ADVERTISEMENT

ತೈಲ ಸಬ್ಸಿಡಿ ರೂ.83500 ಕೋಟಿ!

​ಪ್ರಜಾವಾಣಿ ವಾರ್ತೆ
Published 22 ಮೇ 2012, 19:30 IST
Last Updated 22 ಮೇ 2012, 19:30 IST
ತೈಲ ಸಬ್ಸಿಡಿ ರೂ.83500 ಕೋಟಿ!
ತೈಲ ಸಬ್ಸಿಡಿ ರೂ.83500 ಕೋಟಿ!   

ನವದೆಹಲಿ (ಪಿಟಿಐ): ಕಳೆದ ಹಣಕಾಸು ವರ್ಷದ 4ನೇ ತ್ರೈಮಾಸಿಕದಲ್ಲಿ (ಜನವರಿ-ಮಾರ್ಚ್) ಡೀಸೆಲ್, ಅಡುಗೆ ಅನಿಲ ಮತ್ತು ಸೀಮೆಎಣ್ಣೆ ಮಾರಾಟದ ಮೇಲೆ ಆಗಿರುವ ನಷ್ಟ ಭರ್ತಿಗಾಗಿ ಸರ್ಕಾರಿ ಸ್ವಾಮ್ಯದ 3 ತೈಲ ಕಂಪೆನಿಗಳಿಗೆ ರೂ. 38,500 ಕೋಟಿಗಳಷ್ಟು ಹೆಚ್ಚುವರಿ ಸಬ್ಸಿಡಿ ಕೇಂದ್ರ ಸರ್ಕಾರ ನೀಡಲಿದೆ.

`ತೈಲ ಸಚಿವಾಲಯ ರೂ. 38,500 ಕೋಟಿ ಸಬ್ಸಿಡಿ ನೀಡಲು ಅನುಮತಿ ನೀಡಿದೆ~ ಎಂದು ಮಂಗಳವಾರ ಇಲ್ಲಿ ಹಿರಿಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಕಳೆದ ಹಣಕಾಸು ವರ್ಷದ ಮೊದಲ ಮೂರು ತ್ರೈಮಾಸಿಕ ಅವಧಿಯಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ (ಎಚ್‌ಪಿಸಿಎಲ್) ಮತ್ತು ಭಾರತ್ ಪೆಟ್ರೋಲಿಯಂಗೆ (ಬಿಪಿಸಿಎಲ್) ಒಟ್ಟು ರೂ. 45 ಸಾವಿರ ಕೋಟಿ ಸಬ್ಸಿಡಿ ನೆರವನ್ನು ಸರ್ಕಾರ ನೀಡಿತ್ತು. ಮೂರೂ ಕಂಪೆನಿ ಡೀಸೆಲ್, ಅಡುಗೆ ಅನಿಲ ಮತ್ತು ಸೀಮೆಎಣ್ಣೆ ಮಾರಾಟದ ಮೇಲೆ ರೂ. 1,38,541 ಕೋಟಿಯಷ್ಟು  ನಷ್ಟ ಅನುಭವಿಸಿವೆ.
 
ಈಗ 4ನೇ ತ್ರೈಮಾಸಿಕ ಅವಧಿಯ ಹೆಚ್ಚುವರಿ ನೆರವೂ ಸೇರಿದರೆ  ಒಟ್ಟು ಸಬ್ಸಿಡಿ ಮೊತ್ತ ರೂ. 83,500 ಕೋಟಿಗಳಷ್ಟಾಗಲಿದೆ. ತೈಲ ಮಾರಾಟ ಕಂಪೆನಿಗಳಿಗೆ ಆಗಿರುವ ಒಟ್ಟು ನಷ್ಟದ ಶೇ 60ರಷ್ಟನ್ನು ಇದು ಭರಿಸಲಿದೆ ಎಂದು ಅಧಿಕಾರಿ ಹೇಳಿದ್ದಾರೆ.
 
ಬಿಪಿಸಿಎಲ್, ಐಒಸಿ ಮತ್ತು ಎಚ್‌ಪಿಸಿಎಲ್ ಕ್ರಮವಾಗಿ 4ನೇ ತ್ರೈಮಾಸಿಕದ ಹಣಕಾಸು ಸಾಧನೆಯನ್ನು ಮೇ 25, ಮೇ 28 ಮತ್ತು 29ರಂದು ಪ್ರಕಟಿಸಲಿವೆ. ಸರ್ಕಾರ ನೆರವು ನೀಡಿದರೂ, ಈ ಕಂಪೆನಿಗಳ ವರಮಾನ ನಷ್ಟ ದೊಡ್ಡ ಪ್ರಮಾಣದಲ್ಲಿರಲಿದೆ ಎಂದಿದ್ದಾರೆ.

`ಒಎನ್‌ಜಿಸಿ~, `ಆಯಿಲ್ ಇಂಡಿಯ~ ಮತ್ತು `ಜಿಎಐಎಲ್~ಗೆ ಸರ್ಕಾರ  2011ರ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ರೂ. 36,894 ಕೋಟಿಯಷ್ಟು ಇಂಧನ ಸಬ್ಸಿಡಿ ನೀಡಿದೆ. 4ನೇ ತ್ರೈಮಾಸಿಕದಲ್ಲಿ ಈ ಸಂಸ್ಥೆಗಳಿಗೆ ಹೆಚ್ಚುವರಿಯಾಗಿ ರೂ. 18,106 ಕೋಟಿ ಸಬ್ಸಿಡಿ ಲಭಿಸಲಿದೆ.

ಡೀಸೆಲ್, ಅಡುಗೆ ಅನಿಲ, ಸೀಮೆಎಣ್ಣೆ ಜತೆಗೆ, ಪೆಟ್ರೋಲ್ ಮಾರಾಟದ ಮೇಲೆಯೂ ಈ ಸಂಸ್ಥೆಗಳು  ಕಳೆದ ಹಣಕಾಸು ವರ್ಷದಲ್ಲಿ ರೂ. 4,890 ಕೋಟಿ ನಷ್ಟ ಅನುಭವಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.