ADVERTISEMENT

ಡಿಟಿಸಿ:ಇಂದು ಸಭೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2012, 19:30 IST
Last Updated 16 ಫೆಬ್ರುವರಿ 2012, 19:30 IST

ನವದೆಹಲಿ (ಪಿಟಿಐ): ಪ್ರಸ್ತಾವಿತ ನೇರ ತೆರಿಗೆ ಮಸೂದೆಗೆ (ಡಿಟಿಸಿ) ಸಂಬಂಧಿಸಿದಂತೆ ಸಂಸದೀಯ ಸ್ಥಾಯಿ ಸಮಿತಿ ಶುಕ್ರವಾರ ಚರ್ಚೆ ನಡೆಸಲಿದ್ದು, ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನು ರೂ3 ಲಕ್ಷದವರೆಗೆ ಹೆಚ್ಚಿಸಲು ಸಲಹೆ ಮಾಡುವ ಸಾಧ್ಯತೆ ಇದೆ.

ಹಿರಿಯ ಬಿಜೆಪಿ ಮುಖಂಡ ಯಶವಂತ್ ಸಿನ್ಹಾ ನೇತೃತ್ವದ ಸಮಿತಿ ಈಗಾಗಲೇ `ಡಿಟಿಸಿ~ ಕರಡು ಮಸೂದೆಯನ್ನು ಪರಿಗಣಿಸಿದೆ. ಆದರೆ, ಮಸೂದೆಯಲ್ಲಿನ ಕೆಲವು ಅಂಶಗಳು ಇನ್ನೂ ಇತ್ಯರ್ಥಗೊಳ್ಳದ ಹಿನ್ನೆಲೆಯಲ್ಲಿ ಚರ್ಚೆಯನ್ನು ಮುಂದೂಡಲಾಗಿತ್ತು.

ಸಂಸದೀಯ ಸ್ಥಾಯಿ ಸಮಿತಿ ಬಜೆಟ್ ಅಧಿವೇಶನ ಪ್ರಾರಂಭಗೊಳ್ಳುವ ಮೊದಲು ಅಂತಿಮ ವರದಿ ಸಲ್ಲಿಸಲಿದೆ. ಆಹಾರ  ಹಣದುಬ್ಬರ ದರ ಋಣಾತ್ಮಕ ವಲಯಕ್ಕೆ ಇಳಿದಿರುವುದು ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಸ್ಥಿರಗೊಂಡಿರುವುದರಿಂದ ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನು ರೂ3 ಲಕ್ಷದವರೆಗೆ ಹೆಚ್ಚಿಸಲು ಶಿಫಾರಸು ಮಾಡಬಹುದು ಎಂದು ಮೂಲಗಳು ತಿಳಿಸಿವೆ.

ಸದ್ಯ ರೂ1.8ರಿಂದರೂ5 ಲಕ್ಷದವರೆಗಿನ ಆದಾಯಕ್ಕೆ ಶೇ 10ರಷ್ಟು ಆದಾಯ ತೆರಿಗೆ, ರೂ5ರಿಂದ ರೂ8ಲಕ್ಷದವರೆಗಿನ ಆದಾಯಕ್ಕೆ ಶೇ 20ರಷ್ಟು ಮತ್ತು ರೂ8ಲಕ್ಷಕ್ಕಿಂತ ಹೆಚ್ಚಿನ ವರಮಾನಕ್ಕೆ ಶೇ 30ರಷ್ಟು ಆದಾಯ ತೆರಿಗೆ ಅನ್ವಯಿಸುತ್ತವೆ. ಬಜೆಟ್‌ನಲ್ಲಿ ಸೇವಾ ತೆರಿಗೆ  ಹೆಚ್ಚಿಸಬಾರದು ಎಂದು ಉದ್ಯಮ ಸಂಸ್ಥೆಗಳು ಮನವಿ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.