ADVERTISEMENT

ಚಿನ್ನ ಮತ್ತಷ್ಟು ದುಬಾರಿ?

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2011, 19:30 IST
Last Updated 27 ಫೆಬ್ರುವರಿ 2011, 19:30 IST

ನವದೆಹಲಿ (ಪಿಟಿಐ): ಮೇ ತಿಂಗಳ ಅಂತ್ಯಕ್ಕೆ ಚಿನ್ನದ ಧಾರಣೆ 10 ಗ್ರಾಂಗೆ  ರೂ. 21,300 ಹಾಗೂ ಬೆಳ್ಳಿ 1 ಕೆ.ಜಿಗೆ ರೂ. 52,000 ತಲುಪಲಿದೆ ಎಂದು ಹಣಕಾಸು ಸೇವೆಗಳನ್ನು ಒದಗಿಸುವ ‘ಎಸ್‌ಎಂಸಿ’ ಸಂಸ್ಥೆ ಹೇಳಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಷೇರುಪೇಟೆಯಿಂದ ತಮ್ಮ  ಬಂಡವಾಳವನ್ನು ದೊಡ್ಡ ಪ್ರಮಾಣದಲ್ಲಿ ಹಿಂದಕ್ಕೆ ಪಡೆಯುತ್ತಿದ್ದು, ‘ಬಿಎಸ್‌ಇ ‘ ಮತ್ತು ‘ನಿಫ್ಟಿ’ ಗಣನೀಯ ಇಳಿಕೆ ಕಾಣುತ್ತಿದೆ.   ಜಾಗತಿಕ ವಿದ್ಯಮಾನಗಳು ಪೇಟೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡುತ್ತಿರುವ  ಹಿನ್ನೆಲೆಯಲ್ಲಿ ಹೂಡಿಕೆದಾರರು  ಚಿನ್ನದ ಮೇಲೆ ಬಂಡವಾಳ ತೊಡಗಿಸಲು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಹೀಗಾಗಿ ಚಿನ್ನಾಭರಣಗಳ ಬೆಲೆ ಗಣನೀಯವಾಗಿ ಹೆಚ್ಚಬಹುದು ಎಂದು ‘ಎಸ್‌ಎಂಸಿ’ಯ ವ್ಯವಸ್ಥಾಪಕ ನಿರ್ದೇಶಕ ಡಿ.ಕೆ ಅಗರ್‌ವಾಲ್ ಅಭಿಪ್ರಾಯಪಟ್ಟಿದ್ದಾರೆ.

 ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮುಂಬೈ ಷೇರುಪೇಟೆ ಶೇ 13.ರಷ್ಟು ಕುಸಿತ ಕಂಡಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಹೂಡಿಕೆ  ರೂ. 1.42 ಲಕ್ಷದಿಂದ ರೂ. 1.37 ಲಕ್ಷಕ್ಕೆ ಇಳಿದಿದೆ. ಮುಂಚೂಣಿ ಹೂಡಿಕೆದಾರರು ಸಾರ್ವಕಾಲಿಕ ಮೌಲ್ಯ ಹೊಂದಿರುವ ಚಿನ್ನ, ಬೆಳ್ಳಿಯ ಮೇಲೆ ಹಣ ತೊಡಗಿಸುವುದು ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯದು ಎನ್ನುವ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ ಎನ್ನುತ್ತಾರೆ ಅವರು.

ಫೆಬ್ರುವರಿ 24ರಂದು ಬೆಳ್ಳಿಯ ಧಾರಣೆ ಪ್ರತಿ ಕೆ.ಜಿಗೆ ರೂ. 50,500 ತಲುಪಿ ಇತಿಹಾಸ ನಿರ್ಮಿಸಿತ್ತು. ಇದೇ ಅವಧಿಯಲ್ಲಿ ಚಿನ್ನ ಕೂಡ 10 ಗ್ರಾಂಗೆ ಗರಿಷ್ಠ ಧಾರಣೆ ರೂ.21,240 ತಲುಪಿತ್ತು. ಮದುವೆ ಸೀಜನ್ ಹಿನ್ನೆಲೆಯಲ್ಲಿ ಚಿನ್ನಾಭರಣ ವರ್ತಕರಿಂದ ಮತ್ತು ಗ್ರಾಹಕರಿಂದ ಖರೀದಿ ಭರಾಟೆ ಹೆಚ್ಚಿದ್ದು, ಬೆಲೆ ಏರಿಕೆಗೆ  ಮತ್ತೊಂದು ಪ್ರಮುಖ ಕಾರಣ ಎನ್ನಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.