ನವದೆಹಲಿ(ಪಿಟಿಐ): ನೈಸರ್ಗಿಕ ಅನಿಲ ದರವನ್ನು ಎರಡು ಪಟ್ಟು ಹೆಚ್ಚಿಸಿರುವ ಸರ್ಕಾರದ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪೆಟ್ರೋಲಿಯಂ ಸಚಿವ ಎಂ.ವೀರಪ್ಪ ಮೊಯಿಲಿ ಸ್ಪಷ್ಟಪಡಿಸಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್‌ಗೆ ಸಂಬಂಧಿಸಿದ ಕೆಲವು ಅನಿಲ ಉತ್ಪನ್ನಗಳ ದರವನ್ನಾದರೂ ಈ ಮೊದಲಿನ ಮಟ್ಟದಲ್ಲೇ ಉಳಿಸಿಕೊಳ್ಳಬೇಕು ಎಂಬ ಕೇಂದ್ರ ಹಣಕಾಸು ಸಚಿವಾಲಯದ ಒತ್ತಾಯವನ್ನೂ ಸಚಿವ ಮೊಯಿಲಿ ಪರಿಗಣಿಸಿಲ್ಲ.
ನೈಸರ್ಗಿಕ ಅನಿಲ ದರ ದುಪ್ಪಟ್ಟು ಏರಿಕೆಗೆ ಸಂಬಂಧಿಸಿದಂತೆ `ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಸಂಪುಟ ಸಮಿತಿ'(ಸಿಸಿಇಎ) ತೆಗೆದುಕೊಂಡಿರುವ ನಿರ್ಧಾರ ಕುರಿತು ಸರ್ಕಾರ ಮತ್ತೆ ಆಲೋಚಿಸುವ, ಪರಾಮರ್ಶೆ ನಡೆಸುವ ಯಾವುದೇ ಸಾಧ್ಯತೆ ಇಲ್ಲ.
ಈ ವಿಚಾರದಲ್ಲಿ ಅಸ್ಪಷ್ಟತೆಯಾಗಲೀ, ಗೊಂದಲವಾಗಲೀ ಇಲ್ಲ. ನಮ್ಮ ನಿಲುವು ಬಹಳ ಸ್ಪಷ್ಟವಿದೆ. ಮತ್ತೆ ಈ ಕುರಿತು ವ್ಯಾಖ್ಯಾನಿಸುವ ಅಗತ್ಯವೂ ಇಲ್ಲ ಎಂದು ಸಚಿವರು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕೇಂದ್ರ ಸರ್ಕಾರ ನೈಸರ್ಗಿಕ ಅನಿಲ ದರ ಏರಿಕೆ ವಿಚಾರವನ್ನು ಜೂನ್ 27ರಂದು ಪ್ರಕಟಿಸಿತು. ಇದು, ಮುಕೇಶ್ ಅಂಬಾನಿ ಒಡೆತನದ `ರಿಲಯನ್ಸ್ ಇಂಡಸ್ಟ್ರೀಸ್ ಲಿ.' ಕಂಪೆನಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲೇ ದರದಲ್ಲಿ ಭಾರಿ ಏರಿಕೆ ಮಾಡಲಾಗಿದೆ ಎಂಬ ವಿವಾದಕ್ಕೂ ಎಡೆ ಮಾಡಿಕೊಟ್ಟಿದೆ.
ಈ ಕುರಿತು ಎರಡು ಪತ್ರಿಕೆಗಳಲ್ಲಿನ ಸಂಪಾದಕೀಯಗಳತ್ತ ಗಮನ ಸೆಳೆದಿದ್ದ ಕೇಂದ್ರ ಹಣಕಾಸು ಸಚಿವಾಲಯ, ಜುಲೈ 4ರಂದು ಪೆಟ್ರೋಲಿಯಂ ಸಚಿವಾಲಯಕ್ಕೆ ಪತ್ರವನ್ನೂ ಬರೆದಿತ್ತು. ಸಂಪಾದಕೀಯದಲ್ಲಿನ ಸಲಹೆಗಳನ್ನು ಪರಿಗಣಿಸಬಹುದಾಗಿದೆ ಎಂದೂ ಹೇಳಿತ್ತು.
`ಹಣಕಾಸು ಸಚಿವಾಲಯ ತನ್ನ ಪತ್ರದೊಂದಿಗೆ ಎರಡು ಪತ್ರಿಕೆಗಳ ಸಂಪಾದಕೀಯಗಳನ್ನು ಲಗತ್ತಿಸಿದ್ದುದು ನಿಜ. ಆದರೆ, ಅವನ್ನು ಹಣಕಾಸು ಸಚಿವಾಲಯದ ವಸ್ತುನಿಷ್ಟ ಅಭಿಪ್ರಾಯ ಎಂದೋ, ತಕರಾರು ಎಂದೋ ಪರಿಗಣಿಸಲು ಸಾಧ್ಯವಿಲ್ಲ' ಎಂದು ಮೊಯಿಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.