ADVERTISEMENT

ತೈಲ: ಪರ್ಯಾಯ ಪಾವತಿಗೆ ಇಂದು ಚರ್ಚೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2010, 13:05 IST
Last Updated 31 ಡಿಸೆಂಬರ್ 2010, 13:05 IST

ನವದೆಹಲಿ (ಪಿಟಿಐ): ಇರಾನ್‌ನಿಂದ ಆಮದು ಮಾಡಿಕೊಳ್ಳುವ  ಕಚ್ಚಾ ತೈಲಕ್ಕೆ ಇದುವರೆಗೆ ಪಾಲಿಸಿಕೊಂಡು ಬಂದಿದ್ದ ಹಣ ಪಾವತಿ ಸೌಲಭ್ಯವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ, ಹೊಸ ಪಾವತಿ ವ್ಯವಸ್ಥೆ ರೂಪಿಸುವ ಬಗ್ಗೆ ಶುಕ್ರವಾರ ಸಭೆ ಸೇರಿ ಚರ್ಚಿಸಲು ನಿರ್ಧರಿಸಲಾಗಿದೆ.

ಹಣ ಪಾವತಿಗೆ ಪರ್ಯಾಯ ವ್ಯವಸ್ಥೆ ರೂಪಿಸುವ ಬಗ್ಗೆ ನಾವು ಕಾರ್ಯಪ್ರವೃತ್ತರಾಗಿದ್ದೇವೆ. ಹಣಕಾಸು ಸಚಿವಾಲಯದ ಸಹಯೋಗದಲ್ಲಿ ಮುಂದಿನ ಕೆಲ ದಿನಗಳಲ್ಲಿ ಈ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತೈಲ ಕಾರ್ಯದರ್ಶಿ ಎಸ್. ಸುಂದರೇಷನ್ ಗುರುವಾರ ಇಲ್ಲಿ ತಿಳಿಸಿದರು.

ಸದ್ಯಕ್ಕೆ ಬಳಕೆಯಲ್ಲಿ ಇರುವ ಎಲ್ಲ ಬಗೆಯ ಸರಕು ಮತ್ತು ವಹಿವಾಟು ಒಳಗೊಂಡಿರುವ ‘ಎಯುಸಿ’ ವ್ಯವಸ್ಥೆಯು, ಕೆಲ ಬಗೆಯ ಒತ್ತಡದಲ್ಲಿದೆ. ಈ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲು ‘ಆರ್‌ಬಿಐ’ ಬಯಸಿದೆ ಎಂದು ಸುಂದರೇಷನ್ ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಸಂಸ್ಥೆಗಳು ಕಚ್ಚಾ ತೈಲ  ಅಥವಾ ನೈಸರ್ಗಿಕ ಅನಿಲ ಆಮದು ಮಾಡಿಕೊಳ್ಳುವುದಕ್ಕೆ ಪ್ರತಿಯಾಗಿ ಇರಾನ್‌ಗೆ ಹಣ ಪಾವತಿ ಮಾಡಲು ಏಷ್ಯನ್ ಕ್ಲಿಯರಿಂಗ್ ಯೂನಿಯನ್ (ಎಯುಸಿ)  ವ್ಯವಸ್ಥೆ ಬಳಸಬಾರದು ಎಂದು ಆರ್‌ಬಿಐ ನಿರ್ಬಂಧ ವಿಧಿಸಿದೆ. ಇರಾನ್ ಜತೆಗಿನ ವ್ಯಾಪಾರ ವಹಿವಾಟು ಮತ್ತು ಚಾಲ್ತಿ ಖಾತೆಯನ್ನು ಪ್ರಾದೇಶಿಕ ಪಾವತಿ ವ್ಯವಸ್ಥೆಯಾಗಿರುವ ‘ಎಯುಸಿ’ ಹೊರಗೆ ಇತ್ಯರ್ಥಪಡಿಸಲು ಕಂಪೆನಿಗಳಿಗೆ ಅನುಮತಿ ನೀಡಲಾಗುವುದು ಎಂದೂ ಪ್ರಕಟಿಸಿದೆ.  ಇದರಿಂದ ಕಚ್ಚಾ ತೈಲಕ್ಕೆ ಹಣ ಪಾವತಿಸಲು ಇದುವರೆಗೆ ಅನುಸರಿಸಿಕೊಂಡು ಬರಲಾಗುತ್ತಿದ್ದ ವ್ಯವಸ್ಥೆಯೇ ಬುಡಮೇಲು ಆದಂತಾಗಿದೆ.

‘ಎಯುಸಿ’ಯ ಅನುಪಸ್ಥಿತಿಯಲ್ಲಿ, ಕೇಂದ್ರೀಯ ಬ್ಯಾಂಕ್‌ನ   ಖಾತರಿ ಇಲ್ಲದೇ ತೈಲ ಮಾರಾಟ ಮಾಡುವುದು ಇರಾನ್ ಮತ್ತು ಅದರ ಕಚ್ಚಾ ತೈಲ ಪೂರೈಕೆ ಸಂಸ್ಥೆಯಾಗಿರುವ ರಾಷ್ಟ್ರೀಯ ತೈಲ ಸಂಸ್ಥೆಗೆ  (ಎನ್‌ಐಒಸಿ) ತೀವ್ರ ಆತಂಕ ಮೂಡಿಸಿದೆ.

ಶುಕ್ರವಾರ ಸಭೆ: ಪರ್ಯಾಯ ಪಾವತಿ ವ್ಯವಸ್ಥೆ ರೂಪಿಸುವ ಬಗ್ಗೆ ‘ಆರ್‌ಬಿಐ’ ಅಧಿಕಾರಿಗಳು ಮತ್ತು ಇರಾನ್ ಕೇಂದ್ರೀಯ ಬ್ಯಾಂಕ್‌ನ ಅಧಿಕಾರಿಗಳು ಶುಕ್ರವಾರ ಮುಂಬೈನಲ್ಲಿ ಸಭೆ ಸೇರಿ ಚರ್ಚಿಸಲಿದ್ದಾರೆ. ಬದಲಿ ವ್ಯವಸ್ಥೆಯು ಜಪಾನಿನ ಯೆನ್ ಅಥವಾ ಸ್ಥಳೀಯ ಕರೆನ್ಸಿ ರೂಪದಲ್ಲಿ ಇರುವ  ಸಾಧ್ಯತೆಗಳು ಇವೆ. ಹಲವು ಬ್ಯಾಂಕ್‌ಗಳ ಮೂಲಕವೂ ಪಾವತಿ ಮಾಡಬಹುದಾಗಿದೆ.

ತೈಲ ಮಾರಾಟ ಸಂಸ್ಥೆಗಳು ಯೂರೋಪ್ ಬ್ಯಾಂಕ್‌ಗಳ ಮೂಲಕವೂ ಹಣ ಪಡೆಯಬಹುದಾಗಿದೆ. ಈ ಬ್ಯಾಂಕ್‌ಗಳು ‘ಎನ್‌ಐಒಸಿ’ ಪರವಾಗಿ ಹಣ ಪಾವತಿ ಸ್ವೀಕರಿಸಬಹುದಾಗಿದೆ. ಇರಾನ್‌ವು, ಭಾರತವು ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿರುವ 2ನೇ ಅತಿ ದೊಡ್ಡ ದೇಶವಾಗಿದೆ.

 ಪರಸ್ಪರ ಸ್ವೀಕಾರಾರ್ಹವಾದ ಪಾವತಿ ವ್ಯವಸ್ಥೆ ಇಲ್ಲದ ಕಾರಣಕ್ಕೆ ಭಾರತವು ಮುಂದಿನ ತಿಂಗಳಿನಿಂದ ಇರಾನ್‌ನಿಂದ 10 ದಶಲಕ್ಷ ಬ್ಯಾರಲ್‌ಗಳಷ್ಟು ಕಚ್ಚಾ ತೈಲ ಆಮದು ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.