ವಿಜಾಪುರ: ಜಿಲ್ಲೆಯ ಕೂಡಗಿಯಲ್ಲಿ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ (ಎನ್‌ಟಿಪಿಸಿ) ಸ್ಥಾಪಿಸುತ್ತಿರುವ 4,000 ಮೆಗಾವಾಟ್ ಸಾಮರ್ಥ್ಯದ ಸೂಪರ್ ಉಷ್ಣ ವಿದ್ಯುತ್ ಸ್ಥಾವರದ ಕಾಮಗಾರಿ ಸುಪ್ರೀಂ ಕೋರ್ಟ್‌ನ ಹಸಿರು ಪೀಠದ ತಡೆಯಾಜ್ಞೆಯಿಂದಾಗಿ ಸ್ಥಗಿತಗೊಂಡಿದೆ.
ಈ ಸ್ಥಾವರಕ್ಕೆ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಕೂಡಗಿ ಸಮೀಪದ ಮಸೂತಿ ಗ್ರಾಮದ ನಿವೃತ್ತ ಅಣು ವಿಜ್ಞಾನಿ, ಪರಿಸರ ರಕ್ಷಣಾ ಸೇವಾ ವೇದಿಕೆಯ ಮುಖ್ಯಸ್ಥ ಎಂ.ಬಿ. ಪಾಟೀಲ ಸುಪ್ರೀಂಕೋರ್ಟ್ ಮೆಟ್ಟಿಲು ಏರಿದ್ದಾರೆ.
ಅರಣ್ಯ ಮತ್ತು ಪರಿಸರ ಸಚಿವಾಲಯ ಈ ಸ್ಥಾವರಕ್ಕೆ ನೀಡಿದ್ದ ಅನುಮತಿಯನ್ನು ಅಮಾನತಿನಲ್ಲಿಟ್ಟಿರುವ ಸುಪ್ರೀಂ ಕೋರ್ಟ್‌ನ ಹಸಿರು ಪೀಠ, ‘ಅರಣ್ಯ ಮತ್ತು ಪರಿಸರ ಸಚಿವಾಲಯದ ತಜ್ಞರ ಸಮಿತಿ ಸ್ಥಳಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿ ಆರು ತಿಂಗಳ ಒಳಗಾಗಿ ವರದಿ ಸಲ್ಲಿಸಬೇಕು. ಅಲ್ಲಿಯವರೆಗೆ ಕೂಡಗಿ ಸ್ಥಾವರ ನಿರ್ಮಾಣದ ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸಬೇಕು’ ಎಂದು ಇದೇ 13ರಂದು ತೀರ್ಪು ನೀಡಿದೆ.
‘ಈಗ ಎಲ್ಲ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿವೆ. ಈ ತಡೆಯಾಜ್ಞೆ ತೆರವಿಗಾಗಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದು, ಇದೇ 25ರಂದು ಈ ಅರ್ಜಿಯ ವಿಚಾರಣೆ ನಡೆಯಲಿದೆ’ ಎಂದು ಎನ್‌ಟಿಪಿಸಿ ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ಎನ್‌ಟಿಪಿಸಿ ಕೈಗೆತ್ತಿಕೊಂಡಿರುವ ಮೊದಲ ವಿದ್ಯುತ್ ಸ್ಥಾವರ ಇದು. ಕರಾವಳಿ ಭಾಗದ ಜನರ ತೀವ್ರ ವಿರೋಧದಿಂದಾಗಿ ಇದನ್ನು ತದಡಿಯಿಂದ ಇಲ್ಲಿಗೆ ಸ್ಥಳಾಂತರಿಸಲಾಗಿತ್ತು.
₨20,000 ಕೋಟಿ ಮೊತ್ತದ ಈ ಬೃಹತ್ ಯೋಜನೆಯ ಆರಂಭದಲ್ಲಿ ತಲಾ 800 ಮೆಗಾವಾಟ್ ಸಾಮರ್ಥ್ಯದ ಮೂರು ಘಟಕ ಹಾಗೂ ಎರಡನೇ ಹಂತದಲ್ಲಿ ತಲಾ 800 ಮೆಗಾ ವಾಟ್ ಸಾಮರ್ಥ್ಯದ ಎರಡು ಘಟಕಗಳನ್ನು ಸ್ಥಾಪಿಸಲಾಗುತ್ತದೆ. ಇದಕ್ಕಾಗಿ 1,923 ಎಕರೆ ಜಮೀನು ಸ್ವಾಧೀನ ಪಡಿಸಿಕೊಂಡು ಮೊದಲ ಹಂತದ ₨15,166 ಕೋಟಿ ಮೊತ್ತದ ಕಾಮಗಾರಿ 2012 ಜೂನ್ 2 ರಂದು ಆರಂಭವಾಗಿತ್ತು.
‘2015ರ ಮಾರ್ಚ್‌ಗೆ ಮೊದಲ ಘಟಕದಿಂದ ವಿದ್ಯುತ್ ಉತ್ಪಾದಿಸುವ ಗುರಿ ಇದ್ದು ಎನ್‌ಟಿಪಿಸಿಯ 170 ಸಿಬ್ಬಂದಿ, ದೇಶ–ವಿದೇಶಗಳ ಹೆಸರಾಂತ ಗುತ್ತಿಗೆ ಸಂಸ್ಥೆಗಳ ಪರಿಣತರು, ಕಾರ್ಮಿಕರು ಸೇರಿದಂತೆ 2000ಕ್ಕೂ ಹೆಚ್ಚು ಜನರು ಹಗಲಿರುವ ಕೆಲಸ ಮಾಡುತ್ತಿದ್ದೆವು. ಪ್ರಥಮ ಘಟಕದ ಕಾಮಗಾರಿ ಶೇ 55ರಷ್ಟು ಈಗಾಗಲೇ ಮುಗಿದಿದೆ.
ತಡೆಯಾಜ್ಞೆ ಬಂದುದರಿಂದ ಎಲ್ಲ ಬಗೆಯ ಚಟುವಟಿಕೆಗಳು ಒಂದು ವಾರದಿಂದ ಸ್ಥಗಿತಗೊಂಡಿವೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಎನ್‌ಟಿಪಿಸಿಯ ಅಧಿಕಾರಿಯೊಬ್ಬರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.