ನವದೆಹಲಿ (ಪಿಟಿಐ): ಚಿನ್ನಾಭರಣ ರಫ್ತು ವಹಿವಾಟು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಶನಿವಾರ ಪ್ರತಿ ಗ್ರಾಂ ಚಿನ್ನದ ಮೇಲೆ ವಿಧಿಸುತ್ತಿದ್ದ ತೆರಿಗೆ ಮರುಪಾವತಿ ದರವನ್ನು (ಸೋಡಿಸುಂಕ)ರೂ100 ರಿಂದ ರೂ173ಕ್ಕೆ ಹೆಚ್ಚಿಸಿದೆ.
ಆಮದು ಮಾಡಿಕೊಂಡ ಸರಕನ್ನು ರಫ್ತು ಮಾಡುವಾಗ, ಈ ಹಿಂದೆ ತೆತ್ತಿದ್ದ ಆಮದು ಸುಂಕದಲ್ಲಿ ಪಡೆಯುವ ರಿಯಾಯ್ತಿಗೆ ಸೋಡಿ ಸುಂಕ ಎನ್ನಲಾಗುತ್ತದೆ. ಈ ಮೊದಲು .995 ಅಥವಾ ಅದಕ್ಕಿಂತ ಹೆಚ್ಚಿನ ಶುದ್ಧತೆಯ ಪ್ರತಿ ಗ್ರಾಂ ಚಿನ್ನಕ್ಕೆ ರೂ100.70 ತೆರಿಗೆ ಮರುಪಾವತಿ ದರ ನಿಗದಿಪಡಿಸಲಾಗಿತ್ತು. ಈಗ ಇದನ್ನುರೂ73 ಹೆಚ್ಚಿಸಲಾಗಿದೆ ಎಂದು ಕೇಂದ್ರ ಅಬಕಾರಿ ಮತ್ತು ಸೀಮಾ ಸುಂಕ ಮಂಡಳಿ (ಸಿಬಿಇಸಿ) ಪ್ರಕಟಣೆಯಲ್ಲಿ ತಿಳಿಸಿದೆ.
ಚಿನ್ನದ ಆಮದು ಹೆಚ್ಚಳದಿಂದ ದೇಶದ ಚಾಲ್ತಿ ಖಾತೆ ಕೊರತೆ (ಸಿಎಡಿ) ಹೆಚ್ಚಿದಾಗ ತೆರಿಗೆ ಮರು ಪಾವತಿ ದರ ಹೆಚ್ಚಿಸಲಾಗುತ್ತದೆ. ಸದ್ಯ `ಸಿಎಡಿ' ಒಟ್ಟಾರೆ ರಾಷ್ಟ್ರೀಯ ಉತ್ಪನ್ನದ (ಜಿಡಿಪಿ) ಶೇ 5 ದಾಟಿದೆ. ಚಿನ್ನದ ಬೇಡಿಕೆ ತಗ್ಗಿಸಲು ಸರ್ಕಾರ ಈಗಾಗಲೇ ಆಮದು ದರದಲ್ಲಿ ಶೇ 8ರಷ್ಟು ಹೆಚ್ಚಳ ಮಾಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕೂಡ ಚಿನ್ನ ಆಮದಿಗೆ ಸಂಬಂಧಿಸಿದಂತೆ ಬ್ಯಾಂಕುಗಳಿಗೆ ನಿರ್ಬಂಧ ವಿಧಿಸಿವೆ.
`ಚಿನ್ನ ಆಮದು ದರ ಹೆಚ್ಚಳ ಮಾಡಿದ್ದಕ್ಕೆ ಪರಿಹಾರ ಎನ್ನುವಂತೆ ಸರ್ಕಾರ ಈಗ ತೆರಿಗೆ ಮರುಪಾವತಿ ದರ ಏರಿಕೆ ಮಾಡಿದೆ. ಕಳೆದ ಜನವರಿಯಿಂದ ಈ ದರ ಪರಿಷ್ಕರಣೆ ಆಗಿರಲಿಲ್ಲ' ಎಂದು ಚಿನ್ನಾಭರಣ ರಫ್ತು ವಹಿವಾಟು ಸಂಸ್ಥೆಗಳ ಒಕ್ಕೂಟದ ಮಹಾನಿರ್ದೇಶಕ ಅಜಯ್ ಶಾಹಿ ಅಭಿಪ್ರಾಯಪಟ್ಟಿದ್ದಾರೆ.
`ಸರ್ಕಾರದ ಕ್ರಮದಿಂದ ಚಿನ್ನಾಭರಣ ರಫ್ತು ವಹಿವಾಟು ನಡೆಸುವ ಸಂಸ್ಥೆಗಳಿಗೆ ಅನುಕೂಲವಾಗಲಿವೆ. ಈಗಾಗಲೇ ಶೇ 8ರಷ್ಟು ಆಮದು ದರದಿಂದ ಉದ್ಯಮ ನಷ್ಟದಲ್ಲಿತ್ತು' ಎಂದು ದೆಹಲಿ ಮೂಲದ ವರ್ತಕರೊಬ್ಬರು ಹೇಳಿದ್ದಾರೆ.
ಚಿನ್ನ ಮತ್ತು ಬೆಳ್ಳಿ ಆಮದು ಮೇ ತಿಂಗಳಲ್ಲಿ ಶೇ 90ರಷ್ಟು ಹೆಚ್ಚಿದ್ದು 840 ಕೋಟಿ ಡಾಲರ್‌ಗಳಿಗೆ ಏರಿಕೆ ಕಂಡಿದೆ. ಏಪ್ರಿಲ್-ಮೇ ಅವಧಿಯಲ್ಲಿ ಒಟ್ಟಾರೆ 1,588 ಕೋಟಿ ಡಾಲರ್ ಮೌಲ್ಯದ ಚಿನ್ನ ಆಮದು ಮಾಡಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.