ADVERTISEMENT

ಚಿನ್ನ: ನೀರ್ಗುಳ್ಳೆ?

​ಕೇಶವ ಜಿ.ಝಿಂಗಾಡೆ
Published 23 ಆಗಸ್ಟ್ 2011, 19:30 IST
Last Updated 23 ಆಗಸ್ಟ್ 2011, 19:30 IST
ಚಿನ್ನ: ನೀರ್ಗುಳ್ಳೆ?
ಚಿನ್ನ: ನೀರ್ಗುಳ್ಳೆ?   

ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಯಾವುದೇ ಎಗ್ಗಿಲ್ಲದೇ ನಾಗಾಲೋಟದಲ್ಲಿ ಓಡುತ್ತಲೇ ಇದೆ. ಜಾಗತಿಕ ಅರ್ಥ ವ್ಯವಸ್ಥೆಯ ಅನಿಶ್ಚಿತತೆ ಹೆಚ್ಚಿದಂತೆ ಚಿನ್ನದ ಬೆಲೆಯೂ ಏರುಗತಿಯಲ್ಲಿಯೇ ಇರಲಿದೆ.

ಈ `ಹಳದಿ ಲೋಹ~ವು ಅನಿಶ್ಚಿತ ಪರಿಸ್ಥಿತಿಗಳ  ವಿರುದ್ಧ ಗರಿಷ್ಠ ರಕ್ಷಣೆ ನೀಡುತ್ತದೆ ಎನ್ನುವ ಜನರ ಮತ್ತು ಹೂಡಿಕೆದಾರರ ನಂಬಿಕೆಯೇ ಸದ್ಯಕ್ಕೆ ಚಿನ್ನಕ್ಕೆ ಇನ್ನಿಲ್ಲದ ಬೇಡಿಕೆ ವ್ಯಕ್ತವಾಗಿ ಬೆಲೆ ದುಬಾರಿಯಾಗಲು ಮುಖ್ಯ ಕಾರಣವಾಗಿದೆ.

ಚಿನ್ನದ ಬೆಲೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈಗಾಗಲೆ ಪ್ರತಿ  ಔನ್ಸ್‌ಗೆ (28.3 ಗ್ರಾಂಗಳಿಗೆ) 1800 ಡಾಲರ್  (ರೂ. 81,000) ದಾಟಿದ್ದು, ಶೀಘ್ರದಲ್ಲಿಯೇ 3000 ಡಾಲರ್‌ಗೆ (ರೂ.1,35,000) ತಲುಪಲಿದೆ ಎನ್ನುವ ಅಂದಾಜು ಮಾಡಲಾಗಿದೆ.

ಆದರೆ, ಇದೊಂದು ನೀರ್ಗುಳ್ಳೆಯಾಗಿದ್ದು, ಯಾವುದೇ ಕ್ಷಣದಲ್ಲಿ ಒಡೆಯಬಹುದು. ಕೆಲವೇ ದಿನಗಳಲ್ಲಿ ಈ ನಾಗಾಲೋಟಕ್ಕೆ ಕಡಿವಾಣ ಬೀಳಬಹುದು ಎಂದು ಕನ್ಸಾಸ್ ಸ್ಟೇಟ್ ಯೂನಿವರ್ಸಿಟಿಯ ಆರ್ಥಿಕ ಪರಿಣತರು ಎಚ್ಚರಿಸಿರುವುದು ಸಮಾಧಾನ ತರುವ ಸಂಗತಿಯಾಗಿದೆ.

ಅಮೆರಿಕ ಸರ್ಕಾರದ ವಿತ್ತೀಯ ಕೊರತೆ ಹೆಚ್ಚಳ, ವಿಷಮಿಸುತ್ತಿರುವ ಆರ್ಥಿಕ ಪರಿಸ್ಥಿತಿಯ ಫಲವಾಗಿ ಅಮೆರಿಕದ ಅರ್ಥ ವ್ಯವಸ್ಥೆ ಹಿಂಜರಿತಕ್ಕೆ ಗುರಿಯಾಗುವ ಸಾಧ್ಯತೆಗಳು ವಿಶ್ವದಾದ್ಯಂತ ಹೂಡಿಕೆದಾರರಲ್ಲಿ ಆತಂಕ ಮೂಡಿಸಿವೆ.
 
ಇಂತಹ ಅನಿಶ್ಚಿತ ಪರಿಸ್ಥಿತಿಯಲ್ಲಿ ಹೂಡಿಕೆದಾರರು ತಮ್ಮ ಬಳಿ ಇರುವ ಷೇರು, ಕಾರ್ಪೊರೇಟ್ ಬಾಂಡ್ ಮಾರಾಟ ಮಾಡಿ ಆ ಹಣವನ್ನು ಚಿನ್ನ ಖರೀದಿಗೆ ವಿನಿಯೋಗಿಸುತ್ತಿದ್ದಾರೆ. ದೀರ್ಘಾವಧಿಯಲ್ಲಿ ಚಿನ್ನದ ಬೆಲೆಯು ಬೆಲೆಏರಿಕೆಯ ವಿರುದ್ಧ ಗರಿಷ್ಠ ರಕ್ಷಣೆ ನೀಡುವುದರಿಂದಲೇ ಈ ಗಡಿಬಿಡಿಗೆ ಕಾರಣ.

2000ರಲ್ಲಿ ಪ್ರತಿ ಔನ್ಸ್‌ಗೆ 300  ಡಾಲರ್‌ಗಳಷ್ಟಿದ್ದ (ರೂ.13,500 ) ಬೆಲೆ  ಅಲ್ಲಿಂದಾಚೆಗೆ 6 ಪಟ್ಟುಗಳಷ್ಟು ಹೆಚ್ಚಾಗಿದೆ. ಅದು ಇನ್ನೂ ಹೆಚ್ಚಾಗುವ ಸಾಧ್ಯತೆಗಳೂ ಇವೆ. ಬೆಲೆ ಏರಿಕೆ ವೇಗ ಇನ್ನಷ್ಟು ಹೆಚ್ಚಲೂಬಹುದು.

ಆದರೆ, ಅದೊಂದು ನೀರ್ಗುಳ್ಳೆ ಆಗಿರಲಿದ್ದು, ಬೆಲೆಗಳು ಏರಿದ ವೇಗದಲ್ಲಿಯೇ ಕೆಳಗೆ ಇಳಿಯಬಹುದು ಎಂದು ಕನ್ಸಾಸ್ ಸ್ಟೇಟ್ ಯೂನಿವರ್ಸಿಟಿಯ ಆರ್ಥಿಕ ತಜ್ಞ ಲಾಯ್ಡ ಥಾಮಸ್ ಅಭಿಪ್ರಾಯಪಟ್ಟಿದ್ದಾರೆ.
 
ತಮ್ಮ ಈ ವಾದಕ್ಕೆ ಅವರು ಗೃಹ ನಿರ್ಮಾಣ ರಂಗದಲ್ಲಿನ ಬೆಲೆ ಏರಿಕೆಯ ನಿದರ್ಶನ ನೀಡುತ್ತಾರೆ.  ಗೃಹ ನಿರ್ಮಾಣ ಯೋಜನೆಗಳ ಬೆಲೆಗಳು ಯಾವತ್ತೂ ಕುಸಿಯುವುದಿಲ್ಲ ಎನ್ನುವುದು ಜನರ ನಂಬಿಕೆಯಾಗಿದೆ.

ಎರಡು ವರ್ಷಗಳ ಹಿಂದೆ ಅಮೆರಿಕದ ಬಹುತೇಕ ನಗರಗಳಲ್ಲಿ ಶೇ 30ರಷ್ಟು ಬೆಲೆಗಳು ಅಗ್ಗವಾಗಿದ್ದವು. (ಅಮೆರಿಕದ ಬಿಕ್ಕಟ್ಟಿನ ಸಂದರ್ಭದಲ್ಲಿ ನಮ್ಮಲ್ಲೂ ರಿಯಲ್ ಎಸ್ಟೇಟ್ ಬೆಲೆಗಳು ಗಮನಾರ್ಹವಾಗಿ ಕುಸಿತ ಕಂಡಿದ್ದವು) ಅದೇ ವಿದ್ಯಮಾನ ಚಿನ್ನದಲ್ಲಿಯೂ ಪುನರಾವರ್ತನೆ ಆಗಲಿದೆ  ಎನ್ನುವುದು ಅವರ ಅಂದಾಜು.

ಕಳೆದ ಹತ್ತು ವರ್ಷಗಳಲ್ಲಿ ಚಿನ್ನದ ಬೆಲೆ ಪ್ರತಿ ವರ್ಷ ಶೇ 17ರಷ್ಟು ಏರಿಕೆ ಕಾಣುತ್ತಲೇ ಇದೆ. ಗ್ರಾಹಕರು ಖರೀದಿಸುವ ಇತರ ಸರಕುಗಳ ಬೆಲೆಗಳು ಮಾತ್ರ ವಾರ್ಷಿಕ ಶೇ 3ರಷ್ಟು ಏರಿಕೆ ಕಂಡಿವೆ. ಹೀಗಾಗಿ ಚಿನ್ನದ ಬೆಲೆಯ ಈ ಓಟ ಬಹಳ ಕಾಲ ಮುಂದುವರೆಯಲಾರದು. ಮುಂದೊಂದು ದಿನ ಬೆಲೆಗಳು ಕುಸಿಯಬಹುದು.

ಖಚಿತವಾಗಿ ಯಾವಾಗ ಇದು ಘಟಿಸುತ್ತದೆ ಎನ್ನುವುದನ್ನು ನಾನು ಹೇಳಲಾರೆ~ ಎಂದೂ ಥಾಮಸ್ ಹೇಳುತ್ತಾರೆ. ಥಾಮಸ್ ಅವರ ಅಂದಾಜನ್ನು ಇತರ ಹಣಕಾಸು ಪರಿಣತರೂ ಸಮರ್ಥಿಸುತ್ತಾರೆ.

ಹಣ ಹೂಡಿಕೆ ದೃಷ್ಟಿಯಿಂದ ಅಭರಣ ಮತ್ತು ನಾಣ್ಯ ಖರೀದಿ ಉತ್ತಮ ಆಯ್ಕೆಗಳಲ್ಲ. ಷೇರು ವಹಿವಾಟಿನ ನಿಧಿಗಳು  (ಇಟಿಎಫ್) ಹೆಚ್ಚು  ತಲೆನೋವು ನೀಡುವುದಿಲ್ಲ. ಚಿನ್ನದ ಮ್ಯೂಚುವಲ್ ಫಂಡ್‌ಗಳು ಹೆಚ್ಚು ರಕ್ಷಣೆ ನೀಡುತ್ತವೆ  ಎಂದು ಥಾಮಸ್ ಮತ್ತು ಆ್ಯನ್ ಕೌಲ್ಸನ್ ಅಭಿಪ್ರಾಯಪಡುತ್ತಾರೆ.

ಷೇರು ಮತ್ತು ಬಾಂಡ್‌ಗಳಲ್ಲಿ ಹಣ ತೊಡಗಿಸುವುದಕ್ಕೆ ಹೋಲಿಸಿದರೆ ಚಿನ್ನದಲ್ಲಿ ಹೂಡಿಕೆ ಮಾಡಿದರೆ ಕಾಲ ಕಾಲಕ್ಕೆ ನಿಗದಿತ ಹಣ ಕೈಸೇರಲಾರದು. ಇಲ್ಲಿ ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚು ಬೆಲೆಗೆ ಮಾರಾಟ ಮಾಡಿಯೇ ಲಾಭ ಮಾಡಿಕೊಳ್ಳಬೇಕಾಗುತ್ತದೆ.

ಬೆಲೆಗಳು ಗರಿಷ್ಠ ಮಟ್ಟದಲ್ಲಿ ಇದ್ದರೂ  ಸದ್ಯಕ್ಕೆ ಖರೀದಿಸುವುದು ಉತ್ತಮ ನಿರ್ಧಾರವಾಗಿರುತ್ತದೆ. ಬಳಿಯಲ್ಲಿ ಇರುವ ಹಣವನ್ನೆಲ್ಲ, ಬರೀ ಚಿನ್ನದಲ್ಲಿಯೇ ತೊಡಗಿಸುವುದೂ ಮೂರ್ಖತನದ ನಿರ್ಧಾರವಾದೀತು. ದೀರ್ಘಾವಧಿಯಲ್ಲಿನ ಲಾಭದ ಆಸೆ ಇದ್ದರೆ ಮಾತ್ರ ಚಿನ್ನದಲ್ಲಿ ಹಣ ಹೂಡಿಕೆ ಮಾಡುವುದು ಉತ್ತಮ ನಿರ್ಧಾರ.

ಅಮೆರಿಕದ ವಿತ್ತೀಯ ಕೊರತೆ ನಿಧಾನವಾಗಿ ಕಡಿಮೆಯಾಗತೊಡಗಿದರೆ, ಚಿನ್ನದ ಬೆಲೆ ಶೇ 50ರಷ್ಟು ಕಡಿಮೆಯಾಗಬಹುದು. ಅರ್ಥವ್ಯವಸ್ಥೆಯ ಇತರ ಚಟುವಟಿಕೆಗಳಲ್ಲಿ ಹೂಡಿಕೆದಾರರ ಆತ್ಮವಿಶ್ವಾಸ ವೃದ್ಧಿ ಆಗುತ್ತಿದ್ದಂತೆ, ಚಿನ್ನದ ಹೂಡಿಕೆ ಮೌಲ್ಯ ಕಡಿಮೆ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.