ADVERTISEMENT

ಡೀಸೆಲ್ ಕಾರುಗಳತ್ತ ಹೆಚ್ಚಿದ ಒಲವು

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2012, 19:30 IST
Last Updated 18 ಫೆಬ್ರುವರಿ 2012, 19:30 IST

ಮುಂಬೈ(ಪಿಟಿಐ): ದೇಶದ ಮುಂಚೂಣಿ  ಕಾರು ತಯಾರಿಕೆ ಕಂಪೆನಿ ಮಾರುತಿ ಸುಜುಕಿ ಮುಂಬರುವ ದಿನಗಳಲ್ಲಿ ಹೊಸ  ಡೀಸೆಲ್ ಚಾಲಿತ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಹೇಳಿದೆ.

ಬಡ್ಡಿ ದರ ಹೆಚ್ಚಳ, ತೈಲ ಬೆಲೆ ಏರಿಕೆ ಇತ್ಯಾದಿ ಸಂಗತಿಗಳಿಂದ ಮಾರುತಿ ಸುಜುಕಿಯ ಮಾರುಕಟ್ಟೆ ಪಾಲು 2011ರಲ್ಲಿ ಶೇ 40ರಷ್ಟು ಕುಸಿತ ಕಂಡಿದೆ. ಈ ಅವಧಿಯಲ್ಲಿ ಪೆಟ್ರೋಲ್ ಬೆಲೆ ಏರಿಕೆಯಿಂದಾಗಿ ಗ್ರಾಹಕರು ಡೀಸೆಲ್ ಚಾಲಿತ ಕಾರುಗಳತ್ತ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಂಪೆನಿ ಡೀಸೆಲ್ ಚಾಲಿತ ಹೊಸ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎಂದು ಸುಜುಕಿಯ ವ್ಯವಸ್ಥಾಪಕ ನಿರ್ದೇಶಕ ಶಿಂಜೊ ನಕಾನಿಶಿ ಹೇಳಿದ್ದಾರೆ.

ಗುಡಗಾಂವ್‌ನಲ್ಲಿರುವ ಕಂಪೆನಿಯ ತಯಾರಿಕೆ ಘಟಕ ವಾರ್ಷಿಕ 3 ಲಕ್ಷ ಡೀಸೆಲ್ ಎಂಜಿನ್ ತಯಾರಿಸುವ ಸಾಮರ್ಥ್ಯ ಹೊಂದಿದೆ. ಇದರ ಜತೆಗೆ ಫಿಯೆಟ್ ಇಂಡಿಯಾ ಕಂಪೆನಿಯಿಂದ ವಾರ್ಷಿಕ 1 ಲಕ್ಷ ಡೀಸೆಲ್ ಎಂಜಿನ್ ಖರೀದಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಮಾರುಕಟ್ಟೆ ಬೇಡಿಕೆ ಮತ್ತು ಗ್ರಾಹಕರ ಆದ್ಯತೆಗೆ ತಕ್ಕಂತೆ ಹೊಸ ಡೀಸೆಲ್ ಕಾರುಗಳನ್ನು ತಯಾರಿಸಲು ಇದರಿಂದ ಸಹಾಯಕವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಡೀಸೆಲ್ ದರ ಪೆಟ್ರೋಲ್‌ಗಿಂತ ಅಗ್ಗವಾಗಿರುವುದೇ ಡೀಸೆಲ್ ಕಾರುಗಳ ಬೇಡಿಕೆ ಹೆಚ್ಚಲು ಕಾರಣ. ಸುಜುಕಿ ಈಗಾಗಲೇ ಸ್ವಿಫ್ಟ್, ರಿಟ್ಜ್, ಸ್ವಿಫ್ಟ್ ಡಿಸೈರ್, ಮತ್ತು `ಎಸ್‌ಎ       ಕ್ಸ್4~ನ ಡೀಸೆಲ್ ಮಾದರಿಗಳನ್ನು ಬಿಡುಗಡೆ ಮಾಡಿದೆ.  ಫೋರ್ಡ್ ಇಂಡಿಯಾ ಕೂಡ ಶೀಘ್ರದಲ್ಲೇ ಹೊಸ ಡೀಸೆಲ್ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಏಳು ತಿಂಗಳ ಸತತ ಇಳಿಕೆಯ ನಂತರ, ಜನವರಿ ತಿಂಗಳಲ್ಲಿ ಮಾರುತಿ ಸುಜುಕಿ ಮಾರಾಟ ಶೇ 5.18ರಷ್ಟು ಚೇತರಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.