ADVERTISEMENT

ಜಾಗತಿಕ ಹೂಡಿಕೆದಾರರ ಸಮಾವೇಶ: ರೈತ ಪಾಲುದಾರಿಕೆಯ ಉದ್ಯಮಕ್ಕೆ ಅನುಮತಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2012, 19:30 IST
Last Updated 3 ಡಿಸೆಂಬರ್ 2012, 19:30 IST

ಬೆಂಗಳೂರು: ಉದ್ಯಮಿಗಳು ರೈತರನ್ನು ಪಾಲುದಾರರನ್ನಾಗಿ ಮಾಡಿಕೊಂಡು ಅವರಿಂದ ಭೂಮಿ ಪಡೆದು ಉದ್ಯಮ ಸ್ಥಾಪಿಸುವುದಕ್ಕೆ ಅನುಮತಿ ನೀಡಲು ಸರ್ಕಾರ ನಿರ್ಧರಿಸಿದೆ. ಇಂತಹ ಹೊಸ ಬಗೆಯ ಭೂಸ್ವಾಧೀನ ಪ್ರಕ್ರಿಯೆಗೆ ಒಪ್ಪಿಗೆ ನೀಡುವ ಪ್ರಸ್ತಾವ ಹಣಕಾಸು ಇಲಾಖೆಯ ಮುಂದಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ ಆರ್.ನಿರಾಣಿ ತಿಳಿಸಿದರು.

ಸೋಮವಾರ ವಿಧಾನಸೌಧದಲ್ಲಿ ನಡೆದ `ಜಾಗತಿಕ ಹೂಡಿಕೆದಾರರ ಸಮಾವೇಶ-2012'ರ ಪ್ರಗತಿ ವರದಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, `ಗುತ್ತಿಗೆ ಆಧಾರದಲ್ಲಿ ಭೂಮಿಯನ್ನು ಹೂಡಿಕೆದಾರರಿಗೆ ನೀಡುವ ಪದ್ಧತಿ ಕೃಷಿ ವಲಯದಲ್ಲಿ ಈಗಾಗಲೇ ಜಾರಿಯಲ್ಲಿದೆ. ಇದೇ ಮಾದರಿಯನ್ನು ಉದ್ಯಮ ವಲಯಕ್ಕೂ ವಿಸ್ತರಿಸಬೇಕೆಂಬ ಬೇಡಿಕೆ ಇದೆ. ಉದ್ಯಮಿಗಳ ಒತ್ತಾಸೆಯಂತೆ ಈ ಪದ್ಧತಿಗೆ ಒಪ್ಪಿಗೆ ನೀಡಲು ಸರ್ಕಾರ ಮುಂದಾಗಿದೆ. ಈ ಸಂಬಂಧ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು ಹಣಕಾಸು ಇಲಾಖೆಗೆ ಪ್ರಸ್ತಾವ ಸಲ್ಲಿಸಿದೆ' ಎಂದರು.

ಖಾಸಗಿಯಾಗಿ ಕೈಗಾರಿಕಾ ಪ್ರದೇಶಗಳ ನಿರ್ಮಾಣಕ್ಕೆ ಅನುಮತಿ ನೀಡುವುದಕ್ಕೂ ಸರ್ಕಾರ ನಿರ್ಧರಿಸಿದೆ. ಬೃಹತ್ ಉದ್ಯಮ ಸಂಸ್ಥೆಗಳು ಖಾಸಗಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ಆಸಕ್ತಿ ವ್ಯಕ್ತಪಡಿಸಿವೆ. ರೈತರಿಂದ ಭೂಮಿ ಖರೀದಿಸಿ ಕೈಗಾರಿಕಾ ಪ್ರದೇಶ ನಿರ್ಮಿಸಿ, ಅಲ್ಲಿನ ಜಮೀನನ್ನು ಆ ಸಂಸ್ಥೆಗಳೇ ಉದ್ಯಮಿಗಳಿಗೆ ಹಂಚಿಕೆ ಮಾಡಲು ಅವಕಾಶ ನೀಡಲಾಗುವುದು. ಇಂತಹ ಕೈಗಾರಿಕಾ ಪ್ರದೇಶಗಳಲ್ಲಿ ಜಮೀನು ಖರೀದಿಸಿ ಹೂಡಿಕೆದಾರರಿಗೆ ಒದಗಿಸಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಕೂಡ ಆಸಕ್ತಿ ತೋರಿದೆ ಎಂದು ಹೇಳಿದರು.

ADVERTISEMENT

ದೇವನಹಳ್ಳಿಯ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಸರ್ಕಾರ ಅಭಿವೃದ್ಧಿಪಡಿಸುತ್ತಿರುವ ಏರೋಸ್ಪೇಸ್ ವಿಶೇಷ ಆರ್ಥಿಕ ವಲಯದಲ್ಲಿ 27 ಹೂಡಿಕೆದಾರರಿಗೆ ಜಮೀನು ಹಂಚಿಕೆ ಮಾಡಲಾಗಿದೆ. ತಾಂತ್ರಿಕ ಕಾರಣಗಳಿಂದಾಗಿ ಈ ವಿಶೇಷ ಆರ್ಥಿಕ ವಲಯದ ಅಭಿವೃದ್ಧಿ ವಿಳಂಬವಾಗಿತ್ತು. ಈಗ ಎಲ್ಲ ತೊಡಕುಗಳೂ ನಿವಾರಣೆ ಆಗಿದ್ದು, ಏರೋಸ್ಪೇಸ್ ಉದ್ಯಮಗಳು ಶೀಘ್ರವೇ ಅಲ್ಲಿ ಕಾರ್ಯಾರಂಭ ಮಾಡಲಿವೆ ಎಂದರು.

2010 ಮತ್ತು 2012ರಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಆದ ಒಡಂಬಡಿಕೆಗಳ ಅನುಷ್ಠಾನದಲ್ಲಿ ಉತ್ತಮ ಪ್ರಗತಿ ಕಂಡುಬಂದಿದೆ. ಐದು ವರ್ಷಗಳ ಅವಧಿಯಲ್ಲಿ ಶೇಕಡ 65ರಷ್ಟು ಒಡಂಬಡಿಕೆಗಳನ್ನು ಅನುಷ್ಠಾನಕ್ಕೆ ತರಬೇಕು ಎಂಬ ಗುರಿಯನ್ನು ಸರ್ಕಾರ ಹೊಂದಿದೆ. ಈಗಿನ ಪರಿಸ್ಥಿತಿಯನ್ನು ಅವಲೋಕಿಸಿದರೆ ಈ ಗುರಿ ಸಾಧಿಸುವುದು ನಿಶ್ಚಿತ ಎಂದರು.

ಉತ್ತಮ ಪ್ರಗತಿ
ವರದಿ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ, `2012ರ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ 7.20 ಲಕ್ಷ ಕೋಟಿ ರೂಪಾಯಿ ಹೂಡಿಕೆ ಪ್ರಸ್ತಾವವುಳ್ಳ 751 ಒಡಂಬಡಿಕೆಗಳಿಗೆ ಸಹಿ ಮಾಡಲಾಗಿತ್ತು. ಈ ಪೈಕಿ 1.84 ಲಕ್ಷ ಕೋಟಿ ರೂಪಾಯಿ ಹೂಡಿಕೆಯ ಯೋಜನೆಗಳ ಅನುಷ್ಠಾನ ಪ್ರಗತಿಯಲ್ಲಿದೆ' ಎಂದರು.

`ಬೃಹತ್ ಮತ್ತು ಮಧ್ಯಮ ವಲಯದ ಕೈಗಾರಿಕೆಗಳ ಸ್ಥಾಪನೆಗೆ 248 ಒಡಂಬಡಿಕೆಗಳು ಆಗಿದ್ದವು. 6.78 ಲಕ್ಷ ಕೋಟಿ ರೂಪಾಯಿ ಹೂಡಿಕೆ ಪ್ರಸ್ತಾವ ಈ ಒಡಂಬಡಿಕೆಗಳಲ್ಲಿ ಇದೆ. ಈ ಪೈಕಿ 14 ಯೋಜನೆಗಳು ಈಗಾಗಲೇ ಅನುಷ್ಠಾನಕ್ಕೆ ಬಂದಿವೆ. 31 ಯೋಜನೆಗಳು ನಿರ್ಮಾಣ ಹಂತದಲ್ಲಿವೆ. ಅನುಷ್ಠಾನಗೊಂಡಿರುವ ಮತ್ತು ನಿರ್ಮಾಣ ಹಂತದಲ್ಲಿರುವ ಯೋಜನೆಗಳಿಂದ 1.74 ಲಕ್ಷ ಕೋಟಿ ರೂಪಾಯಿ ಹೂಡಿಕೆಯಾಗಲಿದೆ' ಎಂದು ವಿವರಿಸಿದರು.

ಅತಿಸಣ್ಣ ಮತ್ತು ಸಣ್ಣ ಕೈಗಾರಿಕಾ ವಲಯದಲ್ಲಿ 23,624 ಕೋಟಿ ರೂಪಾಯಿ ಹೂಡಿಕೆಯ ಉದ್ದೇಶವಿರುವ 6,806 ಒಡಂಬಡಿಕೆಗಳಿಗೆ ಸಮಾವೇಶದಲ್ಲಿ ಸಹಿ ಹಾಕಲಾಗಿತ್ತು. ಈ ಪೈಕಿ 776 ಯೋಜನೆಗಳ ಅನುಷ್ಠಾನ ಪೂರ್ಣಗೊಂಡಿದ್ದು, ಉತ್ಪಾದನೆ ನಡೆಯುತ್ತಿದೆ. 4,328 ಯೋಜನೆಗಳು ಅನುಷ್ಠಾನದ ವಿವಿಧ ಹಂತಗಳಲ್ಲಿವೆ. ಈ ಯೋಜನೆಗಳಿಂದ 10,000 ಕೋಟಿ ರೂಪಾಯಿ ಹೂಡಿಕೆ ಆಗುತ್ತಿದೆ ಎಂದರು.

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ವಲಯ ಹಾಗೂ ಅತಿ ಸಣ್ಣ ಮತ್ತು ಸಣ್ಣ ಕೈಗಾರಿಕಾ ವಲಯಗಳಲ್ಲಿ ಒಟ್ಟು ಒಡಂಬಡಿಕೆಗಳ ಹೂಡಿಕೆ ಮೊತ್ತಕ್ಕೆ ಹೋಲಿಸಿದರೆ ಅನುಷ್ಠಾನದಲ್ಲಿ ಶೇ 26 ರಷ್ಟು ಪ್ರಗತಿಯಾಗಿದೆ. ಆದರೆ, ಒಟ್ಟು ಯೋಜನೆಗಳ ಸಂಖ್ಯೆಗೆ ಹೋಲಿಸಿದರೆ ಅನುಕ್ರಮವಾಗಿ ಶೇ 33 ಮತ್ತು ಶೇ 76ರಷ್ಟು ಪ್ರಗತಿ ಆಗಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಡಾ.ಕೆ.ವಿ.ರಾಜು, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಎನ್.ವಿದ್ಯಾಶಂಕರ್, ಆಯುಕ್ತ ಎಂ.ಮಹೇಶ್ವರರಾವ್ ಮತ್ತಿತರರು ಉಪಸ್ಥಿತರಿದ್ದರು.

2014ರ ಜೂನ್‌ನಲ್ಲಿ ಮುಂದಿನ `ಜಿಮ್'
ಮುಂದಿನ ಜಾಗತಿಕ ಹೂಡಿಕೆದಾರರ ಸಮಾವೇಶ (ಜಿಮ್) ಯಶಸ್ವಿಯಾಗಿ ನಡೆಸಲು ಸರ್ಕಾರ ಪೂರ್ವಸಿದ್ಧತೆ ಆರಂಭಿಸಿದೆ. 2014ರ ಜೂನ್   2 ಮತ್ತು 3ರಂದು ಸಮಾವೇಶ ನಡೆಯಲಿದೆ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.