ADVERTISEMENT

ಚಿನ್ನಾಭರಣ ವರ್ತಕರ ಜೊತೆ ಇಂದು ಸಚಿವ ಪ್ರಣವ್ ಸಂಧಾನ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2012, 19:30 IST
Last Updated 5 ಏಪ್ರಿಲ್ 2012, 19:30 IST

ನವದೆಹಲಿ (ಪಿಟಿಐ): ಬ್ರಾಂಡ್ ರಹಿತ ಚಿನ್ನಾಭರಣಗಳ ಮೇಲೆ ಅಬಕಾರಿ ಸುಂಕ ವಿಧಿಸುವ ಸರ್ಕಾರದ ನಿರ್ಧಾರಕ್ಕೆ ದೇಶದಾದ್ಯಂತ ಭಾರಿ ಪ್ರತಿಭಟನೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಸಮಸ್ಯೆ ಬಗೆಹರಿಸಲು ಹಣಕಾಸು ಸಚಿವ  ಪ್ರಣವ್ ಮುಖರ್ಜಿ ಶುಕ್ರವಾರ ಚಿನ್ನಾಭರಣ ವರ್ತಕರ ಒಕ್ಕೂಟಗಳೊಂದಿಗೆ ಚರ್ಚಿಸಲಿದ್ದಾರೆ.

`ಈ ವಿಚಾರವಾಗಿ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ನಾವು ಎಲ್ಲಾ ಚಿನ್ನಾಭರಣ ವರ್ತಕರ ಒಕ್ಕೂಟಗಳಿಗೆ ಸ್ಪಷ್ಟ ಪಡಿಸಿದ್ದೇವೆ. ಹಣಕಾಸು ಸಚಿವರು ಶುಕ್ರವಾರ ವರ್ತಕರ ಸಭೆ ಕರೆದಿದ್ದಾರೆ~ ಎಂದು ಕೇಂದ್ರ ಅಬಕಾರಿ ಮತ್ತು ಸುಂಕ ಮಂಡಳಿ (ಸಿಬಿಇಸಿ) ಅಧ್ಯಕ್ಷ ಎಸ್.ಕೆ ಗೋಯಲ್ ಹೇಳಿದ್ದಾರೆ.

2012-13ರ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿರುವ ಬ್ರಾಂಡ್ ರಹಿತ ಆಭರಣಗಳ  ಮೇಲೆ ಶೇ 1ರಷ್ಟು ಅಬಕಾರಿ ಸುಂಕ ವಿಧಿಸುವ ಪ್ರಸ್ತಾವನೆಯನ್ನು ಹಿಂದೆಪಡೆಯುವಂತೆ ವಿವಿಧ ವಲಯಗಳಿಂದ ಬಂದಿರುವ ಬೇಡಿಕೆಯನ್ನು  ಕೇಂದ್ರ ಸರ್ಕಾರ ಪರಿಶೀಲಿಸುತ್ತಿರುವುದಾಗಿ  ಪ್ರಣವ್ ಕಳೆದ ವಾರ ಹೇಳಿದ್ದರು.

ತೀವ್ರ ವಿರೋಧದ ಹಿನ್ನೆಲೆಯಲ್ಲಿ  ಅಬಕಾರಿ ಸುಂಕ ವಿಧಿಸುವ ನಿರ್ಧಾರವನ್ನು ಹಿಂದೆ ಪಡೆಯುವ ಸುಳಿವನ್ನು ಪ್ರಣವ್ ನೀಡಿದ್ದಾರೆ.

ಆದರೆ, ಚಿನ್ನ ಮತ್ತು ಪ್ಲಾಟಿನಮ್ ಆಮದು ಸುಂಕ ಏರಿಕೆ ಮಾಡುವ ನಿರ್ಧಾರವನ್ನು ಹಿಂತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.