ADVERTISEMENT

ಗೊಂದಲದಲ್ಲಿ 'ಸ್ವರ್ಣ' ಯುಗ

ರೋಹಿಣಿ ಮುಂಡಾಜೆ
Published 23 ಏಪ್ರಿಲ್ 2013, 19:59 IST
Last Updated 23 ಏಪ್ರಿಲ್ 2013, 19:59 IST

ಕಳೆದ 5 ವರ್ಷಗಳಲ್ಲಿ ಅಂದರೆ 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರ ಹೂಡಿಕೆ ಉದ್ದೆೀಶಕ್ಕಾಗಿ ಚಿನ್ನ ಖರೀದಿಸುವ ಪ್ರವೃತ್ತಿ ಹೆಚ್ಚಿದೆ. ಅದರಲ್ಲೂ ಭೌತಿಕ ಸ್ವರೂಪದಲ್ಲಿರುವ ಚಿನ್ನದ ಆಭರಣ, ನಾಣ್ಯ, ಗಟ್ಟಿ ಖರೀದಿಗಿಂತಲೂ `ಡಿಮ್ಯಾಟ್' ಸ್ವರೂಪದಲ್ಲಿ ಚಿನ್ನ ಸಂಗ್ರಹಿಸಿಡುವುದು ಹೆಚ್ಚು ಜನಪ್ರಿಯವೂ, ಹೊಸ ತಲೆಮಾರಿನ ಹೂಡಿಕೆ ಹವ್ಯಾಸವೂ ಆಗಿ ಮಾರ್ಪಟ್ಟಿದೆ. 

ಆರ್ಥಿಕ ಬಿಕಟ್ಟಿನ ನಂತರ ಅಮೆರಿಕ, ಯುರೋಪಿನ ಹೂಡಿಕೆದಾರರು ಷೇರು ಪೇಟೆ, ಸಾಲಪತ್ರಗಳ ಮೇಲೆ ಬಂಡವಾಳ ತೊಡಗಿಸುವುದು ಬಿಟ್ಟು, ಹೆಚ್ಚು ಸುರಕ್ಷಿತವಾಗಿರುವ ಚಿನ್ನ ಮತ್ತು ಸ್ಥಿರಾಸ್ತಿ ಮೇಲೆ ಉಳಿತಾಯಕ್ಕೆ ಮುಂದಾದರು.

`ನೀವು ಇನ್ನೂ ಕಾಗದದ ಹಣವನ್ನೇ ನಂಬಿಕೊಂಡಿದ್ದರೆ, ನಿಮ್ಮಷ್ಟು ಮೂರ್ಖರು ಯಾರೂ ಇಲ್ಲ. ಎಲ್ಲವನ್ನೂ ಕಳೆದುಕೊಳ್ಳುತ್ತೀರಿ' ಎಂದು ಯುರೋಪ್ ಆರ್ಥಿಕ ತಜ್ಞರು ಎಚ್ಚರಿಸಿದ ನಂತರ ಅಲ್ಲಿನ ಜನ ಚಿನ್ನ ಖರೀದಿಸಲು ಮುಗಿಬಿದ್ದರು. ಜಾಗತಿಕ ಚಿನಿವಾರ ಪೇಟೆಯಲ್ಲಿ ಬಂಗಾರದ ಬೆಲೆ ದಿಢೀರನೆ ಹೆಚ್ಚಲು, ಮಾರುಕಟ್ಟೆಯಲ್ಲಿ ಅಸ್ಥಿರತೆ ಮುಂದುವರೆಯಲು ಇದೇ ಪ್ರಮುಖ ಕಾರಣ.

ಸಾಮಾನ್ಯವಾಗಿ ಅಂತರರಾಷ್ಟ್ರಿಯ ಮಾರುಕಟ್ಟೆಯ ಬೆಲೆ ಆಧರಿಸಿಯೇ ದೇಶೀಯ ಮಾರುಕಟ್ಟೆಯಲ್ಲಿನ ಚಿನ್ನದ ಬೆಲೆ ನಿರ್ಧಾರವಾಗುತ್ತದೆ. ಸದ್ಯ ವಿಶ್ವ ಮಾರುಕಟ್ಟೆಯಲ್ಲಿ ಚಿನ್ನದ ಮೌಲ್ಯ 30 ವರ್ಷಗಳ ಹಿಂದಿನ ಮಟ್ಟಕ್ಕೆ ಅಂದರೆ 1983ರ ಸರಾಸರಿಗೆ ಕುಸಿತ ಕಂಡಿದೆ. ನ್ಯೂಯಾರ್ಕ್ ಚಿನಿವಾರ ಮಾರುಕಟ್ಟೆಯಲ್ಲಿ ಚಿನ್ನದ ಮೌಲ್ಯ ಏಪ್ರಿಲ್ 15ರಿಂದ 20ರವರೆಗೆ ಶೇ 10ರಷ್ಟು ಕುಸಿದಿದೆ.

ಸದ್ಯ ಪ್ರತಿ ಔನ್ಸ್ ಚಿನ್ನದ ಧಾರಣೆ 1,400 ಡಾಲರ್‌ಗಳಷ್ಟಿದೆ. ಈ ಹಿನ್ನೆಲೆಯಲ್ಲಿ ಚಿನ್ನದ ಸುವರ್ಣ ಯುಗ ಮುಗಿಯಿತು ಎಂಬ ವಿಶ್ಲೇಷಣೆಗಳು ಮಾರುಕಟ್ಟೆ ತಜ್ಞರಿಂದ ಕೇಳಿಬರುತ್ತಿವೆ.

ಪ್ರಪಂಚದಲ್ಲಿಯೇ ಅತಿ ಹೆಚ್ಚು ಚಿನ್ನದ ದಾಸ್ತಾನು ಹೊಂದಿರುವ ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ಕಳೆದ ಒಂದು ವಾರದಲ್ಲಿ ಚಿನ್ನದ ಮೌಲ್ಯದಲ್ಲಿ 7500 ಕೋಟಿ ಡಾಲರ್‌ಗಳಷ್ಟು (ರೂ4.05 ಲಕ್ಷ ಕೋಟಿ) ನಷ್ಟ ಅನುಭವಿಸಿದೆ. 2011ರಿಂದ ಇಲ್ಲಿಯವರೆಗೆ ಚಿನ್ನದ ಮೌಲ್ಯದಲ್ಲಿ ಶೇ 17ರಷ್ಟು ಇಳಿಕೆ ಆಗಿರುವುದರಿಂದ ಚಿನ್ನ ದಾಸ್ತಾನಿನಲ್ಲಿ ಮುಂಚೂಣಿಯಲ್ಲಿರುವ ಖಜಕಿಸ್ತಾನದ ನ್ಯಾಷನಲ್ ಬ್ಯಾಂಕ್, ಭಾರತೀಯ ರಿಸರ್ವ್ ಬ್ಯಾಂಕ್, ಫಿಲಿಪೈನ್ಸ್, ರಷ್ಯಾ ಮತ್ತು ಉಕ್ರೇನಿನ ಸೆಂಟ್ರಲ್ ಬ್ಯಾಂಕುಗಳು ದೊಡ್ಡ ಪ್ರಮಾಣದಲ್ಲಿ ನಷ್ಟ ಅನುಭವಿಸಿವೆ..

ಸೈಪ್ರಸ್ ಬಿಕ್ಕಟ್ಟು ಕಾರಣ
ಕಳೆದ ವಾರ (ಏ. 13ರಿಂದ 17ರವರೆಗೆ) ನಾಲ್ಕೇ ದಿನದಲ್ಲಿ ಭಾರತದ ಚಿನಿವಾರ ಪೇಟೆಯಲ್ಲಿನ ಚಿನ್ನದ ಧಾರಣೆ ಒಟ್ಟು ರೂ3,250ರಷ್ಟು ಮತ್ತು ಬೆಳ್ಳಿ ಧಾರಣೆ ಏಳು ದಿನಗಳಲ್ಲಿ ರೂ7,200ರಷ್ಟು ಕುಸಿಯಿತು. ಇದಕ್ಕೆ ಮುಖ್ಯ ಕಾರಣ ಸೈಪ್ರಸ್ ಬಿಕ್ಕಟ್ಟು ಎಂಬುದು ಮಾರುಕಟ್ಟೆ ತಜ್ಞರ ವಿಶ್ಲೇಷಣೆ.

ಅಸಲಿಗೆ ಸೈಪ್ರಸ್, ಮೆಡಿಟರೇನಿಯನ್ ಸಮುದ್ರದ ಪೂರ್ವಭಾಗದಲ್ಲಿರುವ ಒಂದು ದ್ವೀಪ ರಾಷ್ಟ್ರ. ಟರ್ಕಿಯ ದಕ್ಷಿಣಕ್ಕೆ ,     ಗ್ರೀಸ್‌ನ ಅಗ್ನೇಯಕ್ಕೆ ಮತ್ತು ಈಜಿಪ್ತ್ ನ ಉತ್ತರಕ್ಕಿರುವ ಈ ದೇಶ ಯುರೋಪ್ ಒಕ್ಕೂಟದ ಸದಸ್ಯತ್ವವನ್ನೂ ಹೊಂದಿದೆ. ಸೈಪ್ರಸ್‌ನ ಸೆಂಟ್ರಲ್ ಬ್ಯಾಂಕ್ ಇತ್ತೀಚೆಗೆ ಆರ್ಥಿಕ ದಿವಾಳಿತನದಿಂದ ಹೊರಬರಲು ತನ್ನ ಬಳಿ ಇರುವ ಚಿನ್ನದ ದಾಸ್ತಾನನ್ನು ಮಾರಾಟ ಮಾಡುವ ಯೋಜನೆ ಇರುವುದಾಗಿ ಪ್ರಕಟಿಸಿತು.

ಇದರಿಂದ ಚಿನ್ನದ ಬೆಲೆ ವಿಶ್ವ ಮಾರುಕಟ್ಟೆಯಲ್ಲಿ ದಿಢೀರ್ ಇಳಿಯಲಿದೆ ಎಂಬ ಭೀತಿಯಿಂದ ಹೂಡಿಕೆ ದಾರರು ತಮ್ಮ ಬಳಿ ಇದ್ದ ಚಿನ್ನದ ಸಂಗ್ರಹವ ನ್ನೆಲ್ಲಾ ಮಾರಾಟ ಮಾಡಲು ಮುಗಿ ಬಿದ್ದರು. ಸೈಪ್ರಸ್ ಮಾತ್ರ ವಲ್ಲದೆ, ಯುರೋಪ್  ಒಕ್ಕೂಟದ ದೇಶಗಳೂ ತಮ್ಮಲ್ಲಿದ್ದ ಚಿನ್ನ ಸಂಗ್ರಹ ಖಾಲಿ ಮಾಡಲಿವೆ ಎಂಬ ವದಂತಿ ಇದರ   ಬೆನ್ನಿಗೇ ಹರಡಿತು. ನೋಡ ನೋಡುತ್ತಿದ್ದಂತೆಯೇ  ವಾಯಿದಾ ಪೇಟೆ ವಹಿವಾಟಿ ನಲ್ಲಿ (ಮುಂದಿನ 2-3 ತಿಂಗಳ ವಹಿವಾಟು ಧಾರಣೆ ಮೊದಲೇ ನಿಗದಿ) ಚಿನ್ನದ ಮೌಲ್ಯ 30 ವರ್ಷಗಳ ಹಿಂದಿನ ಮಟ್ಟಕ್ಕೆ ಜಾರಿತು.

ಅನಿಶ್ಚಿತತೆ
ಜಾಗತಿಕ ಆರ್ಥಿಕ ಹಿಂಜರಿತದ ನಂತರ ಚಿನ್ನದ ಚಿಲ್ಲರೆ ವಹಿವಾಟು ಹೆಚ್ಚಿದೆ. ವಿಶೇಷವಾಗಿ ಭಾರತ ಮತ್ತು ಚೀನಾದಲ್ಲಿ ಚಿನ್ನಾಭರಣಗಳ ಖರೀದಿ ಗಣನೀಯವಾಗಿ ಏರಿಕೆ ಕಂಡಿದೆ. ಅಮೆರಿಕದಲ್ಲಿ ಕಳೆದ ಒಂದು ವರ್ಷದಲ್ಲಿ 1,53,000 ಜೌನ್ಸ್ ಚಿನ್ನ ಮಾರಾಟವಾಗಿದೆ. ಕಳೆದ ಮೂರು ವರ್ಷಗಳಲ್ಲೇ ಗರಿಷ್ಠ ಮಟ್ಟ ಇದು. ಹಾಗೆ ನೋಡಿದರೆ, 1999ರ ಆಗಸ್ಟ್‌ನಿಂದ 2011ರ ಆಗಸ್ಟ್‌ವರೆಗೆ ಚಿನ್ನದ ಮೌಲ್ಯ ವಿಶ್ವ ಮಾರುಕಟ್ಟೆಯಲ್ಲಿ ಶೇ 650ರಷ್ಟು ಕುಸಿದಿದೆ.

ಇನ್ನೊಂದೆಡೆ, ವಾಯಿದಾ ಪೇಟೆಯಲ್ಲಿನ ವದಂತಿಗಳು, ಉತ್ಪ್ರೇಕ್ಷಿತ ಚಟುವಟಿಕೆಗಳು, ಖಾಸಗಿ ಹೂಡಿಕೆ ಸಂಸ್ಥೆ `ಹೆಡ್ಜ್ ಫಂಡ್ಸ್' ಮತ್ತು ಚಿಲ್ಲರೆ  ಹೂಡಿಕೆದಾರರ ಕಳವಳಗೊಂಡ ಚಟುವಟಿಕೆಯೇ ಚಿನ್ನದ ದರದಲ್ಲಿ ಇಷ್ಟೊಂದು ತೀವ್ರ ಸ್ವರೂಪದಲ್ಲಿ ಅಸ್ಥಿರತೆ ಸೃಷ್ಟಿಸಲು ಪ್ರಮುಖ ಕಾರಣ ಎಂಬ ವಾದವೂ ಇದೆ.

`ವಿಶ್ವ ಚಿನ್ನ ಸಮಿತಿ'(ಡಬ್ಲ್ಯುಜಿಸಿ) ಸಹ  `ಫ್ಯೂಚರ್ ಟ್ರೇಡಿಂಗ್' ಮಾರುಕಟ್ಟೆಯಲ್ಲಿ ಹರಡಿದ ವದಂತಿಗಳಿಂದಾಗಿಯೇ ಚಿನಿವಾರ ಪೇಟೆಯಲ್ಲಿ ಈ ಬಗೆಯ ತಲ್ಲಣ, ಬೆಲೆ ಕುಸಿತ ದಾಖಲಾಗಿದೆ. ಇದೆಲ್ಲವೂ ಕೇವಲ ವದಂತಿಗಳ ಕಾರುಬಾರಷ್ಟೇ' ಎಂದು ಕಳೆದ ವಾರ(ಏ. 19ರಂದು) ಹೇಳಿತು.

`ಈ ಮೊದಲು ಭಾರತದ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ ರೂ30 ಸಾವಿರದ ಗಡಿ ದಾಟಲು ಪ್ರಮುಖ ಕಾರಣ ಹಣದುಬ್ಬರ ಮತ್ತು ದುರ್ಬಲ ಮುಂಗಾರು' ಎನ್ನುತ್ತದೆ `ಡಬ್ಲ್ಯುಜಿಸಿ' ವರದಿ. ಅದರ ಪ್ರಕಾರ, 2012ರ ಎರಡನೇ ತ್ರೈಮಾಸಿಕದಲ್ಲಿ ಎಲ್ಲ ದೇಶಗಳಲ್ಲಿನ ಬಂಗಾರದ ಬೇಡಿಕೆ 990 ಟನ್‌ಗಳಷ್ಟಿತ್ತು. ಇದೇ ಅವಧಿಯಲ್ಲಿ ಭಾರತದಲ್ಲಿ ಚಿನ್ನದ ಹೂಡಿಕೆ ಮತ್ತು ಆಭರಣ ಬೇಡಿಕೆ 181 ಟನ್‌ಗಳಷ್ಟಿತ್ತು.

`ಬಂಗಾರಕ್ಕೆ ಹೆಚ್ಚುತ್ತಿರುವ ಬೇಡಿಕೆ  ಗಮನಿಸಿದರೆ ಇನ್ನೂ ಜಾಗತಿಕ ಅರ್ಥ ವ್ಯವಸ್ಥೆ ಚೇತರಿಸಿಕೊಂಡಿಲ್ಲ' ಎಂದೇ ಹೇಳಬಹುದು ಎನ್ನುತ್ತಾರೆ `ಡಬ್ಲ್ಯುಜಿಸಿ'  ವ್ಯವಸ್ಥಾಪಕ ನಿರ್ದೇಶಕ ಮಾರ್ಕ್‌ಸ್ ಗ್ಲಬ್.

ಒಟ್ಟಾರೆ ಜಾಗತಿಕ ಚಿನ್ನದ ಬೇಡಿಕೆಯಲ್ಲಿ ಶೇ 45ರಷ್ಟನ್ನು ಪಾಲನ್ನು ಚೀನಾ ಮತ್ತು ಭಾರತ ಹೊಂದಿವೆ. ಆದರೆ, ಚೀನಾದಲ್ಲಿ ಒಟ್ಟಾರೆ ರಾಷ್ಟ್ರೀಯ ಉತ್ಪಾದನೆ `ಜಿಡಿಪಿ' ಪ್ರಮಾಣ ಕುಸಿದಿರುವುದರಿಂದ ಸರಾಸರಿ ತ್ರೈಮಾಸಿಕ ಚಿನ್ನದ ಬೇಡಿಕೆ 144 ಟನ್‌ಗಳಿಗೆ ಇಳಿಕೆ ಕಂಡಿದೆ. 

1980ರಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯುಲ್ಲಿ ಪ್ರತಿ ಔನ್ಸ್ ಚಿನ್ನದ ಬೆಲೆ 835 ಡಾಲರ್ ಇತ್ತು. 2012ರಲ್ಲಿ ಇದು ಸರಾಸರಿ 1609 ಡಾಲರ್‌ಗಳಿಗೆ ಏರಿಕೆ ಕಂಡಿದೆ.  ಅಂದರೆ, 1990ರ ದಶಕಕ್ಕಿಂತ ಮೊದಲೇ ಯಾರು ಚಿನ್ನ ಖರೀದಿಸಿ ಹೂಡಿಕೆ ಮಾಡಿದ್ದಾರೋ ಅವರ ಸಂಪತ್ತು ಒಟ್ಟಾರೆ ಶೇ 515ರಷ್ಟು ವೃದ್ಧಿಸಿದೆ. ಇತ್ತೀಚಿನ ದಿಢೀರ್ ಧಾರಣೆ ಕುಸಿತದಿಂದ ಇವರಿಗೆ ಹೆಚ್ಚಿನ ನಷ್ಟವೇನೂ ಆಗಿಲ್ಲ. ಆದರೆ, 2000ನೇ ಇಸವಿ ನಂತರ ಚಿನ್ನದ ಮೇಲೆ ಹೂಡಿಕೆ ಮಾಡಿದವರ ಸಂಪತ್ತು ಮಾತ್ರ ಅರ್ಧದಷ್ಟು ಕರಗಿದೆ.

`ಗಲೂಪ್' ಎಂಬ ಮಾರುಕಟ್ಟೆ ಅಧ್ಯಯನ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ, ಅಮೆರಿಕದ ಶೇ 34ರಷ್ಟು ಜನರು ಇತ್ತೀಚಿನವರೆಗೂ, `ಚಿನ್ನವೇ ಅತ್ಯಂತ ಸುರಕ್ಷಿತವಾದ ಹಾಗೂ ದೀರ್ಘಾವಧಿ ಹೂಡಿಕೆ' ಎಂದೇ  ಹೇಳುತ್ತಿದ್ದರು. ಆದರೆ, ಈಗ ಅಂತಹವರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕಡಿಮೆ ಆಗಿದೆ.

ದೀಪಾವಳಿ ವೇಳೆಗೆ ಚೇತರಿಕೆ
ಜಾಗತಿಕ ಆರ್ಥಿಕತೆ ಚೇತರಿಸಿಕೊಂಡರೆ ಇನ್ನು ಕೆಲವೇ ವರ್ಷಗಳಲ್ಲಿ ಚಿನ್ನದ ಧಾರಣೆ ಪ್ರತಿ ಔನ್ಸ್‌ಗೆ 5 ಸಾವಿರ ಡಾಲರ್‌ಗೆ(ರೂ. 2.71 ಲಕ್ಷಕ್ಕೆ) ಏರಿಕೆ ಕಾಣಲಿದೆ ಎನ್ನುವ ಮಾತುಗಳೂ ಅಲ್ಲಲ್ಲಿ ಕೇಳಿಬರುತ್ತಿವೆ.  `ದೀಪಾವಳಿ ವೇಳೆಗೆ ಚಿನ್ನ ಪ್ರತಿ ಔನ್ಸ್‌ಗೆ 1,800 ಡಾಲರ್ ಗಡಿ ದಾಟಲಿದೆ' ಎನ್ನುತ್ತಾರೆ ಮುಂಬೈ ಮೂಲದ ಚಿನ್ನಾಭರಣ ವರ್ತಕ ಟಿ.ಎಸ್. ಕಲ್ಯಾಣರಾಮನ್.

`ವಿಶ್ವ ಆರ್ಥಿಕತೆ ಹಣದುಬ್ಬರದಿಂದ ಹೊರಬರುವವರೆಗೂ ಚಿನ್ನಕ್ಕೆ ಬೇಡಿಕೆ ಈಗಿನಂತೆ ಮೇಲ್ಮಟ್ಟದಲ್ಲಿಯೇ ಇರುತ್ತದೆ' ಎನ್ನುತ್ತಾರೆ ಏಷ್ಯಾ ಪೆಸಿಫಿಕ್ ವಲಯದ ಬೃಹತ್ ಹೂಡಿಕೆದಾರ ಪೀಟರ್ ಸಿಫ್ಟ್.




ಚಿನ್ನ ಚಿನ್ನ ಆಸೈ...
ಏರುಹಾದಿಯಲ್ಲೇ ಸಾಗಿದ್ದ ಚಿನ್ನದ ಬೆಲೆಯನ್ನು ಆಸೆ ಮತ್ತು ನಿರಾಸೆಯ ಕಣ್ಣುಗಳಲ್ಲೇ ನೋಡುತ್ತಿದ್ದ ಸಾಮಾನ್ಯ ಗ್ರಾಹಕರಿಗೆ ಕಳೆದ ವಾರದಿಂದೀಚೆಗೆ ಬೆಲೆ ಇಳಿಕೆ ಕಂಡಾಗ ಚಿನ್ನದಂಥ ಆಸೆಯನ್ನು ಕಂಡಿದ್ದು ಸುಳ್ಳಲ್ಲ. ಒಂದು ಹಾರ, ನಾಲ್ಕು ಕೈಬಳೆ ಮತ್ತೊಂದು ಲಾಂಗ್‌ಚೈನ್ ಮಾಡಿಸುವ ದಶಕದ ಕನಸನ್ನು ನನಸು ಮಾಡಿಸಿಕೊಳ್ಳುವ ಹಂಬಲವೂ ಉಂಟಾಗಿತ್ತು. ಆದರೆ ನಾಳೆ ನಾಡಿದ್ದರಲ್ಲಿ ಆಭರಣ ಮಳಿಗೆಗೆ ಹೋಗಬೇಕು ಎಂದು ದುಡ್ಡು ಹೊಂದಿಸಿಕೊಂಡು ಕೂತವರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ ಮತ್ತೆ ನಿರಾಸೆ ಮೂಡಿಸಿದೆ ಮಾರುಕಟ್ಟೆಯಲ್ಲಿನ ಏರಿಳಿತ. `ಕಭಿ ಖುಷಿ ಕಬಿ ಗಮ್'.. ಅನ್ನುವ ಅಭಿಪ್ರಾಯವನ್ನು ಜನ ಇಲ್ಲಿ ಹಂಚಿಕೊಂಡಿದ್ದಾರೆ.

`ಊಹೆಗೆ ನಿಲುಕದ ದರ'
`ಚಿನ್ನದ ದರದಲ್ಲಿ ಒಮ್ಮೆಗೇ ಭಾರೀ ಇಳಿಕೆಯಾಯಿತು. ಈಗ ಮತ್ತೆ ಸ್ವಲ್ಪ ಸ್ವಲ್ಪವಾಗಿ ಹೆಚ್ಚಾಗುತ್ತಿದೆ. ಇಷ್ಟೊಂದು ಭಾರಿ ಪ್ರಮಾಣದಲ್ಲಿ ಚಿನ್ನದ ದರದಲ್ಲಿ ಇಳಿಕೆಯಾಗಿ ಬಹಳ ವರ್ಷಗಳೇ ಆದವು. ಎಂದಿನಂತೆ ಅಕ್ಷಯ ತೃತೀಯಕ್ಕೆ ಚಿನ್ನದ ಒಡವೆ ಅಥವಾ ನಾಣ್ಯ ಖರೀದಿಸಬೇಕಿತ್ತು. ಆದರೆ ದರ ಇನ್ನೂ ಕಡಿಮೆಯಾದೀತೇ ಅಥವಾ ಈಗ ಮತ್ತೆ ಏರುತ್ತಿರುವ ದರ ಏರುತ್ತಲೇ ಹೋದೀತೇ ಎಂಬ ಗೊಂದಲದಲ್ಲಿದ್ದೇವೆ. ಆದರೂ ಮಗಳ ಹುಟ್ಟುಹಬ್ಬಕ್ಕೆ ಈ ಬಾರಿ ಎಂದಿಗಿಂತ ಸ್ವಲ್ಪ ಹೆಚ್ಚೇ ಖರೀದಿಸಲು ಸಾಧ್ಯ'.

`ನಾವು ಪತ್ರಿಕೆಯಲ್ಲಿ ಆಯಾ ದಿನ ಚಿನ್ನದ ಧಾರಣೆ ನೋಡಿ ಖರೀದಿ/ಮುಂಗಡ ಕಾಯ್ದಿರಿಸಲು ಹೋದರೆ ಕೆಲವು ಬ್ರಾಂಡೆಡ್ ಮಳಿಗೆಗಳಲ್ಲಿ ಆ ದರ ಇರುವುದೇ ಇಲ್ಲ. ಅದು ಹಿಂದಿನ ದಿನದ ಮಾರುಕಟ್ಟೆ ದರ ಎಂಬ ಸಬೂಬು ಹೇಳುತ್ತಾರೆ. ನಾವು, ಗ್ರಾಹಕರು ಅಂದಂದಿನ ದರವನ್ನು ನಿಖರವಾಗಿ ಹೇಗೆ ತಿಳಿದುಕೊಳ್ಳಬೇಕು ಎಂದೇ ಅರ್ಥವಾಗುವುದಿಲ್ಲ'.`ಅದೇನೇ ಇದ್ದರೂ ಯುಗಾದಿ ನಂತರ ಇಳಿಕೆಯಾಗಿರುವ ಮೊತ್ತ ರೂ3250 ನೋಡಿ ನಮಗೆ ನಿಜಕ್ಕೂ ಹಬ್ಬದ ಸಂಭ್ರಮವನ್ನೇ ತಂದಿದೆ' ಎಂದು ಖುಷಿ ಹಂಚಿಕೊಂಡವರು ಬೆಂಗಳೂರು ವಿಜಯನಗರದ ತನುಜಾ ರಮೇಶ್.

`ಸೊಸೆಯ ಅದೃಷ್ಟ'!
`ಚಿನ್ನದ ದರ ಇಳಿಕೆಯಾಗಿ ಮತ್ತೆ ಸ್ವಲ್ಪ ಹೆಚ್ಚಳವಾಗುತ್ತಿದ್ದರೂ ಚಿಂತೆಯೇನೂ ಇಲ್ಲ. ಏಕೆಂದರೆ, ಕೆಲ ತಿಂಗಳ ಹಿಂದಿನ ದರಗಳಿಗೆ ಹೋಲಿಸಿದರೆ ಈಗಿನ ದರ ನಿಜಕ್ಕೂ ಸುಗ್ಗಿಯ ಕಾಲದಲ್ಲಿರುವಂತಿದೆ'.

`ಮುಂದಿನ ತಿಂಗಳು ಸೊಸೆಗೆ ಸೀಮಂತ ಶಾಸ್ತ್ರವಿದೆ. ತಂದೆ-ತಾಯಿ ಇಲ್ಲದ ಹುಡುಗಿಯನ್ನು ಮನೆ ತುಂಬಿಸಿಕೊಂಡಿದ್ದೇವೆ. ಈಗ ಅವಳಿಗೆ ತವರೂ ನಾವೇ ಆಗಿರುವುದರಿಂದ ನಮ್ಮ ಬಜೆಟ್‌ನಲ್ಲೇ ಹೆಚ್ಚಿನ ಒಡವೆ ಬರುತ್ತದೆ. ಈ ದರ ಇಳಿಕೆ ನಮ್ಮ ಸೊಸೆಯ ಅದೃಷ್ಟ'.
ಇದು ಧರ್ಮಸ್ಥಳ ಸಮೀಪದ ಸೀತಾರಾಮ ಶೆಟ್ಟಿ ಅವರ ಮನತುಂಬಿದ ಮಾತು.

`ಕಷ್ಟಕಾಲಕ್ಕೆ ಇಡುಗಂಟು'
`ಇದೇ ಮೊದಲ ಬಾರಿಗೆ ರೂ5 ಲಕ್ಷ ಮೊತ್ತದ ಒಡವೆಗಳನ್ನು ಒಂದೇ ಸಲ ಬುಕ್ ಮಾಡಿದ್ದೇವೆ'.

`ಐದು ವರ್ಷದ ಹಿಂದೆ ಮ್ಯೂಚುವಲ್ ಫಂಡ್‌ನಲ್ಲಿ ಹಣ ಹೂಡಿದ್ದೆ. ಅದರಿಂದ ಲಾಭಕ್ಕಿಂತ ಹೆಚ್ಚು ನಷ್ಟವೇ ಆಯಿತು. ಕಳೆದ ತಿಂಗಳು ಆ ಮೊತ್ತವನ್ನು ಹಿಂಪಡೆದು ಬ್ಯಾಂಕ್‌ನಲ್ಲಿ ಇಟ್ಟಿದ್ದೆ. ಚಿನ್ನದ ಬೆಲೆ ಆ ಪರಿ ಇಳಿಕೆಯಾದೀತು ಎಂದು ಊಹಿಸಿಯೂ ಇರಲಿಲ್ಲ. ಆದರೆ ಒಂದೇ ದಿನ(ಏ. 13) ರೂ1250ರವರೆಗೂ ಕಡಿಮೆಯಾಯ್ತು ನೋಡಿ ಅದೇ ದಿನ ಕಾಕತಾಳೀಯ ಎಂಬಂತೆ ನಾನು ಎಂದಿನಂತೆ ಹೋಗುವ ಚಿನ್ನಾಭರಣ ಮಳಿಗೆಗೇ ಹೋಗಿದ್ದೆ. ಒಂದು ಹಾರ ಕೊಳ್ಳುವ ಇರಾದೆ ಇತ್ತು. ಆದರೆ ಬೆಲೆ ನೋಡಿ ಅಷ್ಟೂ ಮೊತ್ತದ ಒಡವೆಗಳನ್ನು ಬುಕ್ ಮಾಡಿದೆ. ಅಕ್ಷಯ ತೃತೀಯದಂದು ತರುತ್ತೇನೆ' ಎಂದು ಗೆಲುವಿನ ನಗೆ ಬೀರುತ್ತಾರೆ ಬೆಂಗಳೂರು ಜೆ.ಪಿ. ನಗರದ ನಿವಾಸಿ,      ಸಾಫ್ಟ್‌ವೇರ್ ಕಂಪೆನಿ ಉದ್ಯೋಗಿ ರಚನಾ.

`ಚಿನ್ನ ಅಂದರೆ ಅಡವು'
`ಸತ್ಯ ಹೇಳ್ತೀನಿ, ನನಗೆ ಒಡವೆಗಳನ್ನು ಧರಿಸುವ ಹುಚ್ಚು ಇಲ್ಲ. ನನ್ನ ಪಾಲಿಗೆ ಚಿನ್ನವೆಂದರೆ ತುರ್ತು ಸಂದರ್ಭದಲ್ಲಿ ಅಡವು ಇಡಲು ದಕ್ಕುವ ಆಪದ್ಬಾಂಧವ. ಅದೇ ಉದ್ದೇಶದಿಂದ ಪ್ರತಿ ವರ್ಷ ಏನಾದರೂ ಒಡವೆ ಖರೀದಿ ಮಾಡುತ್ತಲೇ ಇರುತ್ತೇನೆ. ಆದರೆ ಈ ಬಾರಿ ನನ್ನ ತಾಯಿಗೆ ಕೈ ಬಳೆ ಮಾಡಿಸಿಕೊಟ್ಟೆ.

ಚಿನ್ನ ಚಿನ್ನ ಆಸೈ...ಬೆಲೆ ಇಳಿಕೆಯಾಗಿದ್ದಕ್ಕೆ ಅವರಿಗೆ ಗಿಫ್ಟ್'.
`ಮದುವೆಯಾಗಿದ್ದಿದ್ದರೆ ನಾನು ಹೀಗೆ ಅಂದುಕೊಂಡಂತೆ ಚಿನ್ನವನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲವೇನೊ? ನೋಡಿ, ಬ್ಯಾಚುಲರ್ ಲೈಫ್‌ನಿಂದ ಎಷ್ಟು ಲಾಭ ಇದೆ' ಎಂದು ಚಟಾಕಿ ಹಾರಿಸಿದವರು ಬೆಂಗಳೂರಿನ ವಕೀಲ ಪಾರ್ಥಗೌಡ.

ನತದೃಷ್ಟೆಯ ಮಾತು
ಲಕ್ಷಗಟ್ಟಲೆ ದುಡ್ಡು ಕೂಡಿಟ್ಟವರು ಅಥವಾ ಭರಿಸಲು ಸಾಧ್ಯವಿರುವವರ ಮಾತು ಹಾಗಿರಲಿ. ವರ್ಷಕ್ಕೆ ಎರಡು ಮೂರು ಗ್ರಾಂನಷ್ಟು ಚಿನ್ನ ಖರೀದಿಸಲು ಬೇಕಾದಷ್ಟು ಹಣ ಹೊಂದಿಸಲೂ ಒದ್ದಾಡುವವರೂ ಇಲ್ಲದಿಲ್ಲ. ಅಂತಹವರಲ್ಲಿ ಕೆಲವರಿಗೆ ದರ ಇಳಿಕೆ ಹಬ್ಬವನ್ನುಂಟು ಮಾಡಿದ್ದರೆ, ಇಲ್ಲೊಬ್ಬರು ನತದೃಷ್ಟೆಯ ಮಾತು ಕೇಳಿ. ಚಿನ್ನದ ಬೆಲೆ ಏಕಾಏಕಿ ಇಳಿಕೆಯಾಗುವುದಕ್ಕೂ ಎರಡು ದಿನ ಹಿಂದೆಯಷ್ಟೇ ಅವರು ಎರಡೂವರೆ ಗ್ರಾಂನ ಆಭರಣ ಖರೀದಿಸಿದ್ದರಂತೆ. ಎರಡು ದಿನ ಕಳೆದಿದ್ದರೆ ಅದೇ ಬಜೆಟ್‌ಗೆ ನಾಲ್ಕೈದು ಗ್ರಾಂ ದಕ್ಕುತ್ತಿತ್ತು!

`ನಮ್ಮಂತಹ ಬಡವರಿಗೆ ದೇವರೂ ಸಹಾಯ ಮಾಡುವುದಿಲ್ಲ ಅನ್ನುವುದಕ್ಕೆ ನಾನೇ ಸಾಕ್ಷಿ. ನಾನು ಪ್ರತಿ ಅಕ್ಷಯ ತೃತೀಯಕ್ಕೆ ಎರಡೋ ಮೂರೋ ಗ್ರಾಂನ ಉಂಗುರ ಅಥವಾ ಓಲೆ ಖರೀದಿ ಮಾಡುತ್ತೇನೆ. ನನ್ನ ಸಾಮರ್ಥ್ಯ ಅಷ್ಟೇ. ಸಾಲ ಮಾಡಿದರೆ ಮರುಪಾವತಿಸುವ ಶಕ್ತಿ ಇರಬೇಕಲ್ಲ? ಅದಕ್ಕಾಗಿ ನಾನು ಪ್ರತಿವರ್ಷವೂ ಅಕ್ಷಯ ತೃತೀಯದಿಂದ ಮುಂದಿನ ಅಕ್ಷಯ ತೃತೀಯದವರೆಗೂ ಹತ್ತು ಇಪ್ಪತ್ತು, ಐವತ್ತರಂತೆ ಹಣ ಕೂಡಿಟ್ಟು ಖರೀದಿಸುವುದು.

ಈ ಬಾರಿ ಯಾವುದೋ ಸಮಸ್ಯೆ ಎದುರಾಯಿತು. ಹಾಗೆ ಕೂಡಿಟ್ಟ ಹಣದಲ್ಲೂ ಸ್ವಲ್ಪ ಖರ್ಚಾಯಿತು. ಎಲ್ಲಾ ಖಾಲಿಯಾದೀತೆಂಬ ಭಯದಲ್ಲಿ  ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಜೋಯಾಲುಕ್ಕಾಸ್ ಮಳಿಗೆಯಲ್ಲಿ ಹತ್ತು ದಿನಗಳ ಹಿಂದೆಯಷ್ಟೇ ಎರಡೂವರೆ ಗ್ರಾಂ ತೂಕದ ಕಿವಿಯೋಲೆ ಖರೀದಿಸಿದೆ. ಆಮೇಲೆ ನೋಡಿದ್ರೆ ಸಾವಿರಕ್ಕೂ ಹೆಚ್ಚು ಮೊತ್ತ ಕಡಿಮೆಯಾಯಿತು. ಹೊಟ್ಟೆಗೆ ಬೆಂಕಿ ಸುರಿದ ಹಾಗಾಯಿತು. ನಮ್ಮಂತಹವರ ಕಷ್ಟ ಹೇಗಿದೆ ನೋಡಿ' ಎಂದು ಕರುಬುತ್ತಾರೆ, ಖಾಸಗಿ ಕಂಪೆನಿ ಉದ್ಯೋಗಿ ವಸಂತಿ.

ಹೀಗೆ, ಚಿನ್ನದ ಬೆಲೆ ಚಿನ್ನದಂಥ ಕನಸುಗಳನ್ನು ನನಸೂ ಮಾಡಿದೆ, ನುಚ್ಚುನೂರೂ ಮಾಡಿದೆ.

ವಿವಿಧ ಮೂಲಗಳಿಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT