ADVERTISEMENT

ತೆಲಂಗಾಣ: ‘ರೈತ ಸ್ನೇಹಿ’ ಕೃಷಿ ಸುಧಾರಣೆ

​ಪ್ರಜಾವಾಣಿ ವಾರ್ತೆ
Published 30 ಮೇ 2018, 19:30 IST
Last Updated 30 ಮೇ 2018, 19:30 IST
ಚಂದ್ರಶೇಖರ್‌
ಚಂದ್ರಶೇಖರ್‌   

ಹೈದರಾಬಾದ್‌: ತೆಲಂಗಾಣದ ರೈತರ ಬಾಳು ಹಸನು ಮಾಡಲು ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ಅವರು 50ಕ್ಕೂ ಹೆಚ್ಚು ಉತ್ತೇಜನಾ ಕೊಡುಗೆಗಳನ್ನು ನೀಡಿದ್ದಾರೆ.

ನಾಲ್ಕು ವರ್ಷಗಳ ಅತ್ಯಲ್ಪ ಅವಧಿಯಲ್ಲಿ ರಾವ್‌ ಅವರು ರಾಜ್ಯದ ಕೃಷಿ ವಲಯವನ್ನು ಆಮೂಲಾಗ್ರವಾಗಿ ಬದಲಾಯಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ದಿನದ 24 ಗಂಟೆಗಳ ಕಾಲ ಉಚಿತ ವಿದ್ಯುತ್‌, ರೈತರ ಸಾಲ ಮನ್ನಾ ಮತ್ತು ರೈತ ಬಂಧು ಹೆಸರಿನ ಹೂಡಿಕೆ ಬೆಂಬಲ ಯೋಜನೆ ಮೂಲಕ ತೆಲಂಗಾಣವನ್ನು ದೇಶದಲ್ಲಿಯೇ ಮುಂಚೂಣಿಯಲ್ಲಿ ಇರುವ ರೈತ ಸ್ನೇಹಿ ರಾಜ್ಯವನ್ನಾಗಿ ಬದಲಾಯಿಸಿದ್ದಾರೆ.

ADVERTISEMENT

ಬೆಳೆ ಸಾಲ ಮನ್ನಾ, ಉಚಿತ ನಿರಂತರ ವಿದ್ಯುತ್‌, ಗೋದಾಮುಗಳ ನಿರ್ಮಾಣ ಮತ್ತಿತರ ಯೋಜನೆಗಳ ನೆರವಿನಿಂದ ರೈತರ ವಲಸೆ ತಪ್ಪಿಸಲಾಗಿದೆ. ಅತ್ಯಾಧುನಿಕ ಕೃಷಿ ತಂತ್ರಜ್ಞಾನಗಳ ಮೂಲಕ ಕೃಷಿ ಉತ್ಪಾದನೆ ಹೆಚ್ಚಿಸಲಾಗಿದೆ. ಇದರಿಂದ ರೈತರ ತಲಾ ವರಮಾನವೂ ಹೆಚ್ಚಿದೆ.

ರಾಜ್ಯದ ಬಜೆಟ್‌ನ ಶೇ 26ರಷ್ಟನ್ನು ಕೃಷಿಗೆ ಮೀಸಲು ಇಟ್ಟ ದೇಶದ ಮೊದಲ ರಾಜ್ಯವೂ ಇದಾಗಿದೆ. ₹ 37,968 ಕೋಟಿಗಳನ್ನು ಕೃಷಿ ವಲಯಕ್ಕೆ ಮೀಸಲು ಇರಿಸಲಾಗಿದೆ. ಇದರಿಂದ ರಾಜ್ಯದ ಕೃಷಿ ಉತ್ಪಾದನೆಯು 1.01 ಕೋಟಿ ಟನ್‌ಗಳಿಗೆ ಏರಿಕೆಯಾಗಿದೆ. ಬೆಲೆ ಸ್ಥಿರತೆ ಯೋಜನೆ ಜಾರಿಗೆ ತಂದಿರುವ ರಾಜ್ಯ ಸರ್ಕಾರವು, ಟ್ರ್ಯಾಕ್ಟರ್ ಖರೀದಿಗೆ ಶೇ 50ರಷ್ಟು ಸಬ್ಸಿಡಿಯನ್ನೂ ನೀಡುತ್ತಿದೆ.

ರಾಜ್ಯದಲ್ಲಿನ 41 ರೈತ ಬಜಾರ್‌ಗಳು ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿವೆ. ಪ್ರತಿಯೊಬ್ಬ ರೈತರ ₹1 ಲಕ್ಷವರೆಗಿನ ಸಾಲ ಮನ್ನಾ ಮಾಡಲಾಗಿದೆ.

ರೈತ ಬಂಧು: ದೇಶದಲ್ಲಿ ಇದೇ ಮೊದಲ ಬಾರಿಗೆ ಆರಂಭಿಸಿರುವ ‘ರೈತ ಬಂಧು’ ಯೋಜನೆಯಡಿ, ಭೂಮಿ ಹೊಂದಿರುವ ರೈತರಿಗೆ ಪ್ರತಿ ಎಕರೆಗೆ ವರ್ಷವೊಂದಕ್ಕೆ ₹ 8 ಸಾವಿರ ವಿತರಿಸಲಾಗುತ್ತಿದೆ. ಇದಕ್ಕಾಗಿ ಈ ವರ್ಷ ₹ 12 ಸಾವಿರ ಕೋಟಿ ನಿಗದಿಪಡಿಸಲಾಗಿದೆ. ರಾಜ್ಯದ 58 ಲಕ್ಷ ರೈತರಿಗೆ ಇದರಿಂದ ಪ್ರಯೋಜನ ದೊರೆಯಲಿದೆ. ತೆಲಂಗಾಣ ರಾಜ್ಯ ಸ್ಥಾಪನಾ ದಿನವಾದ ಜೂನ್‌ 2ರಂದು ಫಲಾನುಭವಿಗಳಿಗೆ ಬ್ಯಾಂಕ್‌ ಪಾಸ್‌ಬುಕ್‌ ಮತ್ತು ಚೆಕ್‌ಬುಕ್‌ ವಿತರಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.