ADVERTISEMENT

ತೇಲುವ ಕಪ್ಪು ಪೆಟ್ಟಿಗೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2017, 19:30 IST
Last Updated 5 ಡಿಸೆಂಬರ್ 2017, 19:30 IST
ತೇಲುವ ಕಪ್ಪು ಪೆಟ್ಟಿಗೆ
ತೇಲುವ ಕಪ್ಪು ಪೆಟ್ಟಿಗೆ   

ಕಪ್ಪು ಪೆಟ್ಟಿಗೆ (ಬ್ಲ್ಯಾಕ್ ಬಾಕ್ಸ್) ವಿಮಾನಗಳ ಅಪಘಾತಕ್ಕೆ ಕಾರಣವಾದ ಅಂಶಗಳನ್ನು ತಿಳಿದುಕೊಳ್ಳಲು ಮತ್ತು ಮುಂದೆ ಇಂತಹ ಅಪಘಾತಗಳನ್ನು ತಡೆಯುವಲ್ಲಿ ನೆರವಾಗುವುದು.

ಅಪಘಾತ ಸಂಭವಿಸುವ ಮುಂಚಿನ ವಿಮಾನದ ಕಾರ್ಯಕ್ಷಮತೆ, ವಿಮಾನದ ವೇಗ, ಎಂಜಿನ್‍ನ ಇಂಧನದ ಪ್ರಮಾಣ, ಎಂಜಿನ್‍ನ ಸ್ಥಿತಿಗತಿ, ಆಪತ್ಕಾಲದಲ್ಲಿ ಪೈಲಟ್ ಉಳಿವಿಗಾಗಿ ಕೊಟ್ಟಂತ ಸಂಜ್ಞೆಗಳು, ವಿಮಾನ ಹಾರುತ್ತಿದ್ದ ದಿಕ್ಕು, ಹಾರಾಟದ ಎತ್ತರ, ಗಾಳಿಯ ಒತ್ತಡ, ಕಾಕ್‌ಪಿಟ್‌ನಲ್ಲಿ ಉಷ್ಣತೆ ಮುಂತಾದ ಮಾಹಿತಿಗಳನ್ನು ದಾಖಲಿಸಿಕೊಳ್ಳುತ್ತದೆ.

ಪೈಲಟ್ ಮತ್ತು ಏರ್‌ ಟ್ರಾಫಿಕ್‌ ಕಂಟ್ರೋಲ್ (ವಾಯುಸಂಚಾರ ಮಾರ್ಗ ನಿಯಂತ್ರಣ – ಎಟಿಸಿ) ಸಿಬ್ಬಂದಿ ನಡುವೆ ನಡೆಯುವ ಸಂಭಾಷಣೆ, ಎಂಜಿನ್ ಶಬ್ಧ, ಪ್ಲೈಟ್ ಡೆಕ್‍ನ ಶಬ್ದ, ವಿಮಾನದ ವಿವಿಧ ಯಂತ್ರೋಪಕರಣಗಳ ಶಬ್ದ, ವಿಮಾನದ ಪೈಲಟ್‍ಗಳ ಹೆಡ್‍ಫೋನ್‍ನಿನಲ್ಲಿರುವ ಮೈಕ್ರೋಫೋನ್ ಮತ್ತು ಈಯರ್‌ಫೋನ್‌ಗಳ ಸಂದೇಶಗಳನ್ನು, ಕಾಕ್‍ಪಿಟ್‍ನೊಳಗಿನ ಶಬ್ದಗಳನ್ನು ಕಾಕ್‍ಪಿಟ್‍ನಲ್ಲಿನ ಮೇಲ್ಛಾವಣಿಯಲ್ಲಿನ ಏರಿಯಾ ಮೈಕ್ರೋಫೋನ್‍ಗಳ ಮುಖಾಂತರ ದಾಖಲಿಸಿಕೊಳ್ಳುತ್ತದೆ.

ADVERTISEMENT

ಕಪ್ಪುಪೆಟ್ಟಿಗೆಯನ್ನು 1954ರಲ್ಲಿ ಮೊದಲಿಗೆ ಕಂಡುಹಿಡಿದವನು ಆಸ್ಟ್ರೇಲಿಯಾದ ರಸಾಯನ ಶಾಸ್ತ್ರಜ್ಞನಾದ ಡಾ. ಡೇವಿಡ್ ವಾರನ್. 1960ರಲ್ಲಿ ಎಲ್ಲಾ ವಿಮಾನಗಳಿಗೂ ಕಪ್ಪುಪೆಟ್ಟಿಗೆಯನ್ನು ಅಳವಡಿಸಿದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಆಸ್ಟ್ರೇಲಿಯಾ ಪಾತ್ರವಾಯಿತು.

ವಿಮಾನ ನೀರಿನಲ್ಲಿ ಬಿದ್ದು ಕಪ್ಪುಪೆಟ್ಟಿಗೆಗೆ ನೀರಿನ ಸಂಪರ್ಕವೇರ್ಪಟ್ಟ ತಕ್ಷಣ ಇದು ಬೀಪ್ ಸಂಕೇತವನ್ನು ಮಾಡುವಂತೆ ಅಂಡರ್‍ವಾಟರ್ ಲೊಕೇಟರ್ ಬೀಕನ್ (ಯುಎಲ್‍ಬಿ) ಎಂಬ ಸಾಧನವನ್ನು ಕಪ್ಪುಪೆಟ್ಟಿಗೆಯೊಳಗೆ ಅಳವಡಿಸಿರುತ್ತಾರೆ. ಇದು 20000 ಅಡಿ ಆಳದ ನೀರಿನೊಳಗಿನ ಒತ್ತಡದಲ್ಲೂ ಸಹ ಈ ಬೀಪ್ ಸಂಕೇತ 30 ದಿನಗಳ ಕಾಲ ಬರುವ ರೀತಿ ಕಾರ್ಯ ನಿರ್ವಹಿಸುವ ಸಾಮರ್ಥ್ಯದ ಬ್ಯಾಟರಿಗಳನ್ನು ಕಪ್ಪುಪೆಟ್ಟಿಗೆಗೆ ಅಳವಡಿಸಿರುತ್ತಾರೆ.

ವಿಮಾನಗಳು ಅಪಘಾತವಾದಾಗ ಎಂಥಾ ಕ್ಲಿಷ್ಟಕರ ಸನ್ನಿವೇಶಗಳು ಬಂದರೂ ಸಹ ಕಪ್ಪುಪೆಟ್ಟಿಗೆ ಹಾಳಾಗದ ರೀತಿ ವಿನ್ಯಾಸಿದ್ದಾರೆ ಇದು 1000 ಡಿಗ್ರಿ ಸೆಲ್ಸಿಯಸ್ ಉಷ್ಟಾಂಶವನ್ನು ಮತ್ತು 3400 ಗ್ರಾವಿಟೇಶನಲ್ ಆಕ್ಸರೇಷನ್ ಯೂನಿಟ್ ಇಂಪ್ಯಾಕ್ಟನ್ನು ತಡೆದುಕೊಳ್ಳುತ್ತದೆ. ಇಷ್ಟೆಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಿಸಿರುವ ಕಪ್ಪುಪೆಟ್ಟಿಗೆಗಳು ಇತ್ತೀಚಿಗೆ ಸಮುದ್ರದಲ್ಲಿ ಸಂಭವಿಸುತ್ತಿರುವ ವಿಮಾನಗಳ ಅವಘಡ ಸಂಭವಿಸಿದ ಸಂದರ್ಭದಲ್ಲಿ ಪ್ರಯಾಣಿಕರ ದೇಹಗಳನ್ನು ಹುಡುಕುವಲ್ಲಿ ಸಹಾಯ ಮಾಡುವುದಿರಲೀ! ವಿಮಾನ ಬಿದ್ದಂತಹ ಸ್ಥಳ ಮತ್ತು ಅವಶೇಷಗಳನ್ನು ಪತ್ತೆಮಾಡಲು ಸಹಾಯ ಮಾಡುವಲ್ಲಿ ವಿಫಲವಾಗಿವೆ. ಇವೆಲ್ಲಾ ಅನನುಕೂಲತೆ ಗಮನದಲ್ಲಿಟ್ಟುಕೊಂಡು ಬಿಸ್ಯಾಟ್ ಎಂಬ ಹೆಸರಿನ ಸ್ವಯಂಚಾಲಿತವಾಗಿ ಇಜೆಕ್ಟ್ ಆಗಿ ತೇಲುವ ಕಪ್ಪು ಪೆಟ್ಟಿಗೆಯನ್ನು ಸಂಶೋಧಿಸಿ ಪರೀಕ್ಷಿಸಿದೆ.

ಬಿಸ್ಯಾಟ್ ಕಪ್ಪು ಪೆಟ್ಟಿಗೆ ಈಗಿರುವ ಕಪ್ಪುಪೆಟ್ಟಿಗೆಯ ನ್ಯೂನತೆಗಳನ್ನು ಗಮದಲ್ಲಿಟ್ಟುಕೊಂಡು ಸ್ವಯಂ ಚಾಲಿತವಾಗಿ ಇಜೆಕ್ಟ್ ಆಗಿ ತೇಲುವ ಕಪ್ಪು ಪೆಟ್ಟಿಗೆಯನ್ನು ರಕ್ಷಣಾ ಮಂತ್ರಾಲಯದ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿ.ಆರ್.ಡಿ.ಒ) ಅಂಗ ಸಂಸ್ಥೆಯಾದ ವಿಶಾಖಪಟ್ಟಣದ ನೇವಲ್ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಯೋಗಾಲಯ (ಎನ್.ಎಸ್.ಟಿ.ಎಲ್) ಭಾರತದಲ್ಲಿ ತಯಾರಿಸುವ (ಮೇಕ್ ಇನ್ ಇಂಡಿಯಾ) ನೀತಿಯ ಭಾಗವಾಗಿ ಅಭಿವೃದ್ಧಿಪಡಿಸಿ ಪರೀಕ್ಷಿಸಲಾಗಿದೆ.ಚೈನ್ನೈನ ಆವಡಿಯಲ್ಲಿ ನಡೆದ “ಸೈನ್ನ್ ಫಾರ್ ಸೋಲ್ಜರ್’ ಪ್ರದರ್ಶನದಲ್ಲಿ ಪ್ರದರ್ಶಿಸಿ ಪರಿಣತರ ಮೆಚ್ಚುಗೆಗೆ ಒಳಗಾಗಿತ್ತು.

ಬಿಸ್ಯಾಟ್ ಕಪ್ಪು ಪೆಟ್ಟಿಗೆಯನ್ನು ಉಪಗ್ರಹ ಸಂವಹನ ವ್ಯವಸ್ಥೆ ಮತ್ತು ಟಾರ್ಪೇಡೊಗಳ ಜಾಡು ಹಿಡಿಯಲು ಬಳಸುತ್ತಿದ್ದ ತಂತ್ರಜ್ಞಾನ ಆಧಾರದ ಮೇಲೆ ಅಭಿವೃದ್ಧಿಪಡಿಸಲಾಗಿದೆ. ಈ ಕಪ್ಪು ಪೆಟ್ಟಿಗೆಯನ್ನು ಜಲಾಂತರ್ಗಾಮಿ ಮತ್ತು ವಿಮಾನಗಳಲ್ಲಿ ಬಳಸಲು ವಿನ್ಯಾಸಿಸಲಾಗಿದೆ. ಜಲಾಂತರ್ಗಾಮಿ ನಿರ್ದಿಷ್ಟ ಆಳದಲ್ಲಿ ಮುಳುಗಿದಾಗ ಸಂದೇಶಗಳನ್ನು ಕಳಿಸಲು ಬಳಸಲಾಗುತ್ತದೆ ಆದ್ದರಿಂದ ಇದು ರಕ್ಷಣಾ ಕ್ಷೇತ್ರಕ್ಕೆ ಬಹು ಉಪಯುಕ್ತವಾಗಿದೆ. ಇದನ್ನು ಪ್ರಮುಖವಾಗಿ ನಾಗರಿಕ ವಾಯುಯಾನ ಕ್ಷೇತ್ರದಲ್ಲಿ ಬಳಸಲು ಉದ್ದೇಶಿಸಲಾಗಿದೆ.

ವಿಮಾನಗಳು ಸಮುದ್ರದಲ್ಲಿ ಪತನವಾದ ನಂತರ ವಿಮಾನಕ್ಕೆ ನೀರಿನೊಡನೆ ಸಂಪರ್ಕವೇರ್ಪಟ್ಟಾಗ ಬಿಸ್ಯಾಟ್ ಕಪ್ಪು ಪೆಟ್ಟಿಗೆಯನ್ನು ಅಳವಡಿಸಿರುವ ವಿಮಾನದ ಭಾಗದ ಸಮೇತ ಸ್ವಯಂ ಚಾಲಿತವಾಗಿ ಇಜೆಕ್ಟ್ ಆಗಿ ನೀರಿನಲ್ಲಿ ತೇಲುತ್ತಾ ಉಪಗ್ರಹಕ್ಕೆ ಸಂದೇಶವನ್ನು ಕಳಿಸುತ್ತದೆ. ಇದು ರಕ್ಷಣಾ ತಂಡಕ್ಕೆ ಅವಘಡದ ಸ್ಥಳ ಮತ್ತು ವಿಮಾನದ ಅವಶೇಷಗಳನ್ನು ಪತ್ತೆಹಚ್ಚಲು ನೆರವಾಗುತ್ತದೆ.

ಬಿಸ್ಯಾಟ್ ಕಪ್ಪು ಪೆಟ್ಟಿಗೆಯ ತಂತ್ರಜ್ಞಾನವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಿ ಅಮೆರಿಕ ಮತ್ತು ರಷ್ಯಾದಿಂದ ಹಕ್ಕುಸ್ವಾಮ್ಯ ಸೂಚನೆಯ ಅನುಮತಿ ಸಿಕ್ಕಿದ ಮೇಲೆ ರಫ್ತು ಮಾಡುವ ಉದ್ದೇಶವನ್ನು ಸಹ ಡಿ.ಆರ್.ಡಿ.ಒ ಹೊಂದಿದೆ. ಏರ್‍ಬಸ್ ಮತ್ತು ಯುರೋಪಿಯನ್ ಏವೀಯೇಶನ್ ನಿಯಂತ್ರಕರು ಇನ್ನೆರೆಡು ವರ್ಷಗಳಲ್ಲಿ ನಾಗರಿಕ ವಿಮಾನಗಳಿಗೂ ಸಹ ಅಳವಡಿಸಲು ಆಲೋಚಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.