ADVERTISEMENT

ತೆರಿಗೆ ವಂಚಕರ ಹೆಸರು ಬಯಲು

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2013, 19:59 IST
Last Updated 15 ಏಪ್ರಿಲ್ 2013, 19:59 IST

ನವದೆಹಲಿ(ಪಿಟಿಐ): ದೀರ್ಘಕಾಲದಿಂದ ತೆರಿಗೆ ಪಾವತಿಸದೇ ಸರ್ಕಾರಕ್ಕೆ ವಂಚಿಸುತ್ತಿರುವ ವ್ಯಕ್ತಿಗಳ ಹೆಸರು ಮತ್ತು ವಿಳಾಸವನ್ನು ಸಾರ್ವಜನಿಕವಾಗಿ ಪ್ರಕಟಿಸಲು ಆದಾಯ ತೆರಿಗೆ ಇಲಾಖೆ ನಿರ್ಧರಿಸಿದೆ.

ತೆರಿಗೆ ವಂಚಕರ ಹೆಸರು ಮತ್ತು ವಿಳಾಸವನ್ನು ಅಂತರ್ಜಾಲದಲ್ಲಿ ಪ್ರಕಟಿಸುವ ಮೂಲಕ ಅವರ ನೈಜಬಣ್ಣ ಬಹಿರಂಗಗೊಳಿಸಲಾಗುವುದು. ಕೆಲವರು ಭಾರಿ ಪ್ರಮಾಣದಲ್ಲಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಕೆಲವರಿಗೆ ತೆರಿಗೆ ತಪ್ಪಿಸುವುದೇ ಅಭ್ಯಾಸವಾಗಿದೆ. ಅಂತಹವರ ಜಾತಕ ಬಯಲು ಮಾಡಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಇತ್ತೀಚೆಗೆ `ಕೇಂದ್ರ ನೇರ ತೆರಿಗೆ ಮಂಡಳಿ'ಹಿರಿಯ ಅಧಿಕಾರಿ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಜತೆಗೆ ತೆರಿಗೆ ಪಾವತಿಸುವಂತೆ ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲೂ ಆದಾಯ ತೆರಿಗೆ ಇಲಾಖೆ ಯೋಜನೆ ರೂಪಿಸಿದೆ.

ತೆರಿಗೆ ವಂಚಕರ `ಬೇಡಿಕೆ ಪಟ್ಟಿ'ಯನ್ನು ಪೊಲೀಸ್ ಇಲಾಖೆ, `ಸಿಬಿಐ', `ಎನ್‌ಐಎ'ನಂತಹ ತನಿಖಾ ಸಂಸ್ಥೆಗಳು ಅಂತರ್ಜಾಲ ತಾಣಕ್ಕೆ ಅಪ್‌ಲೋಡ್ ಮಾಡಲಿವೆ. ಇಂತಹ ವ್ಯಕ್ತಿಗಳನ್ನು ಪತ್ತೆ ಹಚ್ಚಲು ಸಾರ್ವಜನಿಕರ ನೆರವನ್ನೂ ಕೋರಲಾಗುವುದು ಎಂದೂ ಇಲಾಖೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.