ADVERTISEMENT

ಕೃಷ್ಣನಿಗೆ ಕಂಕಣ!

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2010, 18:30 IST
Last Updated 20 ಅಕ್ಟೋಬರ್ 2010, 18:30 IST

ಕೃಷ್ಣನ್ ಲವ್ ಸ್ಟೋರಿ ಗೆದ್ದಾಯ್ತು. ಈಗ ಕೃಷ್ಣನ್ ಮ್ಯಾರೇಜ್ ಸ್ಟೋರಿಯ ಸಮಯ. ಶಶಾಂಕರ ಕೃಷ್ಣ ಈಗ ನೂತನ್ ಉಮೇಶರ ಕೈಯಲ್ಲಿದ್ದಾನೆ. ಇನ್ನಷ್ಟು ಪಕ್ವವಾಗಿದ್ದಾನೆ. ಅವನಿಗೀಗ ಮದುವೆಯ ವಯಸ್ಸು. ಮದುವೆ ಯಾರೊಂದಿಗೆ?

‘ಊಹೆಗಳು ಸಾಕು ಸಾರ್. ಶೀರ್ಷಿಕೆಯಲ್ಲಿನ ಸಾಮ್ಯತೆ ಹೊರತುಪಡಿಸಿದರೆ ಶಶಾಂಕ್‌ರ ‘ಕೃಷ್ಣನ್ ಲವ್ ಸ್ಟೋರಿ’ಗೂ ನಮ್ಮ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಇದು ಬೇರೆಯದೇ ಕಥೆ’ ಎಂದರು ಉಮೇಶ್. ಹೆಸರಲ್ಲೇ ‘ನೂತನ್’ ಹೊಂದಿರುವ ಅವರಿಗೆ ಕಥೆ-ನಿರೂಪಣೆಯಲ್ಲೂ ನವನವೀನತೆಯನ್ನು ಪ್ರೇಕ್ಷಕರಿಗೆ ಉಣಬಡಿಸುವ ಆಸೆ.

ಅಂದಹಾಗೆ, ‘ಕೃಷ್ಣನ್ ಮ್ಯಾರೇಜ್ ಸ್ಟೋರಿ’ಯ ಮುಹೂರ್ತ ಕಳೆದ ವಿಜಯದಶಮಿಯಂದು ನಡೆದಿದೆ. ಕಥೆಯಲ್ಲಿ ಸಾಮ್ಯತೆ ಇಲ್ಲವೆಂದು ನಿರ್ದೇಶಕರು ಅಡಿಗೆರೆ ಕೊರೆದಂತೆ ಒತ್ತಿ ಹೇಳಿದರೂ ಚಿತ್ರತಂಡದಲ್ಲಿನ ಸಾಮ್ಯತೆಯಂತೂ ಎದ್ದುಕಾಣುವಂತಿದೆ. ನಾಯಕ ಅಜಯ್ ರಾವ್, ಛಾಯಾಗ್ರಾಹಕ ಶೇಖರ್‌ಚಂದ್ರು, ಸಂಗೀತ ನಿರ್ದೇಶಕ ಸಂಭ್ರಮ ಶ್ರೀಧರ್ ಸೇರಿದಂತೆ ಲವ್‌ಸ್ಟೋರಿಯ ಅರ್ಧ ಬಳಗವೇ ಈ ಮ್ಯಾರೇಜ್‌ಮೇಳದಲ್ಲೂ ಇದೆ. ನಿರ್ದೇಶಕ ನೂತನ್ ಈ ಮೊದಲು ಶಶಾಂಕ್ ಗರಡಿಯಲ್ಲಿ ಪಳಗಿದ್ದಾರೆ ಎನ್ನುವುದು ಕಾಕತಾಳೀಯವಷ್ಟೇ. ಶಿಡ್ಲಘಟ್ಟದ ಆರ್.ವಿಜಯ್‌ಕುಮಾರ್ ಚಿತ್ರದ ನಿರ್ಮಾಪಕರು.

ADVERTISEMENT

‘ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಮ್ಯಾರೇಜ್ ಸ್ಟೋರಿ ಒಂದಾನೊಂದು ಕಾಲದಲ್ಲೇ ಸೆಟ್ಟೇರಬೇಕಿತ್ತು. ಮುಹೂರ್ತ ಕೂಡಿಬಂದಿರುವುದು ಈಗ. ಒಳ್ಳೆಯ ತಂಡ ದೊರೆತಿದ್ದು, ಇನ್ನುಮುಂದೆ ಎಲ್ಲವೂ ಸುರಳೀತವಾಗಿ ನಡೆಯಲಿದೆ’ ಎನ್ನುವ ನೂತನ್‌ರ ಮಾತಿನಲ್ಲಿ ಯೋಗಾಯೋಗದ ಅಧ್ಯಾತ್ಮ ಇಣುಕುತ್ತಿತ್ತು.

ಚಿತ್ರದ ನಾಯಕ ಅಜಯ್‌ಗೆ ಮ್ಯಾರೇಜ್ ಸ್ಟೋರಿಯ ಕಥಾಹಂದರ ತುಂಬಾ ಇಷ್ಟವಾಯಿತಂತೆ. ನಿರ್ದೇಶಕರು ಕಥೆ ಹೇಳಿದಾಗ ಅವರು ಥ್ರಿಲ್ ಆಗಿದ್ದಾರೆ. ಮತ್ತೊಂದು ಕಲರ್‌ಫುಲ್ ಚಿತ್ರದಲ್ಲಿ ಭಾಗಿಯಾಗುತ್ತಿರುವ ಖುಷಿ ಅವರದು. ಲವ್‌ಸ್ಟೋರಿಯ ಕೃಷ್ಣ ಮಧ್ಯಮವರ್ಗದ ತರುಣನಾದರೆ, ಇಲ್ಲಿನ ಕೃಷ್ಣ ಮಾಡ್ ಪ್ರಪಂಚದ ಕನಸುಗಾರ. ಜಾಹಿರಾತು ಕಂಪನಿಯೊಂದರ ಮಾಲೀಕ. ಇಂತಿಪ್ಪ ಕೃಷ್ಣನ ಬದುಕಿನೊಳಗೆ ಮ್ಯಾರೇಜು ತರಬಹುದಾದ ತವಕತಲ್ಲಣಗಳ ಕಥೆಯನ್ನು ನೂತನ್ ನಿರ್ವಹಿಸುತ್ತಿದ್ದಾರೆ. ಒಂದೆರಡು ವರ್ಷಗಳಿಂದ ತಲೆಯೊಳಗೆ ಗಿರಕಿ ಹೊಡೆಯುತ್ತಿದ್ದ ಕಥೆಯನ್ನು ಅವರೀಗ ತೆರೆಗಿಳಿಸುತ್ತಿದ್ದಾರೆ.

ಮಲೆನಾಡಿನ ಪರಿಸರದಲ್ಲಿ ಮ್ಯಾರೇಜ್ ಸ್ಟೋರಿಯ ಬಹುತೇಕ ಚಿತ್ರೀಕರಣ ನಡೆಸಲು ನಿರ್ದೇಶಕರು ಉದ್ದೇಶಿಸಿದ್ದಾರೆ. ಯಥಾಪ್ರಕಾರ ಸಕಲೇಶಪುರ, ಮೂಡಬಿದರೆ, ತೀರ್ಥಹಳ್ಳಿಯಲ್ಲಿ ಶೂಟಿಂಗ್ ನಡೆಯಲಿದೆ. ನಗರದ ಪರಿಸರಕ್ಕೆ ಬೆಂಗಳೂರು ಇದ್ದೇಇದೆ. ಮುಹೂರ್ತದ ಹೊತ್ತಿಗೆ ನಾಯಕಿ ಇನ್ನೂ ಗೊತ್ತಾಗಿರಲಿಲ್ಲ. ನವೆಂಬರ್ ಮೊದಲ ವಾರದಿಂದ ಚಿತ್ರೀಕರಣ ನಿಯಮಿತವಾಗಿ ನಡೆಯಲಿದ್ದು, ಆ ವೇಳೆಗೆ ನಾಯಕಿಯನ್ನು ಪಕ್ಕಾ ಮಾಡಿಕೊಳ್ಳುವ ವಿಶ್ವಾಸ ನಿರ್ಮಾಪಕರದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.