ADVERTISEMENT

ತೆರಿಗೆ ವಿನಾಯ್ತಿ ಮಿತಿ ಹೆಚ್ಚಳ?

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2012, 19:30 IST
Last Updated 12 ಫೆಬ್ರುವರಿ 2012, 19:30 IST

ನವದೆಹಲಿ (ಪಿಟಿಐ): ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ, ಗೃಹ ಸಾಲ ಬಡ್ಡಿ ದರಕ್ಕೆ ನೀಡುವ ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನು ಈಗಿನ ರೂ.1.5 ಲಕ್ಷದಿಂದ ರೂ.3 ಲಕ್ಷಕ್ಕೆ ಹೆಚ್ಚಿಸುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ. 

ಸದ್ಯಕ್ಕೆ ಗೃಹ ಸಾಲಗಳಿಗೆ ಪಾವತಿಸುವ ವಾರ್ಷಿಕ ರೂ.1.5 ಲಕ್ಷದವರೆಗಿನ   ಬಡ್ಡಿ ಮೊತ್ತವನ್ನು, ತೆರಿಗೆಗೆ ಒಳಪಡುವ ಆದಾಯದಲ್ಲಿ ಕಡಿತ ಮಾಡಲಾಗುತ್ತಿದೆ. ಇದರ ಜತೆಗೆ ಸಾಲಗಾರರು ಅಸಲು ಮೊತ್ತದ ಪಾವತಿಗೂ ವಿನಾಯ್ತಿ ಸೌಲಭ್ಯ ಪಡೆಯುತ್ತಿದ್ದಾರೆ. ಆದರೆ, ಇದು ವರ್ಷಕ್ಕೆ ರೂ.1 ಲಕ್ಷವರೆಗಿನ ಉಳಿತಾಯ ವಿನಾಯ್ತಿಯ ಭಾಗವಾಗಿರುತ್ತದೆ.

ರಿಯಲ್ ಎಸ್ಟೇಟ್ ರಂಗದಲ್ಲಿನ ನಿಧಾನಗತಿಯ ಬೆಳವಣಿಗೆ ತಡೆಯಲು 2012-13ನೇ ಸಾಲಿನ ಬಜೆಟ್‌ನಲ್ಲಿ ಆದಾಯ ತೆರಿಗೆ ವಿನಾಯ್ತಿ ಮಿತಯನ್ನು ರೂ.3 ಲಕ್ಷದವರೆಗೆ ಹೆಚ್ಚಿಸುವ ಪ್ರಸ್ತಾವ ಇದೆ ಎಂದು ವಾಣಿಜ್ಯ ಸಚಿವಾಲಯ ಮೂಲಗಳು ತಿಳಿಸಿವೆ.

ವರ್ಷದಿಂದ ವರ್ಷಕ್ಕೆ ನಿವೇಶನದ ವೆಚ್ಚ ಮತ್ತು ಗೃಹ ಸಾಲ ಬಡ್ಡಿ ದರಗಳು ಹೆಚ್ಚಿವೆ. ಈ ಹಿನ್ನೆಲೆಯಲ್ಲಿ ತೆರಿಗೆ ವಿನಾಯ್ತಿ ಮಿತಿ ಹೆಚ್ಚಿಸಬೇಕು ಎಂದು ಉದ್ಯಮ ಸಂಸ್ಥೆಗಳು ಆಗ್ರಹಿಸಿವೆ.

ತೆರಿಗೆ ವಿನಾಯ್ತಿ ಮಿತಿಯನ್ನು ಕನಿಷ್ಠ ರೂ.2.5 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟದ (ಫಿಕ್ಕಿ) ಪ್ರಧಾನ ಕಾರ್ಯದರ್ಶಿ ರಾಜೀವ್ ಕುಮಾರ್ ಹೇಳಿದ್ದಾರೆ.
 
ವೈಯಕ್ತಿಕ ಆದಾಯ ತೆರಿಗೆಯಲ್ಲಿನ  ತೆರಿಗೆ ಕಡಿತ ಮಿತಿಯನ್ನು ಈಗಿನ ರೂ. 2.5 ಲಕ್ಷದಿಂದ ರೂ.5 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಭಾರತೀಯ ಕೈಗಾರಿಕೆ ಒಕ್ಕೂಟದ ನಿರ್ದೇಶಕ ಚಂದ್ರಜಿತ್ ಬ್ಯಾನರ್ಜಿ ಆಗ್ರಹಿಸಿದ್ದಾರೆ.
ಗೃಹ ಸಾಲದ ಅಸಲು ಮತ್ತು ಬಡ್ಡಿ ಎರಡಕ್ಕೂ ತೆರಿಗೆ ವಿನಾಯ್ತಿ ನೀಡಬೇಕು ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಕೂಡ  ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.