ADVERTISEMENT

ತೈಲ ಉತ್ಪಾದನಾ ಸಂಸ್ಥೆಗಳಿಗೆ ಸೆಸ್‌?

ಹೆಚ್ಚುವರಿ ಲಾಭದ ಮೇಲೆ ತೆರಿಗೆ ವಿಧಿಸಲು ಕೇಂದ್ರ ಸರ್ಕಾರದ ಚಿಂತನೆ

ಪಿಟಿಐ
Published 24 ಮೇ 2018, 19:39 IST
Last Updated 24 ಮೇ 2018, 19:39 IST
ತೈಲ ಉತ್ಪಾದನಾ ಸಂಸ್ಥೆಗಳಿಗೆ ಸೆಸ್‌?
ತೈಲ ಉತ್ಪಾದನಾ ಸಂಸ್ಥೆಗಳಿಗೆ ಸೆಸ್‌?   

ನವದೆಹಲಿ: ತೈಲ ಉತ್ಪಾದನಾ ಸಂಸ್ಥೆಗಳ ಹೆಚ್ಚುವರಿ ಲಾಭದ ಮೇಲೆ ತೆರಿಗೆ ವಿಧಿಸಿ, ಇಂಧನಗಳ ಬೆಲೆ ಏರಿಕೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.

ತೈಲೋತ್ಪನ್ನಗಳ ಬೆಲೆ ಏರಿಕೆಗೆ ಈ ತೆರಿಗೆಯು ದೀರ್ಘಾವಧಿ ಪರಿಹಾರ ಒದಗಿಸಲಿದೆ ಎಂದು ನಿರೀಕ್ಷಿಸಲಾಗಿದೆ.

ತೈಲ ಮತ್ತು ನೈಸರ್ಗಿಕ ಅನಿಲ ನಿಗಮದಂತಹ (ಒಎನ್‌ಜಿಸಿ) ಸರ್ಕಾರಿ ಮತ್ತು ಖಾಸಗಿ ವಲಯದ ತೈಲ ಉತ್ಪಾದನಾ ಸಂಸ್ಥೆಗಳ ಹೆಚ್ಚುವರಿ ಲಾಭದ ಮೇಲೆ ತೆರಿಗೆ ವಿಧಿಸಿ ದಿನೇ ದಿನೇ ದುಬಾರಿಯಾಗುತ್ತಲೇ ಸಾಗಿರುವ ಇಂಧನ ಬೆಲೆಗಳನ್ನು ನಿಯಂತ್ರಿಸುವುದು ಕೇಂದ್ರ ಸರ್ಕಾರದ ಆಲೋಚನೆಯಾಗಿದೆ.

ADVERTISEMENT

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 70 ಡಾಲರ್‌ನ ಮಟ್ಟ ದಾಟುತ್ತಿದ್ದಂತೆ, ಹೆಚ್ಚುವರಿ ಕರ (ಸೆಸ್‌) ರೂಪದಲ್ಲಿ  ಈ ತೆರಿಗೆ ವಿಧಿಸಲು ಉದ್ದೇಶಿಸಲಾಗಿದೆ.

ದೇಶಿ ತೈಲ ಬಾವಿಗಳಿಂದ ಕಚ್ಚಾ ತೈಲ ಹೊರ ತೆಗೆಯುವ ಸಂಸ್ಥೆಗಳಿಗೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆಯನ್ನೇ ಪಾವತಿಸಲಾಗುತ್ತಿದೆ. ಪ್ರತಿ ಬ್ಯಾರೆಲ್‌ಗೆ ಕಚ್ಚಾ ತೈಲದ ಬೆಲೆ 70 ಡಾಲರ್‌ ದಾಟುತ್ತಿದ್ದಂತೆ ಅದರಿಂದ ಬರುವ ವರಮಾನಕ್ಕೆ ಈ ಸೆಸ್‌ ಅನ್ವಯವಾಗಲಿದೆ.

ಈ ಸೆಸ್‌ನಿಂದ ಸಂಗ್ರಹವಾಗುವ ವರಮಾನವನ್ನು ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳಿಗೆ ಪಾವತಿಸಲಾಗುವುದು. ತೈಲೋತ್ಪನ್ನಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದರಿಂದ ಆಗುವ ನಷ್ಟ ಭರ್ತಿ ಮಾಡಿಕೊಳ್ಳಲು ಇದರಿಂದ ಅವುಗಳಿಗೆ ಸಾಧ್ಯವಾಗಲಿದೆ.

ಇದಕ್ಕೆ ಪೂರಕವಾಗಿ, ಎಕ್ಸೈಸ್‌ ಸುಂಕದಲ್ಲಿ ಕೆಲ ಮಟ್ಟಿಗಿನ ರಿಯಾಯ್ತಿ ನೀಡುವುದರಿಂದ ಬಳಕೆದಾರರಿಗೆ ತಕ್ಷಣಕ್ಕೆ ಪರಿಹಾರ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ಗಳ ಚಿಲ್ಲರೆ ಮಾರಾಟ ದರ ಇಳಿಸಲು ರಾಜ್ಯ ಸರ್ಕಾರಗಳು ತಮ್ಮ ಮಾರಾಟ ತೆರಿಗೆ ಅಥವಾ ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ಕಡಿಮೆ ಮಾಡಲು ಕೇಳಿಕೊಳ್ಳಲಾಗುವುದು.

ಖಾಸಗಿ ಸಂಸ್ಥೆಗಳ ವಿರೋಧ: 2008ರಲ್ಲಿಯೇ ಇಂತಹ ಆಲೋಚನೆ ಜಾರಿಗೆ ತರಲು ಸರ್ಕಾರ ಮುಂದಾಗಿತ್ತು. ಖಾಸಗಿ ವಲಯದ ತೈಲ ಉತ್ಪಾದನಾ ಸಂಸ್ಥೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಇದನ್ನು ಕೈಬಿಡಲಾಗಿತ್ತು.

ಅಭಿವೃದ್ಧಿ ಹೊಂದಿದ ದೇಶಗಳಾದ ಇಂಗ್ಲೆಂಡ್‌, ಚೀನಾದಲ್ಲಿ ಈ ವ್ಯವಸ್ಥೆ ಜಾರಿಯಲ್ಲಿ ಇದೆ. 2012ರಲ್ಲಿ ಚೀನಾ, ಈ ಸೆಸ್‌ ವಿಧಿಸಲು ಪರಿಗಣಿಸುವ ಪ್ರತಿ ಬ್ಯಾರೆಲ್‌ ಕಚ್ಚಾ ತೈಲದ ಬೆಲೆಯನ್ನು 55 ಡಾಲರ್‌ಗಳಿಗೆ ನಿಗದಿಪಡಿಸಿದೆ.

**

ತೈಲ ಷೇರು ಕುಸಿತ

ತೈಲ ಉತ್ಪಾದನಾ ಸಂಸ್ಥೆಗಳ ಹೆಚ್ಚುವರಿ ಲಾಭದ ಮೇಲೆ ತೆರಿಗೆ ವಿಧಿಸುವ ಕೇಂದ್ರದ ಪ್ರಸ್ತಾವದ ಕಾರಣಕ್ಕೆ ತೈಲ ಷೇರುಗಳು ಗುರುವಾರ ಶೇ 7ರವರೆಗೆ ಕುಸಿತ ಕಂಡವು. ಒಎನ್‌ಜಿಸಿ ಷೇರು ಬೆಲೆ ಶೇ 4.50ರಷ್ಟು ಕಡಿಮೆಯಾಗಿ ₹ 167.65ಕ್ಕೆ ಮತ್ತು ಆಯಿಲ್‌ ಇಂಡಿಯಾ ಷೇರು ಶೇ 6.83 ಕಡಿಮೆಯಾಗಿ ₹ 214.80ಕ್ಕೆ ಇಳಿಯಿತು.

**

ಎಕ್ಸೈಸ್‌ ಸುಂಕ ಕಡಿತಕ್ಕೆ ಹಿಂಜರಿಕೆ

ವಿವಿಧ ಸಮಾಜ ಕಲ್ಯಾಣ ಯೋಜನೆಗಳಿಗೆ ಗರಿಷ್ಠ ಪ್ರಮಾಣದಲ್ಲಿ ವರಮಾನ ಒದಗಿಸುತ್ತಿರುವ ಎಕ್ಸೈಸ್‌ ಸುಂಕ ಕಡಿತಗೊಳಿಸಲು ಹಣಕಾಸು ಸಚಿವಾಲಯ ಹಿಂದೇಟು ಹಾಕುತ್ತಿದೆ.

ಚುನಾವಣಾ ವರ್ಷದಲ್ಲಿ ಎಕ್ಸೈಸ್‌ ಸುಂಕ ಕಡಿತಗೊಳಿಸಿದರೆ, ಈ ಯೋಜನೆಗಳಿಗೆ ಸಂಪನ್ಮೂಲ ಸಂಗ್ರಹಿಸುವುದು ಕಷ್ಟವಾಗಲಿದೆ ಎನ್ನುವುದು ಅದರ ನಿಲುವಾಗಿದೆ.

**

ಇಂಧನಗಳ ಮೇಲಿನ ತೆರಿಗೆ ಭಾರ ತಗ್ಗಿಸಲು ರಾಜ್ಯಗಳು ಆರ್ಥಿಕವಾಗಿ ಸಮರ್ಥವಾಗಿದ್ದು, ಶೇ 10ರಿಂದ ಶೇ 15ರಷ್ಟು ಕಡಿತಕ್ಕೆ ಮುಂದಾಗಬೇಕು

–ರಾಜೀವ್‌ ಕುಮಾರ್‌, ನೀತಿ ಆಯೋಗದ ಉಪಾಧ್ಯಕ್ಷ

**

ಹೆಚ್ಚುತ್ತಿರುವ ಇಂಧನ ಬೆಲೆಗಳಿಗೆ ತಕ್ಷಣ ಪರಿಹಾರ ಕಂಡುಕೊಳ್ಳಲು ಕೇಂದ್ರ ಸರ್ಕಾರ ಕಾರ್ಯಪ್ರವೃತ್ತವಾಗಿದೆ.

–ಧರ್ಮೇಂದ್ರ ಪ್ರಧಾನ್‌, ಪೆಟ್ರೋಲಿಯಂ ಸಚಿವ

**

ಪೆಟ್ರೋಲ್‌ ಮತ್ತು ಡೀಸೆಲ್‌ಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದರಿಂದ ದರಗಳು ಅಗ್ಗವಾಗಲಿವೆ.

–ದೇವೇಂದ್ರ ಫಡಣವೀಸ್‌, ಮಹಾರಾಷ್ಟ್ರ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.