ADVERTISEMENT

ಗೂಗಲ್ ತೆಕ್ಕೆಗೆ ಮೊಟರೊಲ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2011, 19:30 IST
Last Updated 15 ಆಗಸ್ಟ್ 2011, 19:30 IST
ಗೂಗಲ್ ತೆಕ್ಕೆಗೆ ಮೊಟರೊಲ
ಗೂಗಲ್ ತೆಕ್ಕೆಗೆ ಮೊಟರೊಲ   

ನ್ಯೂಯಾರ್ಕ್: ಜಾಗತಿಕ ಅಂತರಜಾಲ ಕಂಪೆನಿ ಗೂಗಲ್, ಮೊಬೈಲ್ ಹ್ಯಾಂಡ್‌ಸೆಟ್ ತಯಾರಿಕಾ ಕಂಪೆನಿ ಮೊಟರೊಲ ಮೊಬಿಲಿಟಿಯನ್ನು 12.5 ಶತಕೋಟಿ ಡಾಲರ್‌ಗಳಿಗೆ (ರೂ 56,250 ಕೋಟಿ) ಸೋಮವಾರ ಸ್ವಾಧೀನಪಡಿಸಿಕೊಂಡಿದೆ.

ಜಾಗತಿಕ ಮೊಬೈಲ್ ಹ್ಯಾಂಡ್‌ಸೆಟ್ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಸ್ವಾಧೀನ ಪ್ರಕ್ರಿಯೆ ಇದಾಗಿದ್ದು,  ಈ ಮೂಲಕ ಗೂಗಲ್ ಮೊಬೈಲ್ ಕಂಪ್ಯೂಟಿಂಗ್ ಮಾರುಕಟ್ಟೆಯ ಹೊಸ ಸಾಧ್ಯತೆಗಳತ್ತ ಗಮನ ಹರಿಸಿದೆ.
 
ಈಗಾಗಲೇ ಮೊಟರೊಲ ಹ್ಯಾಂಡ್‌ಸೆಟ್‌ಗಳಲ್ಲಿ ಗೂಗಲ್ ಆಂಡ್ರಾಯ್ಡ ಕಾರ್ಯನಿರ್ವಹಣಾ ತಂತ್ರಾಂಶವಿದ್ದು, ಈ ಮಾರುಕಟ್ಟೆ ವಿಸ್ತರಣೆಯತ್ತಲೂ ಕಂಪೆನಿ ಚಿತ್ತ ಹರಿಸಿದೆ.

`ಮೊಟರೊಲ ಮೊಬಿಲಿಟಿ~ ವಿಭಾಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಭಾರತೀಯ ಮೂಲದ ಸಂಜಯ್ ಝಾ ಕಾರ್ಯನಿರ್ವಹಿಸುತ್ತಿದ್ದರು.  ಈ ಕಂಪೆನಿಯನ್ನು ಪ್ರತಿ ಷೇರಿಗೆ 40 ಡಾಲರ್‌ನಂತೆ ಒಟ್ಟು 12.5 ಶತಕೋಟಿ ಡಾಲರ್ ನಗದು ನೀಡಿ ಗೂಗಲ್ ಖರೀದಿಸಿದೆ. ಸ್ವಾಧೀನ ಪ್ರಕ್ರಿಯೆ ಕುರಿತು ಉಭಯ ಕಂಪೆನಿಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದು, ಈ ವರ್ಷಾಂತ್ಯಕ್ಕೆ ಎಲ್ಲ ಅನುಮೋದನೆಗಳು ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಗೂಗಲ್ ಮತ್ತು ಮೊಟರೊಲ ಮೊಬಿಲಿಟಿ ಎರಡು ಕಂಪೆನಿಗಳೂ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಅಸ್ತಿತ್ವ ಹೊಂದಿವೆ.

`ಆಂಡ್ರಾಯ್ಡ ಕಾರ್ಯನಿರ್ವಹಣಾ ತಂತ್ರಾಂಶ  ಬಳಸಿಕೊಂಡು ಮೊಬೈಲ್ ಕಂಪ್ಯೂಟಿಂಗ್ ಮಾರುಕಟ್ಟೆ ವಿಸ್ತರಿಸುವುದು ಗೂಗಲ್ ಮುಂದಿರುವ ಗುರಿ. ಇದು ಗ್ರಾಹಕರಿಗೆ ವಿಶಾಲ ಶ್ರೇಣಿಯ ಅನುಭವ ನೀಡಲಿದೆ~ ಎಂದು ಗೂಗಲ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲ್ಯಾರಿ ಪೇಜ್ ಹೇಳಿದ್ದಾರೆ. ಈ ಸ್ವಾಧೀನ ಪ್ರಕ್ರಿಯೆಯು ಪ್ರಚಂಚದಾದ್ಯಂತ ಇರುವ ಮೊಟರೊಲ ಷೇರುದಾರರಿಗೆ, ಉದ್ಯೋಗಿಗಳಿಗೆ ತಕ್ಕ ಮೌಲ್ಯ  ಒದಗಿಸಲಿದೆ ಎಂದೂ ಸಂಜಯ್ ಝಾ ಪ್ರತಿಕ್ರಿಯಿಸಿದ್ದಾರೆ.

ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ನಂತರವೂ, ಮೊಟರೊಲ ಪಡೆದುಕೊಂಡಿರುವ ಗೂಗಲ್ ಆಂಡ್ರಾಯ್ಡ ತಂತ್ರಾಂಶದ ಪರವಾನಗಿ ಮೊದಲಿನಂತೆ ಅಸ್ತಿತ್ವದಲ್ಲಿ ಇರಲಿದೆ. ಗೂಗಲ್ ಪ್ರತ್ಯೇಕವಾಗಿ ವಹಿವಾಟು ನಡೆಸಲಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.