ADVERTISEMENT

ಕೆಲವೆಡೆ ನಿಯಮ ಉಲ್ಲಂಘನೆ: ಆರ್‌ಬಿಐ

ಐಸಿಐಸಿಐ, ಎಚ್‌ಡಿಎಫ್‌ಸಿ, ಆಕ್ಸಿಸ್ ಬ್ಯಾಂಕ್: `ಕುಟುಕು' ಆರೋಪ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2013, 19:59 IST
Last Updated 18 ಏಪ್ರಿಲ್ 2013, 19:59 IST

ಮುಂಬೈ(ಪಿಟಿಐ): ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್‌ಗಳಲ್ಲಿನ ವಹಿವಾಟಿನಲ್ಲಿ ಕೆಲವೆಡೆ `ನಿಯಮಗಳ ಉಲ್ಲಂಘನೆ' ಆಗಿರುವುದು ಕಂಡುಬಂದಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಲೆಕ್ಕಪರಿಶೋಧನೆ ವರದಿ ಖಚಿತಪಡಿಸಿದೆ.

ಮೂರೂ ಖಾಸಗಿ ಬ್ಯಾಂಕ್‌ಗಳ ದಾಖಲೆಗಳನ್ನು ಪರಿಶೀಲಿಸಿದ ನಂತರದ  `ಆರ್‌ಬಿಐ' ಲೆಕ್ಕಪರಿಶೋಧನೆ ವರದಿಯನ್ನು ಗುರುವಾರ ಬಹಿರಂಗಪಡಿಸಿದ ಬ್ಯಾಂಕಿಂಗ್ ಕಾರ್ಯದರ್ಶಿ ರಾಜೀವ್ ಟಕ್ರು, ಬ್ಯಾಂಕ್ ಶಾಖೆಗಳಲ್ಲಿ ವಹಿವಾಟಿನ ವೇಳೆ ಕೆಲವೆಡೆ ನಿಯಮ ಮೀರಿರುವುದು ಕಂಡುಬಂದಿದೆ. ಹಾಗೆಂದು ಇದೇನೋ ಒಟ್ಟಾರೆ ಬ್ಯಾಂಕಿಂಗ್ ವ್ಯವಸ್ಥೆಯ ವೈಫಲ್ಯವೇನೂ ಅಲ್ಲ ಎಂದು ಸ್ಪಷ್ಟಪಡಿಸಿದರು.

ಇಲ್ಲಿನ ಮಿಂಟ್ ರಸ್ತೆಯಲ್ಲಿನ `ಆರ್‌ಬಿಐ' ಕಚೇರಿಯಾಚೆ ಸುದ್ದಿಗಾರರ ಜತೆ ಮಾತನಾಡಿದ ಟಕ್ರು, ಇಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸಿಕೊಳ್ಳಬಹುದಾಗಿದೆ. ಯಾರು ಯಾವ ಲೋಪಕ್ಕೆ ಕಾರಣರೋ ಅವರನ್ನು ಅದಕ್ಕೆ ಹೊಣೆಗಾರರನ್ನಾಗಿಸಲಾಗುವುದು. ಎಲ್ಲೆಲ್ಲಿ ಪ್ರಮಾದಗಳಾಗುವುದನ್ನು ನಿವಾರಿಸಿಕೊಳ್ಳಬೇಕಿದೆಯೋ ಅದನ್ನೆಲ್ಲ ಮಾಡಲಾಗುವುದು ಎಂದರು.

ತಿಂಗಳ ಹಿಂದೆ ಕುಟುಕು ಕಾರ್ಯಾಚರಣೆ ನಡೆಸಿದ್ದ ಆನ್‌ಲೈನ್ ಸುದ್ದಿಸಂಸ್ಥೆ `ಕೋಬ್ರಾ ಪೋಸ್ಟ್', ಖಾಸಗಿ ವಲಯದ ಮೂರು ಪ್ರಮುಖ ಬ್ಯಾಂಕ್‌ಗಳ ಕೆಲವು ಶಾಖೆಗಳಲ್ಲಿ ಅಕ್ರಮ ಹಣವನ್ನು ಸಕ್ರಮಗೊಳಿಸುವ ಚಟುವಟಿಕೆ ನಡೆಯುತ್ತಿದೆ ಎಂದು ಆರೋಪಿಸಿತ್ತು.

ಈ ಆರೋಪಕ್ಕೆ ಸಂಬಂಧಿಸಿದ ಆರ್‌ಬಿಐ ಮಧ್ಯಂತರ ಲೆಕ್ಕಪರಿಶೋಧನೆ ವರದಿ ಈಗಷ್ಟೇ ಸಿಕ್ಕಿದೆ. ಪ್ರಕರಣದಲ್ಲಿ ಏನು ಕ್ರಮ ಕೈಗೊಳ್ಳಬೇಕಿದೆ ಎಂಬ ಬಗ್ಗೆ ಆರ್‌ಬಿಐಗೆ ಈಗ ಯಾವುದೇ ಶಿಫಾರಸು ಮಾಡಲು ಹೋಗುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಟಕ್ರು ಉತ್ತರಿಸಿದರು.

ಆರ್‌ಬಿಐ ವರದಿಗೆ ಸಂಬಂಧಿಸಿ ಶೀಘ್ರದಲ್ಲೇ ಮೂರೂ ಬ್ಯಾಂಕ್‌ಗಳಿಂದ ಪ್ರತಿಕ್ರಿಯೆ ಪಡೆಯಲಾಗುವುದು. ನಂತರ ಚರ್ಚಿಸಿ ಎಲ್ಲಿ ಅಗತ್ಯ ಎನಿಸುವುದೊ ಅಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

`ಕೋಬ್ರಾ ಪೋಸ್ಟ್' ಕುಟುಕು ಕಾರ್ಯಾಚರಣೆ ಆರೋಪದ ನಂತರ ಮೂರೂ ಬ್ಯಾಂಕ್‌ಗಳು ಪ್ರಕರಣದಲ್ಲಿ ಪ್ರತ್ಯಕ್ಷ-ಪರೋಕ್ಷವಾಗಿ ಭಾಗಿಯಾಗಿದ್ದ 40ಕ್ಕೂ ಅಧಿಕಾರಿಗಳನ್ನು ಅಮಾನತುಗೊಳಿಸಿ ಆಂತರಿಕ ತನಿಖೆ ಆರಂಭಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.