ಶಿರಸಿ (ಉತ್ತರ ಕನ್ನಡ): ಮಲೆನಾಡಿನಲ್ಲಿ ಈಗ ಕಬ್ಬಿನ ಆಲೆಮನೆಯ ಹಂಗಾಮು. ಆಲೆಮನೆಯಲ್ಲಿ ತಯಾರಾಗುವ ಜೋನಿಬೆಲ್ಲಕ್ಕೆ ಈ ವರ್ಷ ಎಲ್ಲಿಲ್ಲದ ಬೇಡಿಕೆ. ಉತ್ಪಾದನೆಗಿಂತ ಬೇಡಿಕೆ ಹೆಚ್ಚಿದ್ದರಿಂದ ಬೆಲ್ಲದ ಬೆಲೆಯೂ ಗಗನಕ್ಕೇರಿದೆ.
ಜಲಕ್ಷಾಮದ ಭೀತಿಯಿಂದ ರೈತರು ಕಬ್ಬು ಬೆಳೆಯುವ ಕ್ಷೇತ್ರವನ್ನು ಸೀಮಿತಗೊಳಿಸಿಕೊಂಡಿದ್ದಾರೆ. ಕೃಷಿ ಕಾರ್ಮಿಕರ ಕೊರತೆ, ಕಳೆದ ವರ್ಷ ಪಾತಾಳಕ್ಕೆ ಕುಸಿದಿದ್ದ ಬೆಲೆ ಕೂಡ ಕಬ್ಬು ಕಡಿಮೆ ಬೆಳೆಯಲು ಕಾರಣವಾಗಿದೆ. ಇದರ ಪರಿಣಾಮವಾಗಿ, ಬೆಲ್ಲದ ಬೆಲೆ ಕಳೆದ ವರ್ಷಕ್ಕಿಂತ ಮೂರುಪಟ್ಟು ಹೆಚ್ಚಳವಾಗಿದೆ.
ಆಲೆಮನೆ ಆರಂಭವಾಗಿ ಹತ್ತಿರ ಒಂದು ತಿಂಗಳಾಗಿದೆ. ಹಂಗಾಮಿನ ಶುರುವಿನಲ್ಲೇ 25 ಕೆ.ಜಿ ಬೆಲ್ಲದ ಡಬ್ಬಿ ₹ 1,800ರಿಂದ ₹2,300ಕ್ಕೆ ಮಾರಾಟವಾಗುತ್ತಿದೆ. ಕಳೆದ ವರ್ಷ ಇದೇ ವೇಳೆಗೆ ಬೆಲ್ಲದ ಡಬ್ಬಿಯ ಸರಾಸರಿ ಬೆಲೆ ₹ 600ರಿಂದ 700ರಷ್ಟಿತ್ತು.
‘ಹಿಂದಿನ ವರ್ಷ ಬೆಳೆದಷ್ಟು ಕ್ಷೇತ್ರದಲ್ಲಿಯೇ ಈ ಸಾರಿಯೂ ಕಬ್ಬು ಬೆಳೆದಿದ್ದೆವು. ಆದರೆ, ನೀರಿನ ಕೊರತೆಯಿಂದ ಉತ್ತಮ ಫಸಲು ಬರಲಿಲ್ಲ. ಕಳೆದ ವರ್ಷ 120 ಡಬ್ಬಿ ಬೆಲ್ಲ ಉತ್ಪಾದಿಸಿದ ಕ್ಷೇತ್ರದಲ್ಲಿ ಈ ಬಾರಿ 40 ಡಬ್ಬಿ ಬೆಲ್ಲ ಸಿದ್ಧಪಡಿಸಲಾಗಿದೆ.
‘ಒಂದು ಡಬ್ಬಿ ಬೆಲ್ಲ ಉತ್ಪಾದನೆಗೆ ಕನಿಷ್ಠ ₹ 1,200 ವೆಚ್ಚವಾಗುತ್ತದೆ. ರೈತ ಲಾಭ ಗಳಿಸಲು ಡಬ್ಬಿ ಬೆಲ್ಲಕ್ಕೆ ₹ 2 ಸಾವಿರ ದರ ಸಿಗಬೇಕು. ಈ ಬಾರಿ ದರವಿದ್ದರೂ ಇಳುವರಿ ಕಡಿಮೆ. ಒಟ್ಟಿನಲ್ಲಿ ರೈತನಿಗೆ ಸಿಗುವ ಲಾಭ ಮಾತ್ರ ಅಷ್ಟಕ್ಕಷ್ಟೇ’ ಎಂದು ಮರಗುಡ್ಡಿಯ ರೈತ ಸೂರ್ಯಪ್ಪ ನಾಯ್ಕ ಹೇಳುತ್ತಾರೆ. ಇವರು ಎರಡು ದಶಕಗಳಿಂದ ನಿರಂತರವಾಗಿ ಬೆಲ್ಲ ಉತ್ಪಾದಿಸುತ್ತಿದ್ದಾರೆ.
ಹೆಚ್ಚಿದ ಬೇಡಿಕೆ: ಜೋನಿಬೆಲ್ಲಕ್ಕೆ ಮಾರುಕಟ್ಟೆ ಕಲ್ಪಿಸುತ್ತಿರುವ ಇಲ್ಲಿನ ಕದಂಬ ಮಾರ್ಕೆಟಿಂಗ್ ಸಹಕಾರಿ ಸಂಸ್ಥೆ ಕಳೆದ ವರ್ಷ ಸುಮಾರು 3,500 ಡಬ್ಬಿ ಬೆಲ್ಲ ಮಾರಾಟ ಮಾಡಿತ್ತು. ಈ ವರ್ಷ ಇಲ್ಲಿಯವರೆಗೆ 700 ಡಬ್ಬಿ ಬೆಲ್ಲ ಖರೀದಿಸಿದೆ.
‘ಕಳೆದ ವರ್ಷ ಫೆಬ್ರುವರಿ ವೇಳೆಗೆ ಸಂಸ್ಥೆ ರೈತರಿಂದ 2 ಸಾವಿರದಷ್ಟು ಬೆಲ್ಲದ ಡಬ್ಬಿ ಖರೀದಿಸಿತ್ತು. ಆರಂಭದಲ್ಲಿ ₹600 ದರವಿದ್ದರೆ ಜೂನ್ ನಂತರ ₹ 1,200ಕ್ಕೆ ತಲುಪಿತ್ತು. ಸಹಸ್ರಹಳ್ಳಿಯ 14 ಜನ ರೈತರು ಸೇರಿ ಹಿಂದಿನ ವರ್ಷ 480 ಡಬ್ಬಿ ಬೆಲ್ಲ ಪೂರೈಸಿದ್ದರು. ಈ ಬಾರಿ ಈ ಊರಿನಿಂದ ಬಂದಿದ್ದು 165 ಡಬ್ಬಿ ಮಾತ್ರ. ದರ ಕುಸಿತದಿಂದ ಕೈಸುಟ್ಟುಕೊಂಡಿದ್ದ ರೈತರು ಈ ವರ್ಷ ಕಬ್ಬು ಬೆಳೆಯಲು ಹಿಂದೇಟು ಹಾಕಿದ್ದಾರೆ’ ಎನ್ನುತ್ತಾರೆ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ವಿಶ್ವೇಶ್ವರ ಭಟ್ಟ.
‘ಇನ್ನು ಒಂದು ತಿಂಗಳಲ್ಲಿ ಒಂದು ಸಾವಿರ ಡಬ್ಬಿ ಬೆಲ್ಲ ಮಾರಾಟಕ್ಕೆ ಬರುವ ನಿರೀಕ್ಷೆಯಿದೆ. ಜೋನಿಬೆಲ್ಲಕ್ಕೆ ಬೆಂಗಳೂರು, ಬಯಲುಸೀಮೆಯ ಮಾರುಕಟ್ಟೆಯಲ್ಲಿ ಬಹು ಬೇಡಿಕೆಯಿದೆ. ವಾರ್ಷಿಕವಾಗಿ ಕದಂಬ ಸಂಸ್ಥೆ 1 ಕೆ.ಜಿ, 2 ಕೆ.ಜಿ.ಯ ಸುಮಾರು 10ಸಾವಿರ ಪ್ಯಾಕ್‌ಗಳನ್ನು ಹೊರ ಜಿಲ್ಲೆಗಳಿಗೆ ಕಳುಹಿಸುತ್ತದೆ. ಈ ಬಾರಿ ಈಗಲೇ ಬೆಲ್ಲದ ಕೊರತೆ ಎದುರಾಗಿರುವುದು ಮಾರುಕಟ್ಟೆಗೆ ಹಿನ್ನಡೆಯಾಗಿದೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.