ADVERTISEMENT

ಜಂಟಿ ಹೂಡಿಕೆ: ಫೋರ್ಟಿಸ್‌ ಸಮ್ಮತಿ

ಪಿಟಿಐ
Published 11 ಮೇ 2018, 19:30 IST
Last Updated 11 ಮೇ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಫೋರ್ಟಿಸ್‌ ಆಡಳಿತ ಮಂಡಳಿಯು ಮುಂಜಾಲ್‌–ಬರ್ಮನ್‌ ಸಂಸ್ಥೆಗಳ ಜಂಟಿ ಹೂಡಿಕೆ ಪ್ರಸ್ತಾವವನ್ನು ಒಪ್ಪಿಕೊಂಡಿದೆ.

18 ತಿಂಗಳಿನಿಂದ ಸಂಸ್ಥೆಯ ಷೇರು ಖರೀದಿಗೆ ಮೂಡಿದ್ದ ಪೈಪೋಟಿ ಅಂತ್ಯವಾಗಿದೆ. ಗುರುವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಸಲಹಾ ಸಮಿತಿ ನೀಡಿದ ಶಿಫಾರಸುಗಳನ್ನು ಪರಿಶೀಲನೆ ನಡೆಸಿದ ಬಳಿಕ ಆಡಳಿತ ಮಂಡಳಿಯು ಈ ಅಂತಿಮ ನಿರ್ಧಾರ ತೆಗೆದುಕೊಂಡಿದೆ.

ಮುಂಜಾಲ್ ಮತ್ತು ಬರ್ಮನ್‌ ಕುಟುಂಬಗಳು ಮೇ 1 ರಂದು ಹೊಸ ಹೂಡಿಕೆ ಕೊಡುಗೆ ನೀಡಿದ್ದವು. ಪ್ರತಿ ಷೇರಿಗೆ ₹ 167 ರಂತೆ ₹ 800 ಕೋಟಿ ಹೂಡಿಕೆ ಮಾಡಲು ಮುಂದಾಗಿತ್ತು. ಇದಲ್ಲದೆ ಪ್ರತಿ ಷೇರಿಗೆ ₹ 176 ರಂತೆ ಆದ್ಯತಾ ಷೇರು ನೀಡಿಕೆ ಮೂಲಕ ₹ 1,000 ಕೋಟಿ ಹೂಡಿಕೆ ಮಾಡುವುದಕ್ಕೂ ಈ ಸಂಸ್ಥೆಗಳು ಒಪ್ಪಿಕೊಂಡಿವೆ ಎಂದು ಫೋರ್ಟಿಸ್‌ ಷೇರುಪೇಟೆಗೆ ಮಾಹಿತಿ ನೀಡಿದೆ.

ADVERTISEMENT

‘ಹೊಸ ಪಾಲುದಾರರು ನಮ್ಮಲ್ಲಿ ವಿಶ್ವಾಸ ಇಟ್ಟಿದ್ದಾರೆ. ದೀರ್ಘಾವಧಿ ಹೂಡಿಕೆದಾರರಾಗಿ, ಫೋರ್ಟಿಸ್‌ ಅನ್ನು ಒಂದು ಉತ್ತಮ ಆರೋಗ್ಯ ಸೇವಾ ಸಂಸ್ಥೆಯನ್ನಾಗಿ ರೂಪಿಸಲು ಮತ್ತು ಎಲ್ಲಾ ಪಾಲುದಾರರ ಮೌಲ್ಯವನ್ನು ಹೆಚ್ಚಿಸಲು ನಾವು ಬದ್ಧರಾಗಿದ್ದೇವೆ’ ಎಂದು ಹೀರೊ ಎಂಟರ್‌ಪ್ರೈಸಸ್‌ ಅಧ್ಯಕ್ಷ ಸುನಿಲ್‌ ಕಾಂತ್‌ ಮುಂಜಾಲ್ ಪ್ರತಿಕ್ರಿಯಿಸಿದ್ದಾರೆ.

ಷೇರು ಮಾರಾಟದ ತಕ್ಷಣದ ನಿರ್ಧಾರದಿಂದ ಸಾಮರ್ಥ್ಯ ವೃದ್ಧಿ, ಪ್ರತಿಭೆಗಳನ್ನು ಸಂಸ್ಥೆಯಲ್ಲಿ ಉಳಿಸಿಕೊಳ್ಳುವುದು, ವಹಿವಾಟು ವಿಸ್ತರಣೆಗೆ ನೆರವಾಗಲಿದೆ ಎಂದು ಆನಂದ್ ಬರ್ಮನ್‌ ಅಭಿಪ್ರಾಯಪಟ್ಟಿದ್ದಾರೆ.

‘ಐವರಲ್ಲಿ ಮೂವರು ಸದಸ್ಯರು ಮುಂಜಾಲ್‌–ಬರ್ಮನ್‌ ಕೊಡುಗೆಯ ಪರವಾಗಿ ಮತ ಹಾಕಿದ್ದಾರೆ. ತಜ್ಞರ ಸಮಿತಿ, ಎರಡು ಹಣಕಾಸು ಸಂಸ್ಥೆಗಳು ಹಾಗೂ ಒಂದು ಕಾನೂನು ಸಲಹಾ ಸಂಸ್ಥೆಯ ಸಲಹೆ ಪಡೆದು ನಿರ್ಧಾರ ಕೈಗಳ್ಳಲಾಗಿದೆ’ ಎಂದು ಫೋರ್ಟಿಸ್‌ ಹೆಲ್ತ್‌ಕೇರ್‌ನ ನಿರ್ದೇಶಕ ಬ್ರಿಯಾನ್‌ ಡಬ್ಲ್ಯು ಟೆಂಪೆಸ್ಟ್‌ ಪ್ರತಿಕ್ರಿಯಿಸಿದ್ದಾರೆ.

‘30 ದಿನದ ಒಳಗಾಗಿ ಪಾಲುದಾರರ ಸಭೆ ನಡೆಯಲಿದ್ದು, ನಮ್ಮ ನಿರ್ಧಾರವನ್ನು ಅವರು ಬೆಂಬಲಿಸುವ ವಿಶ್ವಾಸವಿದೆ’ ಎಂದೂ ಹೇಳಿದ್ದಾರೆ.

ನಿರಾಶೆ ಮೂಡಿಸಿದೆ: ಐಐಎಚ್‌

ಫೋರ್ಟಿಸ್‌ ಹೆಲ್ತ್‌ಕೇರ್‌ ಷೇರು ಖರೀದಿ ಅವಕಾಶ ಕಳೆದುಕೊಂಡಿರುವುದು ನಿರಾಶೆ ಮೂಡಿಸಿದೆ ಎಂದು ಮಲೇಷ್ಯಾದ ಐಎಚ್‌ಎಚ್‌ ಹೆಲ್ತ್‌ಕೇರ್ ಸಂಸ್ಥೆ ಹೇಳಿದೆ.

‘ಉಳಿದೆಲ್ಲಾ ಹೂಡಿಕೆ ಕೊಡುಗೆಗಳನ್ನು ಪರಿಶೀಲಿಸಿದರೆ ನಮ್ಮ ಸಂಸ್ಥೆ ಅತ್ಯಂತ ಗರಿಷ್ಠ ಮೊತ್ತದ ಕೊಡುಗೆಯನ್ನು ನೀಡಿತ್ತು. ಅಲ್ಪಾವಧಿ ಮತ್ತು ದೀರ್ಘಾವಧಿಯ ಬಂಡವಾಳ ಹೂಡಿಕೆಯ ಆಯ್ಕೆ ನೀಡಲಾಗಿತ್ತು. ಹೀಗಾಗಿ ಫೋರ್ಟಿಸ್‌ ಆಡಳಿತ ಮಂಡಳಿ ತೆಗೆದುಕೊಂಡಿರುವ ನಿರ್ಧಾರದಿಂದ ಅಸಮಾಧಾನವಾಗಿದೆ’ ಎಂದು ಐಎಚ್‌ಎಚ್ ಹೆಲ್ತ್‌ಕೇರ್‌ನ  ಸಿಇಒ ಟಾನ್‌ ಸೀ ಲೆಂಗ್‌ ಪ್ರತಿಕ್ರಿಯಿಸಿದ್ದಾರೆ. ಐಎಚ್‌ಎಚ್‌ ಸಂಸ್ಥೆಯು ತಕ್ಷಣವೇ ಪ್ರತಿ ಷೇರಿಗೆ ₹ 160 ರಂತೆ ₹ 650 ಕೋಟಿಯನ್ನೂ ಒಳಗೊಂಡು ಒಟ್ಟಾರೆ ₹ 4,000 ಕೋಟಿ ಬಂಡವಾಳ ತೊಡಗಿಸಲು ಸಿದ್ಧವಿರುವುದಾಗಿ ತಿಳಿಸಿತ್ತು.

**
ನಮ್ಮ ಕೊಡುಗೆ ಒಪ್ಪಿಕೊಂಡಿರುವುದಕ್ಕೆ ಸಂತೋಷವಾಗಿದೆ. ಉತ್ತಮ ಹೂಡಿಕೆ ಪರಿಹಾರವನ್ನು ನೀಡಿದ್ದೇವೆ.

– ಸುನಿಲ್‌ ಕಾಂತ್ ಮುಂಜಾಲ್‌, ಹೀರೊ ಎಂಟರ್‌ಪ್ರೈಸಸ್‌ ಅಧ್ಯಕ್ಷ

ಆರೋಗ್ಯ ವಲಯದಲ್ಲಿ ಹೆಚ್ಚಿನ ಹೂಡಿಕೆ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಕೊಡಗೆಯನ್ನು ಒಪ್ಪಿಕೊಳ್ಳಲಾಗಿದೆ.

– ಬ್ರಿಯಾನ್‌ ಡಬ್ಲ್ಯು ಟೆಂಪೆಸ್ಟ್‌, ಫೋರ್ಟಿಸ್‌ ಹೆಲ್ತ್‌ಕೇರ್‌ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.