ADVERTISEMENT

ಕೈಮಗ್ಗ ಉಳಿಸಲು ಗಾಳಿಮಗ್ಗ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 19:30 IST
Last Updated 20 ಏಪ್ರಿಲ್ 2017, 19:30 IST
ಲೋಕಾರ್ಪಣೆಯಾಗಲಿರುವ ಸ್ವಯಂ ಚಾಲಿತ ರೇಷ್ಮೆ ಮಗ್ಗ.
ಲೋಕಾರ್ಪಣೆಯಾಗಲಿರುವ ಸ್ವಯಂ ಚಾಲಿತ ರೇಷ್ಮೆ ಮಗ್ಗ.   

ಮೊಳಕಾಲ್ಮುರು: ಆಧುನಿಕತೆ ಹಾಗೂ ಕಾರ್ಮಿಕರ ಕೊರತೆ ಪರಿಣಾಮ ಅವನತಿ ಹಾದಿಯಲ್ಲಿ ಸಾಗುತ್ತಿರುವ ಕೈಮಗ್ಗಗಳನ್ನು ಉಳಿಸುವ ನಿಟ್ಟಿನಲ್ಲಿ ಇಲ್ಲಿನ ನೇಕಾರನೊಬ್ಬ ಸ್ವಯಂಚಾಲಿತ ಕೈಮಗ್ಗ ಅಭಿವೃದ್ಧಿಪಡಿಸಿದ್ದಾನೆ.

ರಾಜ್ಯ ಪ್ರಶಸ್ತಿ ಪುರಸ್ಕೃತ ನೇಕಾರ ಹಂಚಿ ಮಾರುತಿ ನಾಗರಾಜ್‌, ಮಗ್ಗ ಅಭಿವೃದ್ಧಿಪಡಿಸಿರುವ ನೇಕಾರ. ನೂತನ ಮಗ್ಗವನ್ನು ಶುಕ್ರವಾರ ಕೇಂದ್ರೀಯ ರೇಷ್ಮೆ ಮಂಡಳಿ ಅಧ್ಯಕ್ಷ ಹನುಮಂತರಾಯಪ್ಪ ಲೋಕಾರ್ಪಣೆ ಮಾಡಲಿದ್ದಾರೆ.

ಗುರುವಾರ ನೂತನ ಮಗ್ಗ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ನಾಗರಾಜ್‌, ‘ನೂತನ ಮಗ್ಗ ಪರಿಸರದ ಗಾಳಿಯನ್ನು ಹೀರಿಕೊಂಡು ಒತ್ತಡ ಪಡೆದು ನೇಯ್ಗೆ ಮಾಡಲಿದೆ. ರೇಷ್ಮೆಸೀರೆಯನ್ನೇ ಈ ಮಗ್ಗದಿಂದ ನೇಯ್ಗೆ ಮಾಡಬಹುದಾಗಿದೆ. ಈ ಯಂತ್ರದಿಂದ ವಾರಕ್ಕೆ ಐದು ಸೀರೆ ನೇಯ್ಗೆ ಮಾಡಲು ಸಾಧ್ಯವಿದ್ದು, ‘ನೇಕಾರ ಸ್ನೇಹಿ ಮಗ್ಗ’ವಾಗಿದೆ ಎಂದರು.

ADVERTISEMENT

‘ಕೇಂದ್ರೀಯ ರೇಷ್ಮೆ ಮಂಡಳಿಯ ಧಾರವಾಡ ಕಚೇರಿ ಅಧಿಕಾರಿ ಹುಕ್ಕೇರಿ ಹಾಗೂ ಪಾಟೀಲ್‌ ಮಾರ್ಗದರ್ಶನದಲ್ಲಿ ಈ ಮಗ್ಗ ಅಭಿವೃದ್ಧಿಪಡಿಸಲಾಗಿದೆ. ದೇಶದ ಮಟ್ಟಗೆ ಮೂರನೇ ಹಾಗೂ ಕರ್ನಾಟಕ ಮಟ್ಟಿಗೆ ಇದು ಪ್ರಥಮ ಪ್ರಯತ್ನವಾಗಿದೆ. ಗುಣಮಟ್ಟದ ನೇಯ್ಗೆಯಲ್ಲಿ ನಮ್ಮ ಯಂತ್ರ ದೇಶದಲ್ಲಿ ಪ್ರಥಮ ಪ್ರಯತ್ನವಾಗಿದೆ ಎಂದು ಅಧಿಕಾರಿಗಳು  ಶ್ಲಾಘಿಸಿದ್ದಾರೆ. ಈ ಕಾರಣಕ್ಕಾಗಿಯೇ ಮಂಡಳಿ ಅಧ್ಯಕ್ಷರೇ ಮಗ್ಗ ಲೋಕಾರ್ಪಣೆ ಮಾಡುತ್ತಿದ್ದಾರೆ’ ಎಂದರು.

ಪ್ರತಿ ಮಗ್ಗ ನಿರ್ಮಾಣಕ್ಕೆ ₹2.80 ಲಕ್ಷ ವೆಚ್ಚ ಬರಲಿದ್ದು, ಸದ್ಯ ಸರ್ಕಾರದಿಂದ ಯಾವುದೇ ಸಹಾಯಧನ ಲಭ್ಯವಿಲ್ಲ. ಸಹಾಯಧನ ನೀಡುವಂತೆ ನೇಕಾರರು ಶುಕ್ರವಾರ ಮನವಿ ಸಲ್ಲಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.