ADVERTISEMENT

ಕೆಎಸ್‌ಆರ್‌ಟಿಸಿಗೆ ರಾಷ್ಟ್ರೀಯ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2012, 19:30 IST
Last Updated 9 ಜನವರಿ 2012, 19:30 IST

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮವು ಪ್ರಸಕ್ತ ಆರ್ಥಿಕ ಸಾಲಿನಲ್ಲಿ ರೂ 65.05 ಕೋಟಿ ಲಾಭ ಗಳಿಸುವ ಮೂಲಕ ದೇಶದ ರಸ್ತೆ ಸಾರಿಗೆ ಸಂಸ್ಥೆಗಳ ಪೈಕಿ ಮುಂಚೂಣಿ ಸ್ಥಾನ ಪಡೆದುಕೊಂಡಿದೆ.

ಈ ಸಾಧನೆಗಾಗಿ ನಿಗಮವು ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ನೀಡುವ `ಎಎಸ್‌ಆರ್‌ಟಿಯು~  ಪ್ರಶಸ್ತಿಗೆ ಪಾತ್ರವಾಗಿದೆ. ನವದೆಹಲಿಯಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಇಲಾಖೆಯ ಕಾರ್ಯದರ್ಶಿ ಎ.ಕೆ. ಉಪಾಧ್ಯಾಯ ಅವರು ಪ್ರಶಸ್ತಿಯನ್ನು ನಿಗಮದ ಭದ್ರತೆ ಮತ್ತು ಜಾಗೃತಿ ವಿಭಾಗದ ನಿರ್ದೇಶಕ ಬಿ.ಕೆ. ಸಿಂಗ್ ಅವರಿಗೆ ಪ್ರದಾನ ಮಾಡಿದರು. ಪ್ರಶಸ್ತಿಯು ರೂ1ಲಕ್ಷ ನಗದು ಮತ್ತು ಫಲಕವನ್ನು ಒಳಗೊಂಡಿದೆ.

 2001ನೇ ಸಾಲಿನವರೆಗೆ ಒಟ್ಟು ರೂ328.45 ಕೋಟಿಗಳಷ್ಟು ನಷ್ಟ ಅನುಭವಿಸಿದ್ದ ಕೆಎಸ್‌ಆರ್‌ಟಿಸಿ ಈಗ ತನ್ನೆಲ್ಲ ನಷ್ಟವನ್ನು ಅಳಿಸಿಹಾಕಿ ನಿವ್ವಳ ರೂ43.15 ಕೋಟಿಗಳಷ್ಟು ಲಾಭದಲ್ಲಿದೆ ಎಂದು ಪ್ರಕಟಣೆ ತಿಳಿಸಿದೆ.

`ಎಎಸ್‌ಆರ್‌ಟಿಯು~ ದೇಶದ ವಿವಿಧ ರಾಜ್ಯಗಳ ಒಟ್ಟು 53 ರಸ್ತೆ ಸಾರಿಗೆ ಸಂಸ್ಥೆಗಳ ಪ್ರಾತಿನಿಧ್ಯ ಹೊಂದಿರುವ ಒಕ್ಕೂಟವಾಗಿದ್ದು, ವಿವಿಧ ಸಾರಿಗೆ ಸಂಸ್ಥೆಗಳ ಕಾರ್ಯಕ್ಷಮತೆ  ಪರಿಶೀಲಿಸಿ ಪ್ರಶಸ್ತಿ ನೀಡುತ್ತದೆ.
ಕಳೆದ ಮೂರು ವರ್ಷಗಳಲ್ಲಿ ನಿಗಮ ಪಡೆದುಕೊಂಡಿರುವ 35ನೇ ಪ್ರಶಸ್ತಿ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.