ADVERTISEMENT

ತೊಗರಿ ಖರೀದಿ ನಿರೀಕ್ಷೆಯಲ್ಲಿ...

ಸ್ಥಗಿತಗೊಂಡ ಖರೀದಿ ಕೇಂದ್ರ: ನಾಲ್ಕು ದಿನಗಳಿಂದ ಸರತಿ ಸಾಲಿನಲ್ಲಿ ನಿಂತಿರುವ ರೈತರು

ಡಿ.ಬಿ, ನಾಗರಾಜ
Published 12 ಜೂನ್ 2017, 19:30 IST
Last Updated 12 ಜೂನ್ 2017, 19:30 IST
ಟ್ರ್ಯಾಕ್ಟರ್‌ಗಳಲ್ಲಿ ತೊಗರಿ ಹೇರಿಕೊಂಡು ಬಂದಿದ್ದ ರೈತರು ತಾಳಿಕೋಟೆಯ ತೊಗರಿ ಖರೀದಿ ಕೇಂದ್ರದ ಎದುರು ವಾಹನಗಳನ್ನು ಸರದಿಯಲ್ಲಿ ನಿಲ್ಲಿಸಿದ್ದ ದೃಶ್ಯ ಸೋಮವಾರ ಕಂಡುಬಂದಿತು
ಟ್ರ್ಯಾಕ್ಟರ್‌ಗಳಲ್ಲಿ ತೊಗರಿ ಹೇರಿಕೊಂಡು ಬಂದಿದ್ದ ರೈತರು ತಾಳಿಕೋಟೆಯ ತೊಗರಿ ಖರೀದಿ ಕೇಂದ್ರದ ಎದುರು ವಾಹನಗಳನ್ನು ಸರದಿಯಲ್ಲಿ ನಿಲ್ಲಿಸಿದ್ದ ದೃಶ್ಯ ಸೋಮವಾರ ಕಂಡುಬಂದಿತು   

ವಿಜಯಪುರ: ಈ ಹಿಂದೆ ತೊಗರಿ ಖರೀದಿ ಕೇಂದ್ರದಲ್ಲಿ ಹೆಸರು ನೋಂದಾಯಿಸಿ, ಮಾರಾಟ ಮಾಡಲು ಸಾಧ್ಯವಾಗದೇ ಹೋದ ರೈತರಿಗಾಗಿ ರಾಜ್ಯ ಸರ್ಕಾರ ಎರಡನೇ ಹಂತದಲ್ಲಿ ಖರೀದಿ ಪ್ರಕ್ರಿಯೆ ಆರಂಭಿಸಿತ್ತು. ಆದರೆ, ಈ ಅವಧಿ ಜೂನ್ 1ರಿಂದ 10ರ ವರೆಗೆ ಮಾತ್ರ ಇತ್ತು.

ಆದರೆ, ಹೆಚ್ಚುವರಿಯಾಗಿ ನೀಡಿದ ಈ ಅವಕಾಶದ ಹೊರತಾಗಿಯೂ ರೈತರ ಬಳಿ ಅಪಾರ ತೊಗರಿ ದಾಸ್ತಾನಿದೆ. ಇದನ್ನು ಖರೀದಿಸುತ್ತಾರೆ ಎಂಬ ನಿರೀಕ್ಷೆಯಲ್ಲಿ ಜಿಲ್ಲೆಯ ರೈತರು ಮುಚ್ಚಿದ ಖರೀದಿ ಕೇಂದ್ರದ ಎದುರು ನಾಲ್ಕು ದಿನಗಳಿಂದ ಸರದಿ ನಿಂತಿದ್ದಾರೆ.

ತಾಳಿಕೋಟೆ ಪಟ್ಟಣದ ಹೊರ ವಲಯದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮಿನಲ್ಲಿ ಆರಂಭಿಸಲಾಗಿದ್ದ ಖರೀದಿ ಕೇಂದ್ರದ ಮುಂದೆ ಸರದಿಯಲ್ಲಿ ನಿಂತಿದ್ದ ಗೊಟಗುಣಕಿಯ ರುದ್ರಸ್ವಾಮಿ ಹಿರೇಮಠ, ‘ನಾಕ್‌ ದಿನದಿಂದ ಪಾಳಿ ಹಚ್ಚೀವ್ರೀ. ಶನಿವಾರಾನೇ ಖರೀದಿ ಕೇಂದ್ರ ಬಂದ್‌ ಮಾಡ್ಯಾರ. ನಾವೆಲ್ಲಿಗ್‌ ಹೋಗ್ಬೇಕ್ರೀ? ಮನ್ಯಾಗೆ ದುಡಿಯೋನ್‌ ನಾನೊಬ್ನ. ಇಲ್ಗೆ ಬಂದ್ ಕುಂತಿರೋದ್ರಿಂದ ಮನೀಬಾಳೇನೂ ನಿಂತೈತಿ. ಟ್ರ್ಯಾಕ್ಟರ್‌ ಬಾಡಿಗಿ, ಡ್ರೈವರ್‌ ಭತ್ಯೆ ದಿನಾಲೂ ಕೊಡಾಕ ಬೇಕಲ್ರೀ? ಕೈಯಾಗ ರೊಕ್ಕಿಲ್ಲ ಕಾಸಿಲ್ಲ. ಏನ್ ಮಾಡ್ಬೇಕಂತನೂ ಗೊತ್ತಿಲ್ಲ’ ಎಂದು ಅಳಲು ತೋಡಿಕೊಂಡರು.

ಇವರಂತೆಯೇ ಹಲವಾರು ಖರೀದಿ ಕೇಂದ್ರಗಳ ಮುಂದೆ ರೈತರು ಜಮಾಯಿಸಿದ್ದು ಸೋಮವಾರ ಕಂಡುಬಂತು.

ಬಿತ್ತನೆಗೆ ಕಾಸಿಲ್ಲ: ‘ಹದ ಮಳಿ ಆಗೇತಿ. ಮುಂಗಾರಿನ ಬಿತ್ತಗಿ ಆಗಬೇಕು. ಆದ್ರ ಎಲ್ಲಾ ಬಿಟ್ಟು ಇಲ್ಲೀಗ್‌ ಬಂದು ಪಾಳಿ ಹಚ್ಚೇವಿ. ನಮ್ಮ ನಂಬರ್ರೂ ಬರ್ಕೊಂಡಾರ್ರಿ. ಆದ್ರ, ಈಗ ನೋಡಿದ್ರ ಖರೀದಿ ನಿಲ್ಲೇಸೇವಿ, ಹೋಗ್ರಿ ಅನ್ನಾಕತ್ತಾರ’ ಎಂದು ಬಂಟನೂರಿನ ಪಿ.ಎಸ್‌.ಪೂಜಾರಿ ಆತಂಕ ವ್ಯಕ್ತಪಡಿಸಿದರು.

‘ಮಕ್ಕಳನ್ನ ಖಾಸಗಿ ಸಾಲಿಗೆ ಹಾಕೇವ್ರಿ. ಸಾಲಿ ಶುರುವಾಗಿ 15 ದಿನಾ ಆತು. ತೊಗರಿ ಮಾರಿ ಫೀ ಕಟ್ಟೋಣಂದ್ರ ತೊಗೊಳ್ಳವರ ಇಲ್ಲದಾಗೇತಿ. ನಮ್ಮ ಪಾಳಿ ನಂತ್ರ ಬಂದವ್ರ ತೊಗರಿ ಆಗಲೇ ಖರೀದಿ ಆಗೇತಿ; ಆದ್ರ ನಮ್ಮಂಥ ಬಡವರನ್ನ ಕೇಳೋರು ಯಾರು?’ ಎಂದು ರೈತ ದಸ್ತಗೀರಸಾಬ್‌
ಜಮಾದಾರ ಅಸಹಾಯಕತೆ ವ್ಯಕ್ತಪಡಿಸಿದರು.

‘ಸದ್ಯಕ್ಕ ಮಾಲು ಮಾರಿದ್ರ ಮಾತ್ರ ನಾ ಉಳಿತೇನಿ. ಇಲ್ದಿದ್ರ ಜೀವನ ಕಷ್ಟ ಐತಿ. ಹ್ವಾದ ವರ್ಸ ಬಿತ್ತಾಕ ಮಾಡ್ದ ಸಾಲದ ಬಡ್ಡಿ ಕಟ್ಟಾಕಂತ ಮತ್ತೊಂದ್‌ ಕಡೆ ಸಾಲ ಮಾಡೇನಿ. ಇದೀಗ ಹದ ಮಳಿ ಆಗೇತಿ. ಬಿತ್ತಿಗಿ ಆಗಬೇಕು. ಕೈಯಾಗ್‌ ರೊಕ್ಕಿಲ್ಲ. ಮಾರೇನಂದ್ರ ಮನ್ಯಾಗ ಬಂಗಾರಾನೂ ಇಲ್ಲ. ಇಲ್ಲಿಂದ ಮಾಲ್‌ ವಾಪಸ್‌ ತೊಗೊಂಡು ಹೋಗೋ ಸ್ಥಿತಿ ಬಂದ್ರ ನನ್ನ ಬದುಕು ಬೀದಿಗೆ ಬಿದ್ದಂಗ’ ಎಂದು ತಾಳಿಕೋಟೆಯ ಶರಣಪ್ಪ ಅಸ್ಕಿ ಅಲವತ್ತುಕೊಂಡರು.

1.69 ಲಕ್ಷ ಕ್ವಿಂಟಲ್‌ ಖರೀದಿ
‘2 ಲಕ್ಷ ಕ್ವಿಂಟಲ್‌ ತೊಗರಿ ಖರೀದಿಸುವಂತೆ ರಾಜ್ಯ ಸರ್ಕಾರ ಸೂಚಿಸಿತ್ತು. ಅದರಂತೆ ಜಿಲ್ಲೆಯಲ್ಲಿ ಎರಡನೇ ಹಂತದಲ್ಲಿ 36 ಖರೀದಿ ಕೇಂದ್ರ ಆರಂಭಿಸಿ ಅಂದಾಜು 1,68,640 ಕ್ವಿಂಟಲ್‌ ತೊಗರಿ ಖರೀದಿಸಲಾಗಿದೆ. ನಿಖರ ಮಾಹಿತಿ ಲಭ್ಯವಾದರೆ ಇದರ ಪ್ರಮಾಣ 1.82 ಲಕ್ಷ ಕ್ವಿಂಟಲ್‌ಗೆ ಏರಿಕೆಯಾಗಬಹುದು. ನೋಂದಣಿಯಾಗಿದ್ದ ಬಹುತೇಕ ರೈತರ ತೊಗರಿ ಖರೀದಿ ನಡೆದಿದೆ. ಕೆಲ ಮಂದಿಯಷ್ಟೇ ಉಳಿದಿರಬಹುದು’ ಎಂದು ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಡಿ.ಚಬನೂರ ಮಾಹಿತಿ ನೀಡಿದರು.
*
ದಿನಾಲೂ ಟ್ರ್ಯಾಕ್ಟರ್‌ ಬಾಡ್ಗಿ ಯಾಡ್‌ ಸಾವಿರ ರೂಪಾಯಿ, ಡ್ರೈವರ್‌ ಭತ್ಯೆ ಯಾಡ್ನೂರ್‌ ರೂಪಾಯಿ. ಇದರ್‌ ಮ್ಯಾಲೆ ನಮ್ಮ ಊಟೋಪಚಾರದ ಖರ್ಚು ನೋಡಿ ಕೊಳ್ಳೋದ... ಭಾಳ ಕಷ್ಟ ಆಗೇತಿ.
ಸೋಮಶೇಖರ ಗೆಜ್ಜಿ,
ಸಾಸನೂರಿನ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.