ADVERTISEMENT

ಟ್ರೇಡ್ ಲೈಸೆನ್ಸ್ ನೀತಿ ರದ್ದು: ಕಾಸಿಯಾ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಮೇ 2012, 19:30 IST
Last Updated 11 ಮೇ 2012, 19:30 IST

ಬೆಂಗಳೂರು: `ಸರಳ ಉದ್ಯಮ ಪರವಾನಗಿ~(ಟ್ರೇಡ್   ಲೈಸೆನ್ಸ್) ನೀತಿ ರದ್ದುಪಡಿಸುವಂತೆ ಆಗ್ರಹಿಸುತ್ತಿರುವ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಒಕ್ಕೂಟ (ಕೆಎಎಸ್‌ಎಸ್‌ಐಎ-ಕಾಸಿಯಾ), 10 ದಿನದೊಳಗೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಜೂನ್ 7-8ರಂದು ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶ (ಜಿಐಎಂ) ಬಹಿಷ್ಕರಿಸುವ ಬಗ್ಗೆ ಆಲೋಚಿಸಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ನೀಡಿದೆ.

ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಮೂಲಕ ವ್ಯಾಪಾರಿ ಕೇಂದ್ರ, ಹೋಟೆಲ್, ಚಿಲ್ಲರೆ ಮಾರಾಟ ಮಳಿಗೆಗಳಿಗೆ ಅನ್ವಯಿಸುತ್ತಿದ್ದ `ಸರಳ ಉದ್ಯಮ ಪರವಾನಗಿ~ಯನ್ನು ಈಗ ಸಣ್ಣ ಕೈಗಾರಿಕಾ ಉದ್ದಿಮೆಗಳಿಗೂ ಹೇರಲಾಗುತ್ತಿದೆ. ಈಗಾಗಲೇ ಸಣ್ಣ ಉದ್ದಿಮೆಗಳು ಫ್ಯಾಕ್ಟರಿ ಕಾನೂನು, ಪರಿಸರ ಮಾಲಿನ್ಯ ಇಲಾಖೆ, ಇಎಸ್‌ಐ, ಪಿಎಫ್ ಮತ್ತಿತರ 36 ಬಗೆಯ ಇಲಾಖೆಗಳು ಸಣ್ಣ- ಮಧ್ಯಮ ಉದ್ದಿಮೆಗಳನ್ನು ನಿಯಂತ್ರಿಸುತ್ತಿವೆ.
 
ಈಗ ಸ್ಥಳೀಯ ಸಂಸ್ಥೆಗಳ ಮೂಲಕ ಸರಳ ಉದ್ಯಮ ಪರವಾನಗಿಯನ್ನೂ ಹೇರುತ್ತಿರುವುದು ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳನ್ನು ಸಂಕಷ್ಟಕ್ಕೀಡುಮಾಡಿದೆ ಎಂದು ಕಾಸಿಯಾ ಅಧ್ಯಕ್ಷ ಪ್ರಕಾಶ್ ಎನ್.ರಾಯ್ಕರ್ ಅಳಲು ತೋಡಿಕೊಂಡರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಮುಖ್ಯಮಂತ್ರಿ, ಸಚಿವರಾದ ಮುರುಗೇಶ್ ನಿರಾಣಿ ಮತ್ತು ಸುರೇಶ್ ಕುಮಾರ್ ಅವರೊಂದಿಗೆ ಕಾಸಿಯಾ ಪ್ರತಿನಿಧಿಗಳು ಗುರುವಾರ ಸಭೆ ನಡೆಸಿ ಚರ್ಚಿಸಿದ್ದೇವೆ. ಮುಖ್ಯಮಂತ್ರಿಗಳು ಶಾಶ್ವತಗ ಪರಿಹಾರದ ಭರವಸೆ ನೀಡಿದ್ದಾರೆ. 10 ದಿನಗಳೊಳಗೆ ಈ ಭರವಸೆ ಈಡೇರಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ 32 ಸಾವಿರ ಸಣ್ಣ ಉದ್ದಿಮೆಗಳಷ್ಟೇ ಸರ್ಕಾರದ ಸವಲತ್ತುಗಳಿರುವ ಕೈಗಾರಿಕಾ ವಸಾಹತು ಪ್ರದೇಶದಲ್ಲಿವೆ. ಉಳಿದಂತೆ 6.50 ಲಕ್ಷ ಸಣ್ಣ-ಮಧ್ಯಮ ಉದ್ದಿಮೆಗಳು ಸ್ವಂತ ನೆಲೆಯಲ್ಲಿವೆ. ಎಸ್‌ಎಂಇಗಳು ರಾಜ್ಯದಲ್ಲಿ 35 ಲಕ್ಷ ಮಂದಿಗೆ  ಉದ್ಯೋಗ ನೀಡಿವೆ.
 
ರಾಜ್ಯದಲ್ಲಿ ಕಳೆದ ವರ್ಷ ಸಂಗ್ರಹವಾದ 32,000 ಕೋಟಿ ವಾಣಿಜ್ಯ ತೆರಿಗೆಯಲ್ಲಿ ಎಸ್‌ಎಂಇಗಳಿಂದಲೇ(ವ್ಯಾಟ್) ರೂ. 8000 ಕೋಟಿ ಸಂಗ್ರಹವಾಗಿದೆ ಎಂದರು.ಜಿಡಿಪಿಗೆ ಸಣ್ಣ ಉದ್ದಿಮೆಗಳ ಕೊಡುಗೆ ಶೇ 8ರಷ್ಟಿದೆ ಎಂದು ವಿವರಿಸಿದ ರಾಯ್ಕರ್, ಆದರೆ, ರಾಜ್ಯ ಸರ್ಕಾರ `ಸರಳ ಉದ್ಯಮ ಪರವಾನಗಿ~ ಮೂಲಕ ಉದ್ಯಮವನ್ನು ಸಂಕಷ್ಟಕ್ಕೆ ದೂಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾಸಿಯಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಶ್ರೀನಿವಾಸ್, ನಿಕಟಪೂರ್ವ ಅಧ್ಯಕ್ಷ ಎಸ್.ಎಸ್.ಬಿರಾದಾರ್ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.