ADVERTISEMENT

ತೆರಿಗೆ: ಚಿನ್ನದ ಬೇಡಿಕೆಗೆ ಧಕ್ಕೆ ಇಲ್ಲ

​ಪ್ರಜಾವಾಣಿ ವಾರ್ತೆ
Published 18 ಜನವರಿ 2012, 19:30 IST
Last Updated 18 ಜನವರಿ 2012, 19:30 IST

ನವದೆಹಲಿ (ಪಿಟಿಐ): ಸೀಮಾ ಸುಂಕ ಹೆಚ್ಚಳದ ಕಾರಣಕ್ಕೆ ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆಯಾದರೂ, ಅದರಿಂದ ಬೇಡಿಕೆ ಮೇಲೆ ಗಮನಾರ್ಹ ಪರಿಣಾಮ ಉಂಟಾಗಲಾರದು ಎಂದು ಮಾರುಕಟ್ಟೆ ಪರಿಣತರು ಹೇಳಿದ್ದಾರೆ.

ಚಿನ್ನದ ಬೆಲೆ ಇನ್ನು ಮುಂದೆ ಪ್ರತಿ 10 ಗ್ರಾಂಗಳಿಗೆ ಮತ್ತು ಬೆಳ್ಳಿ ಪ್ರತಿ ಕೆ.ಜಿಗೆ ಆಯಾ ದಿನದ ಬೆಲೆ ಆಧರಿಸಿ ತುಟ್ಟಿಯಾಗಲಿದೆ. ಚಿನ್ನ ಮಾರಾಟಗಾರರು ಚಿನ್ನಾಭರಣ ತಯಾರಕರಿಗೆ ಹೆಚ್ಚಿನ ಶುಲ್ಕ ವಿಧಿಸಲಿದ್ದಾರೆ. ಚಿನ್ನಾಭರಣ ತಯಾರಕರು ಸೀಮಾ ಸುಂಕದ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲಿದ್ದಾರೆ ಎಂದು ದೇಶದ ಅತಿದೊಡ್ಡ ಚಿನ್ನಾಭರಣ ತಯಾರಿಕೆ ಮತ್ತು ರಫ್ತು ಸಂಸ್ಥೆ ರಾಜೇಶ್ ಎಕ್ಸ್‌ಪೋರ್ಟ್ಸ್‌ನ ಕಾರ್ಯ ನಿರ್ವಾಹಕ ಅಧ್ಯಕ್ಷ ರಾಜೇಶ್ ಮೆಹ್ತಾ ಪ್ರತಿಕ್ರಿಯಿಸಿದ್ದಾರೆ.

ಅಬಕಾರಿ ಮತ್ತು ಸೀಮಾ ಸುಂಕ ಹೆಚ್ಚಳವು ಚಿನ್ನದ ಆಮದು ಮತ್ತು ಬೇಡಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಾರದು. ಸ್ಥಿರ ಆಮದು ಸುಂಕವು ಚಿನ್ನಾಭರಣ ಉದ್ದಿಮೆಗೆ ಪೂರಕವಾಗಿರಲಿದೆ. ಪ್ರತಿ ದಿನ ಚಿನ್ನಾಭರಣ ಬೆಲೆಗಳು ಶೇ 1ರಿಂದ ಶೇ 5ರಷ್ಟು ಏರಿಳಿತ ಕಾಣುತ್ತಲೇ ಇರುತ್ತವೆ. ಈ ಸುಂಕಗಳ ಹೆಚ್ಚಳವು ಕೂಡ ಇದೇ ಬಗೆಯ ಹೆಚ್ಚಳವಾಗಿದೆ ಎಂದು  ಮುಂಬೈ ಚಿನ್ನಾಭರಣ ವರ್ತಕರ ಸಂಘದ ನಿರ್ದೇಶಕ ಸುರೇಶ ಹುಂಡಿಯಾ ವಿಶ್ಲೇಷಿಸಿದ್ದಾರೆ.

ಚಿನ್ನದ ಮೇಲಿನ ಸುಂಕಗಳ ಹೊರೆಯನ್ನು ಸಂಪೂರ್ಣವಾಗಿ ತೆಗೆದು ಹಾಕಿದರೆ ಅದರಿಂದ ಕಳ್ಳಸಾಗಣೆ ತಡೆಗಟ್ಟಲು ಮತ್ತು ಕಪ್ಪು ಹಣದ ನಿಯಂತ್ರಿಸಲು ಸಾಧ್ಯವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತೆರಿಗೆ ಮರು ಹೊಂದಾಣಿಕೆಯು ಚಿನ್ನಾಭರಣ ರಫ್ತುದಾರರ ಮೇಲೆಯೂ ಯಾವುದೇ ಪ್ರಭಾವ ಬೀರಲಾರದು. ಆದರೆ ಖರೀದಿದಾರರಿಗೆ ದುಬಾರಿಯಾಗಲಿದೆ ಎಂದು ಹರಳು ಮತ್ತು ಚಿನ್ನಾಭರಣ ರಫ್ತು ಉತ್ತೇಜನಾ ಮಂಡಳಿಯ ಉಪಾಧ್ಯಕ್ಷ ಸಂಜಯ್ ಎ. ಕೊಠಾರಿ ಅಭಿಪ್ರಾಯಪಟ್ಟಿದ್ದಾರೆ.

ವಜ್ರಗಳ ಆಮದು ಮೇಲಿನ ಸುಂಕವನ್ನು ಶೇ 2ರಷ್ಟಕ್ಕೆ ಹೆಚ್ಚಿಸಿರುವುದು ದೇಶಿ ವಜ್ರ ತಯಾರಿಕಾ ಘಟಕಗಳಿಗೆ ನೆರವಾಗಲಿದೆ.  ದೇಶದಲ್ಲಿ ಶೇ 90ರಷ್ಟು ವಜ್ರಗಳನ್ನು ಕತ್ತರಿಸಿ ಹೊಳಪು ನೀಡಲಾಗುತ್ತಿದೆ. ಈ ಮೊದಲು ತೆರಿಗೆಯೇ ಇಲ್ಲದ ಕಾರಣಕ್ಕೆ ಕತ್ತರಿಸಿ ಹೊಳಪು ನೀಡಿದ ವಜ್ರಗಳನ್ನೂ ಆಮದು ಮಾಡಿಕೊಳ್ಳಲಾಗುತ್ತಿತ್ತು. ತೆರಿಗೆ ಹೇರಿಕೆ ಕಾರಣಕ್ಕೆ ಆಮದು ಪ್ರಮಾಣ ಕಡಿಮೆಯಾಗಿ ಸ್ಥಳೀಯ ವಜ್ರ ತಯಾರಿಕಾ ಘಟಕಗಳಿಗೆ ಹೆಚ್ಚಿನ ಪ್ರಯೋಜನ ಲಭಿಸಲಿದೆ ಎಂದು ಮಂಡಳಿಯ ಅಧ್ಯಕ್ಷ ರಾಜೇಶ್ ಜೈನ್ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.