್ರಾ ಪೋರ್ಟ್ ಅಂಡ್ ಸ್ಪೆಷಲ್ ಎಕನಾಮಿಕ್ ರೆನ್ ಶೇ. 25 (ಮುಖಬೆಲೆ ್ಙ 2)ಎಂ.ಒ.ಐ.ಎಲ್ ಶೇ. 25, ಪೇಜ್ ಇಂಡಸ್ಟ್ರೀಸ್, ಶೇ. 40 (ನಿ.ದಿ. 21.2.11) ರೂರಲ್ ಎಲೆಕ್ಟ್ರಫಿಕೇಷನ್ ಕಾರ್ಪೊರೇಷನ್ ಶೇ. 35, ಈ ಮಧ್ಯೆ ಶಿಪ್ಪಿಂಗ್ ಕಾರ್ಪೊರೇಷನ್ ಶೇ. 30ರ ಲಾಭಾಂಶ ಪ್ರಕಟಿಸಿ ಶುಕ್ರವಾರದಿಂದ ಲಾಭಾಂಶ ರಹಿತ ವಹಿವಾಟು ಆರಂಭವಾಗಿದೆ.

ಹಕ್ಕಿನ ಷೇರಿನ ವಿತರಣೆ
*ಕರೂರ್ ವೈಶ್ಯ ಬ್ಯಾಂಕ್ ಲಿ. ಪ್ರಕಟಿಸಿದ್ದ 2:5ರ ಅನುಪಾತದ ಹಕ್ಕಿನ ಷೇರು ಯೋಜನೆಗೆ 18ನೇ ಫೆಬ್ರುವರಿ ನಿಗದಿತ ದಿನವಾಗಿದ್ದು 17 ರಿಂದ ವಿನಾ ಹಕ್ಕಿನ ಷೇರು ಚಟುವಟಿಕೆ ಆರಂಭವಾಗಲಿದೆ. ಪ್ರತಿ ಷೇರಿಗೆ ್ಙ 150 ರಂತೆ ವಿತರಣೆ ಮಾಡಲಿರುವ ಈ ಹಕ್ಕಿನ ಷೇರು ಯೋಜನೆಯು ಫೆಬ್ರುವರಿ 28 ರಿಂದ ಮಾರ್ಚ್ 15 ರವರೆಗೆ ತೆರೆದಿರುತ್ತದೆ.

*ಇಐಹೆಚ್ ಲಿಮಿಟೆಡ್ ಕಂಪೆನಿ ವಿತರಿಸಲಿರುವ ್ಙ 2ರ ಮುಖಬೆಲೆಯ ಹಕ್ಕಿನ ಷೇರಿನ ಬೆಲೆಯು ್ಙ 65 ರಂತಿದ್ದು 5:11ರ ಅನುಪಾತದಲ್ಲಿರುತ್ತದೆ. ಫೆಬ್ರುವರಿ 22 ನಿಗದಿತ ದಿನವಾಗಿದ್ದು ಮಾರ್ಚ್ ಒಂದರಿಂದ 15 ರವರೆಗೆ ವಿತರಣೆ ತೆರೆದಿರುತ್ತದೆ.

*ಲೀ ಅಂಡ್ ನೀ ಸಾಪ್ಟ್‌ವೇರ್ ಎಕ್ಸ್‌ಪೋರ್ಟ್ಸ್ ಲಿ. 2:1ರ ಅನುಪಾತದಲ್ಲಿ ಹಕ್ಕಿನ ಷೇರು ವಿತರಿಸಲಿದ್ದು ಇತರೆ ವಿವರಗಳನ್ನು ಸಮಿತಿಯು ನಿರ್ಧರಿಸಲಿದೆ.

*ಮಹೀಂದ್ರ ಕಾಂಪೊಸಿಟ್ಸ್ ಕಂಪೆನಿಯು 14 ರಂದು ಹಕ್ಕಿನ ಷೇರು ವಿತರಣೆ ಯೋಜನೆ ಪರಿಶೀಲಿಸಲಿದೆ.
ಮುಖಬೆಲೆ ಸೀಳಿಕೆ ವಿಚಾರ

ಪ್ರತಿ ಷೇರಿಗೆ ್ಙ 660 ರಂತೆ ಕಳೆದ ಆಗಸ್ಟ್‌ನಲ್ಲಿ ಸಾರ್ವಜನಿಕ ವಿತರಣೆ ಮಾಡಿದ್ದ ಬಜಾಜ್ ಕಾರ್ಪ್ ಲಿಮಿಟೆಡ್‌ನ ಸಧ್ಯದ ್ಙ 5ರ ಮುಖಬೆಲೆ ಷೇರನ್ನು ್ಙ1ಕ್ಕೆ ಸೀಳಲು ನಿರ್ಧರಿಸಲಾಗಿದ್ದು ಇದಕ್ಕೆ ಷೇರುದಾರರ ಸಮ್ಮತಿಯನ್ನು ಅಂಚೆ ಮತದಾನದ ಮೂಲಕ ಪಡೆಯಲು ಯೋಜಿಸಲಾಗಿದೆ.

ಷೇರು ಹಿಂಕೊಳ್ಳುವಿಕೆ ವಿಚಾರ
* ರಿಲೈಯನ್ಸ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಕಂಪೆನಿಯು 14 ರಂದು ಷೇರು ಹಿಂಕೊಳ್ಳುವಿಕೆಯನ್ನು ಪರಿಶೀಲಿಸಲಿದೆ./

* ಝೀ ಎಂಟರ್‌ಟೇನ್‌ಮೆಂಟ್ ಕಂಪೆನಿಯು ಷೇರುಪೇಟೆಯ ಮೂಲಕ ಪ್ರತಿ ಷೇರಿಗೆ ಗರಿಷ್ಠ ್ಙ 126 ರವರೆಗೂ ಷೇರು ಹಿಂ-ಕೊಳ್ಳಲಿದೆ.    ್ಙ 700 ಕೋಟಿಯವರೆಗೂ ಇದಕ್ಕೆ ಉಪಯೋಗಿಸಿಕೊಳ್ಳಲು ನಿರ್ಧರಿಸಿದೆ.

ಕಂಪೆನಿ ಹೆಸರಿನಲ್ಲಿ ಬದಲಾವಣೆ
* ಸಾಯಿ ವೈರ್ಸ್‌ ಇಂಡಿಯಾ ಲಿಮಿಟೆಡ್ ಕಂಪೆನಿ ಹೆಸರನ್ನು ಕ್ರೊಯಿಟ್ರ್ ಇಂಡಸ್ಟ್ರೀಸ್ ಲಿಮಿಟೆಡ್ ಎಂದು ಬದಲಿಸಲಾಗಿದೆ.

* ಅರವಿಂದ್ ಕೆಮಿಕಲ್ಸ್ ಲಿಮಿಟೆಡ್ ಕಂಪೆನಿಯ ಹೆಸರನ್ನು ಗುಜರಾತ್ ಮೆಟಾಲಿಕ್ ಕೋಲ್ ಅಂಡ್ ಕೋಕ್ ಲಿಮಿಟೆಡ್ ಎಂದು ಬದಲಿಸಲಾಗಿದೆ.

ವಾರದ ಪ್ರಶ್ನೆ
ನ್ಯಾಷನಲ್ ಸ್ಪಾಟ್ ಎಕ್ಸ್‌ಚೇಂಜ್‌ನ ಚಟುವಟಿಕೆ ಏನು? ಇಲ್ಲಿ ವ್ಯವಹರಿಸುವ ಬಗೆ ಹೇಗೆ ಮತ್ತು ಯಾವುದರ ವ್ಯವಹಾರ ನಡೆಯುತ್ತದೆ ತಿಳಿಸಿರಿ.
ಉತ್ತರ: ನ್ಯಾಶನಲ್ ಸ್ಪಾಟ್ ಎಕ್ಸ್‌ಚೇಂಜ್ ಲಿಮಿಟೆಡ್ ಹೆಸರೇ ಸೂಚಿಸುವಂತೆ ‘ಹಣ ಕೊಟ್ಟು ತಕ್ಷಣ ಸರಕು ಪಡೆ’ ಎಂಬ ಅಂಶದ ಮೇಲೆ ವಹಿವಾಟು ಷೇರುಪೇಟೆಯ ಮೂಲ ಪೇಟೆಯಾದ ‘ಕ್ಯಾಶ್ ಮಾರ್ಕೆಟ್’ನಂತೆಯೇ ವಹಿವಾಟು, ವಿಲೇವಾರಿ ನಡೆಸಲಾಗುವುದಾದರೂ ಇಲ್ಲಿನ ವಹಿವಾಟು ಚಿನ್ನ, ಬೆಳ್ಳಿ, ಝಿಂಕ್, ನಿಕ್ಕಲ್‌ಗಳ ವ್ಯವಹಾರವಾಗಿದೆ. ಇದರ ವಿಶೇಷತೆ ಎಂದರೆ ಇಲ್ಲಿ ವಹಿವಾಟಾಗುವ ಸರಕು ಡಿ-ಮ್ಯಾಟ್ ವಿಧದಲ್ಲಿರುತ್ತದೆ. ಷೇರುಪೇಟೆಯಂತೆ ಇಲ್ಲಿನ ವಹಿವಾಟು ಟಿ+2 ಆಧಾರದ ಮೇಲೆ ನಡೆಸಿ ಚುಕ್ತಾ ಮಾಡಲಾಗುವುದು.

ಚಿನ್ನ, ಬೆಳ್ಳಿ ಮುಂತಾದ ಸರಕನ್ನು ಉಗ್ರಾಣದಲ್ಲಿಟ್ಟು ಅದರ ಆಧಾರದ ಮೇಲೆ 1 ಗ್ರಾಂ ನಿಂದ 100 ಗ್ರಾಂ ಘಟಕಗಳಲ್ಲಿ, ಎಲೆಕ್ಟ್ರಾನಿಕ್ ರೂಪದಲ್ಲಿ ಕೊಳ್ಳಲು ಅವಕಾಶವಿರುವುದರಿಂದ ವಹಿವಾಟು ಸುರಕ್ಷಿತ. ಭೌತಿಕವಾಗಿ ಈ ಅಮೂಲ್ಯ ಸರಕನ್ನು ಕಾಪಾಡುವ ಗೋಜು ಇಲ್ಲ. ಷೇರುಗಳಿಗೆ ಐಎನ್‌ಐಎಸ್ ನೀಡುವಂತೆ ಇಲ್ಲಿನ ಡೆಪಾಜಿಟರಿಗಳು ಸರಕಿಗೆ ಐ.ಸಿ.ಐ.ಎನ್. ನೀಡುವರು. ಮಾರಾಟ ಮಾಡಿದಾಗ ಡೆಲಿವರಿ ಇನ್ಸ್‌ಟ್ರಕ್ಷನ್ ಮೂಲಕ ವಿಲೇವಾರಿಯಾಗುತ್ತದೆ. ಉಳಿದಂತೆ ಷೇರುಪೇಟೆಯ ವ್ಯವಹಾರದಂತೆಯೇ ಇಲ್ಲಿ ವ್ಯವಹಾರ, ಷೇರುಗಳ ಬದಲಾಗಿ ಸರಕು, ಡಿಮ್ಯಾಟ್‌ನಲ್ಲಿ ನಡೆಯುತ್ತಿರುವುದು ರಾಷ್ಟ್ರವ್ಯಾಪಿ ಚಟುವಟಿಕೆಗೆ ಅನುಕೂಲವಾಗಿದೆ.

ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್‌ಗಳಲ್ಲಿ ಫಂಡ್ ನಿರ್ವಹಿಸುವವರಿಗೆ ನಿರ್ವಹಣಾ ವೆಚ್ಚ ನೀಡಬೇಕಾಗಿದ್ದು ಸ್ಪಾಟ್ ಎಕ್ಸ್‌ಚೇಂಜ್‌ನಲ್ಲಿ ನೇರವಾಗಿ ಚಟುವಟಿಕೆ ನಿರ್ವಹಿಸುವುದರಿಂದ ನಿರ್ವಹಣಾ ವೆಚ್ಚ ಉಳಿಯುತ್ತದೆ. ಮತ್ತೊಂದು ಪ್ರಮುಖವಾದ ಅಂಶವೆಂದರೆ ಉಳಿತಾಯ ಮಾಡುವವರಿಗೆ ಬೇಕೆನಿಸಿದಾಗ ಒಂದು, ಎರಡು ಗ್ರಾಂಗಳಲ್ಲಿಯೂ ಚಿನ್ನವನ್ನು ಖರೀದಿಸಿ ತಮ್ಮ ಉಳಿತಾಯ ಸುರಕ್ಷಿತವಾಗಿ ಬೆಳೆಸಬಹುದು. ನಂತರ ಡಿಮ್ಯಾಟ್ ರೂಪದ ಚಿನ್ನ ಮಾರಾಟ ಮಾಡಬಹುದು ಅಥವಾ ಭೌತಿಕವಾಗಿ ಪರಿವರ್ತಿಸಿಕೊಳ್ಳುವ ವ್ಯವಸ್ಥೆಯೂ ಇದೆ.

ಚಿನಿವಾರ ಪೇಟೆಯ ಮೋಹವಿದ್ದವರಿಗೆ, ಉಳಿತಾಯ ಭಾವನೆಯಿರುವವರಿಗೆ  ಸುರಕ್ಷಿತವಾದ ಮಾದರಿಯಾಗಿ ಈ ವಿನಿಮಯ ಕೇಂದ್ರವು ಪೂರಕವಾದ ಸವಲತ್ತುಗಳನ್ನು ಒದಗಿಸಿರುವುದು, ಸಾಮಾನ್ಯ ಹೂಡಿಕೆದಾರರಿಗೂ ಲಭ್ಯವಿರುವುದು ಒಂದು ವರದಾನವೇ ಆಗಿದೆ. ನ್ಯಾಶನಲ್ ಸ್ಟಾಕ್ ಎಕ್ಸ್‌ಚೇಂಜ್, ನ್ಯಾಶನಲ್ ಸ್ಪಾಟ್ ಎಕ್ಸ್‌ಚೇಂಜ್‌ಗೂ ಯಾವ ರೀತಿಯ ಸಂಬಂಧವಿಲ್ಲ ಎರಡೂ ಬೇರೆಯೇ ಆಗಿವೆ.

 m 98863-13380
 (ಮಧ್ಯಾಹ್ನ 4.30ರ ನಂತರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT