ADVERTISEMENT

ಕೈಗಾರಿಕಾ ಪ್ರಗತಿ ಕುಂಠಿತ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2011, 19:30 IST
Last Updated 12 ಅಕ್ಟೋಬರ್ 2011, 19:30 IST

ನವದೆಹಲಿ (ಪಿಟಿಐ): ಆಗಸ್ಟ್ ತಿಂಗಳಲ್ಲಿ ಕೈಗಾರಿಕಾ ಉತ್ಪಾದನಾ ವೃದ್ಧಿಯು ಶೇ 4.1ರಷ್ಟಾಗಿದ್ದು, ಸತತ ಎರಡನೆ ತಿಂಗಳೂ ಕುಂಠಿತ ಪ್ರಗತಿ ದಾಖಲಾಗಿ ನಿರಾಶೆ ಮೂಡಿಸಿದೆ.

ಜುಲೈ ತಿಂಗಳ (ಶೇ 3.8) ಬೆಳವಣಿಗೆ ದರಕ್ಕೆ ಹೋಲಿಸಿದರೆ ಆಗಸ್ಟ್ ತಿಂಗಳ ವೃದ್ಧಿ ದರ ಕೆಲ ಮಟ್ಟಿಗೆ ಪ್ರಗತಿ ಕಂಡಿದ್ದರೂ, ಕಳೆದ ವರ್ಷದ ಶೇ 4.5ರಷ್ಟಕ್ಕೆ ಹೋಲಿಸಿದರೂ ಇದು ಕಡಿಮೆ ಮಟ್ಟದಲ್ಲಿಯೇ ಇದೆ.

ಗರಿಷ್ಠ ಪ್ರಮಾಣದ ಬಡ್ಡಿ ದರ ಮತ್ತು ಜಾಗತಿಕ ಅರ್ಥ ವ್ಯವಸ್ಥೆಯಲ್ಲಿನ ಬಿಕ್ಕಟ್ಟು ಈ ಕುಂಠಿತ ಬೆಳವಣಿಗೆಗೆ ಕಾರಣಗಳಾಗಿವೆ. ಗಣಿಗಾರಿಕೆಯು ಅತಿ ಕಡಿಮೆ (ಶೇ 3.4) ಮತ್ತು ಭಾರಿ ಯಂತ್ರೋಪಕರಣ ವಲಯವು ಶೇ 3.9ರಷ್ಟು ಪ್ರಗತಿ ದಾಖಲಿಸಿದೆ.

ಈ ತಿಂಗಳ 25ರಂದು ಹಣಕಾಸು ನೀತಿ ಪರಾಮರ್ಶಿಸಿ ಮತ್ತೆ ಬಡ್ಡಿ ದರ ಹೆಚ್ಚಿಸುವ ಸಾಧ್ಯತೆಗಳು ಇರುವ `ಆರ್‌ಬಿಐ~ ಮೇಲೆ, ಈ ನಿರುತ್ತೇಜಕ ವೃದ್ಧಿಯು  ಯಾವುದೇ ಪ್ರಭಾವ ಬೀರುವ ಸಾಧ್ಯತೆಗಳು ಇಲ್ಲ ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ಎರಡಂಕಿ ಹತ್ತಿರ ಸಾಗಿರುವ ಹಣದುಬ್ಬರ ನಿಯಂತ್ರಿಸುವುದೇ `ಆರ್‌ಬಿಐ~ನ ಸದ್ಯದ ಆದ್ಯತೆಯಾಗಿದೆ.

ನಿರಾಶಾದಾಯಕ; ಪ್ರಣವ್ ಪ್ರತಿಕ್ರಿಯೆ: ಆಗಸ್ಟ್ ತಿಂಗಳಲ್ಲಿ ಕಾರ್ಖಾನೆಗಳ ಉತ್ಪಾದನೆ ಪ್ರಮಾಣವು ಕುಂಠಿತಗೊಂಡಿರುವುದು ನಿರಾಶಾದಾಯಕ ಎಂದು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಪ್ರತಿಕ್ರಿಯಿಸಿದ್ದಾರೆ. ಇದು ಜುಲೈ- ಸೆಪ್ಟೆಂಬರ್ ತಿಂಗಳ ದ್ವಿತೀಯ ತ್ರೈಮಾಸಿಕ ಅವಧಿಯಲ್ಲಿನ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಮೇಲೆ ಪ್ರತಿಕೂಲ  ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.

ನಿಧಾನಗತಿಯ ಆರ್ಥಿಕ ಬೆಳವಣಿಗೆಯು ವಿಶ್ವದಾದ್ಯಂತ ಅನೇಕ ದೇಶಗಳನ್ನು ಬಾಧಿಸುತ್ತಿದ್ದರೂ, ಏಪ್ರಿಲ್- ಜೂನ್ ಅವಧಿಯಲ್ಲಿ ದೇಶದ ಆರ್ಥಿಕ ವೃದ್ಧಿ ದರ ಶೇ 7.7ರಷ್ಟು ಸಾಧ್ಯವಾಗಿರುವುದರಿಂದ ಪರಿಸ್ಥಿತಿ ಉತ್ತಮವಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕ ವೃದ್ಧಿ ದರ ಶೇ 8.5ರಷ್ಟು ಇರಲಿದೆ ಎನ್ನುವುದು ಸರ್ಕಾರದ ನಿರೀಕ್ಷೆಯಾಗಿದೆ.

ಕೈಗಾರಿಕಾ ಉತ್ಪಾದನೆ ಸೂಚ್ಯಂಕ (ಐಐಪಿ) ಆಧರಿಸಿ ಅಳೆಯಲಾಗುವ ಕೈಗಾರಿಕಾ ಉತ್ಪಾದನೆಯು ಏಪ್ರಿಲ್‌ನಿಂದ ಆಗಸ್ಟ್ ತಿಂಗಳ ಅವಧಿಯಲ್ಲಿ ಶೇ 5.6ರಷ್ಟಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಇದು  ಶೇ 8.7ರಷ್ಟಿತ್ತು.

`ಐಐಪಿ~ಯಲ್ಲಿ ಶೇ 75ರಷ್ಟು ಪಾಲು ಹೊಂದಿರುವ ತಯಾರಿಕಾ ರಂಗವು ಶೇ 4.5ರಷ್ಟು ಬೆಳವಣಿಗೆ ಸಾಧಿಸಿದೆ. ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಕೈಗಾರಿಕಾ ಬೆಳವಣಿಗೆ ದರವು ಉತ್ತಮಗೊಳ್ಳುವ ಸಾಧ್ಯತೆಗಳು ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.