ADVERTISEMENT

ತೈಲ ಕೊರತೆ-ಬೆಲೆ ಏರಿಕೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2011, 19:30 IST
Last Updated 24 ಮಾರ್ಚ್ 2011, 19:30 IST


ನವದೆಹಲಿ, (ಪಿಟಿಐ): ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾದಲ್ಲಿ ನಡೆದಿರುವ ನಾಗರಿಕ ದಂಗೆಯಿಂದ ನಿರ್ಮಾಣವಾಗಿರುವ ಪ್ರಕ್ಷುಬ್ಧ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ದೇಶದಲ್ಲಿ ತೀವ್ರ  ಸ್ವರೂಪದ ತೈಲ ಕೊರತೆ ಎದುರಾಗಲಿದೆ ಎಂದು ಹಣಕಾಸು ಸಚಿವ ಪ್ರಣವ್ ಮುಖರ್ಜಿ  ಕಳವಳ ವ್ಯಕ್ತಪಡಿಸಿದ್ದಾರೆ.

ಭಾರತಕ್ಕೆ ಅಗತ್ಯವಿರುವ ಮೂರನೇ ಎರಡು ಭಾಗದಷ್ಟು ತೈಲ ಮಧ್ಯಪ್ರಾಚ್ಯ ರಾಷ್ಟ್ರಗಳಿಂದಲೇ ಆಮದಾಗುತ್ತಿದೆ. ಅಲ್ಲಿಯ ಗಲಭೆಗ್ರಸ್ತ ಪರಿಸ್ಥಿತಿ ಮುಂದುವರಿದರೆ ತೈಲ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ ಎಂದರು.

ರಾಜ್ಯಸಭೆಯಲ್ಲಿ ಗುರುವಾರ ಹಣಕಾಸು ಮಸೂದೆ ಮೇಲೆ ನಡೆದ ಚರ್ಚೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈಗ ಲಿಬಿಯಾ ಮತ್ತು ಬಹ್ರೇನ್‌ಗಳಲ್ಲಿಯ ರಾಜಕೀಯ ಸ್ಥಿತಿ ಹೀಗೆಯೇ ಮುಂದುವರಿದಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಪ್ರತಿ ಬ್ಯಾರೆಲ್‌ಗೆ ನೂರು ಡಾಲರ್ ದಾಟುವ ಸಾಧ್ಯತೆ ಇದೆ.

ಹೀಗಾಗಿ ಜೀವನಾವಶ್ಯಕ ವಸ್ತುಗಳ ಬೆಲೆಗಳ ಏರಿಕೆ ಅನಿವಾರ್ಯವಾಗುತ್ತದೆ ಅಲ್ಲದೇ ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಬೀಳುತ್ತದೆ ಎಂದು ತಿಳಿಸಿದರು.

ಈಜಿಪ್ಟ್ ಮತ್ತು ಟ್ಯುನಿಷಿಯಾಗಳಲ್ಲಿ ನಡೆದ ಗಲಭೆಯಿಂದಾಗಿ ಕಳೆದ ತಿಂಗಳು ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 120 ಡಾಲರ್ ತಲುಪಿತ್ತು. ತೈಲ ಅಭಾವದ ಚಿಂತೆ ತಮ್ಮನ್ನು ಕಾಡುತ್ತಿದೆ ಎಂದು ಮುಖರ್ಜಿ ಹೇಳಿದರು. ಮಧ್ಯ ಪ್ರಾಚ್ಯದಲ್ಲಿ ಆರು ದಶಲಕ್ಷಕ್ಕೂ ಹೆಚ್ಚು ಅನಿವಾಸಿ ಭಾರತೀಯರಿದ್ದು ಅವರ ರಕ್ಷಣೆಯ ಬಗ್ಗೆಯೂ ತೀವ್ರ ಕಳವಳ ವ್ಯಕ್ತಪಡಿಸಿದರು.

ನಿಯಂತ್ರಣ: ಕಳೆದ ವರ್ಷ ಪೆಟ್ರೋಲ್ ಬೆಲೆಯನ್ನು ಸರ್ಕಾರ ತನ್ನ ನಿಯಂತ್ರಣದಿಂದ ಮುಕ್ತಗೊಳಿಸಿದ್ದು, ಡೀಸೆಲ್ ಬೆಲೆಯನ್ನು  ತನ್ನ ನಿಯಂತ್ರಣದಲ್ಲಿಯೇ ಉಳಿಸಿಕೊಂಡಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೀಗೆ ಹೆಚ್ಚಳವಾದಲ್ಲಿ ಪೆಟ್ರೋಲ್ ದರ ಹೆಚ್ಚಳ ಅನಿವಾರ್ಯವಾಗುತ್ತದೆ ಎನ್ನುವುದು ತಜ್ಞರ ಅಭಿಮತ.

 ನಾಲ್ಕು ರಾಜ್ಯ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆದಿರುವ ವಿಧಾನಸಭಾ ಚುನಾವಣೆಯ ಬಳಿಕ ಡೀಸೆಲ್ ಬೆಲೆ ನಿರ್ಣಯವನ್ನೂ ತನ್ನ ನಿಯಂತ್ರಣದಿಂದ ಸರ್ಕಾರ ಮುಕ್ತಗೊಳಿಸುವ ಮಹತ್ವದ ನಿರ್ಧಾರ ಕೈಗೊಳ್ಳಬಹುದು ಎನ್ನುವ ಲೆಕ್ಕಾಚಾರ ಕೂಡ ನಡೆದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.