ADVERTISEMENT

ದೂರಸಂಪರ್ಕ ಕ್ಷೇತ್ರ: ಶೇ100 ಎಫ್‌ಡಿಐ

ಪ್ರಸ್ತಾವನೆಗೆ ಆಯೋಗದ ಸಮ್ಮತಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2013, 19:59 IST
Last Updated 2 ಜುಲೈ 2013, 19:59 IST
ಕೇಂದ್ರ ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಕಪಿಲ್ ಸಿಬಲ್ ಮತ್ತು ರಾಜ್ಯ ಸಚಿವ ಮಿಲಿಂದ್ ದೇವೋರಾ ಅವರು ಮಂಗಳವಾರ ನವದೆಹಲಿಯಲ್ಲಿ `ರಾಷ್ಟ್ರೀಯ ಸೈಬರ್ ಭದ್ರತಾ ನೀತಿ-2013' ಬಿಡುಗಡೆ ಮಾಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು 	-ಪಿಟಿಐ ಚಿತ್ರ
ಕೇಂದ್ರ ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಕಪಿಲ್ ಸಿಬಲ್ ಮತ್ತು ರಾಜ್ಯ ಸಚಿವ ಮಿಲಿಂದ್ ದೇವೋರಾ ಅವರು ಮಂಗಳವಾರ ನವದೆಹಲಿಯಲ್ಲಿ `ರಾಷ್ಟ್ರೀಯ ಸೈಬರ್ ಭದ್ರತಾ ನೀತಿ-2013' ಬಿಡುಗಡೆ ಮಾಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು -ಪಿಟಿಐ ಚಿತ್ರ   

ನವದೆಹಲಿ(ಪಿಟಿಐ): ದೂರಸಂಪರ್ಕ ಕ್ಷೇತ್ರವನ್ನು `ನೇರ ವಿದೇಶಿ ಹೂಡಿಕೆ'(ಎಫ್‌ಡಿಐ)ಗೆ ಸಂಪೂರ್ಣ ಮುಕ್ತವಾಗಿಸಲು ವಿವಿಧ ಸಚಿವಾಲಯಗಳನ್ನು ಒಳಗೊಂಡ `ದೂರಸಂಪರ್ಕ ಆಯೋಗ' ಮಂಗಳವಾರ ಸಮ್ಮತಿಸಿದೆ.

ಶೇ 100ರಷ್ಟು `ಎಫ್‌ಡಿಐ'ಗೆ ಅವಕಾಶ ಮಾಡಿಕೊಡುವ ಈ ಪ್ರಸ್ತಾವನೆಗೆ ಇನ್ನೇನಿದ್ದರೂ ಸಚಿವ ಸಂಪುಟದ ಅಂಗೀಕಾರ ಮುದ್ರೆಯಷ್ಟೇ ಬೀಳಬೇಕಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದರು.

ಪ್ರಸ್ತುತ ದೂರಸಂಪರ್ಕ ಕ್ಷೇತ್ರದಲ್ಲಿ ಶೇ 74ರಷ್ಟು `ನೇರ ವಿದೇಶಿ ಹೂಡಿಕೆ'ಗೆ ಅವಕಾಶವಿದೆ. ಇದರಲ್ಲಿ ಶೇ 49ರಷ್ಟು ಬಂಡವಾಳವನ್ನು ವಿದೇಶಿ ಸಂಸ್ಥೆಗಳು ಯಾವುದೇ ಅಡ್ಡಿಯಿಲ್ಲದೆ ನೇರವಾಗಿ ಹೂಡಬಹುದಾಗಿದೆ. ಉಳಿದ ಶೇ 25ರಷ್ಟು `ಎಫ್‌ಡಿಐ'ಗೆ ಮಾತ್ರ `ವಿದೇಶಿ ಬಂಡವಾಳ ಹೂಡಿಕೆ ಉತ್ತೇಜನ ಮಂಡಳಿ'ಯಿಂದ ಅನುಮತಿ ಪಡೆಯಬೇಕಿದೆ.

ಶೇ 100 `ಎಫ್‌ಡಿಐ'ಗೆ ಆಯೋಗ ಸಮ್ಮತಿಸಿರುವ ಸಂಬಂಧ ವಿವರವಾದ ಪತ್ರವನ್ನು `ಕೈಗಾರಿಕಾ ನೀತಿ ಮತ್ತು ಉತ್ತೇಜನ ಇಲಾಖೆ'(ಡಿಐಪಿಪಿ)ಗೆ ಸದ್ಯದಲ್ಲಿಯೇ ದೂರಸಂಪರ್ಕ ಇಲಾಖೆ ರವಾನಿಸಲಿದೆ. ಇದಕ್ಕೆ ಸಂಬಂಧಿಸಿದ ಕಡತವನ್ನು ಸಚಿವ ಸಂಪುಟದಲ್ಲಿ ಮಂಡಿಸುವುದಕ್ಕೂ ಮುನ್ನ `ಡಿಐಪಿಪಿ', ವಿವಿಧ ಸಚಿವಾಲಯಗಳ ಪರಾಮರ್ಶೆಗೆ ಕಳುಹಿಸಿಕೊಡಲಿದೆ ಎಂದು ಅಧಿಕಾರಿ ವಿವರಿಸಿದರು.

ಈ ಪ್ರಸ್ತಾವನೆಗೆ ಸಚಿವ ಸಂಪುಟದ ಒಪ್ಪಿಗೆ ದೊರೆತರೆ, ನಂತರ ದೂರಸಂಪರ್ಕ ಕ್ಷೇತ್ರದಲ್ಲಿ ವಿದೇಶಿ ಸಂಸ್ಥೆಗಳು ನೇರವಾಗಿ ಸಂಪೂರ್ಣ ತಮ್ಮದೇ ಬಂಡವಾಳ ತೊಡಗಿಸಿ ಕಂಪೆನಿ ಆರಂಭಿಸಬಹುದಾಗಿದೆ, ಭಾರತೀಯ ಕಂಪೆನಿಗಳಲ್ಲಿನ ತಮ್ಮ ಷೇರು ಪಾಲನ್ನು ಹೆಚ್ಚಿಸಿಕೊಳ್ಳಬಹು ದಾಗಿದೆ.

ಸ್ಪರ್ಧೆ-ಬಂಡವಾಳ ಅಗತ್ಯ
ತುರುಸಿನ ಸ್ಪರ್ಧೆ ಎದುರಿಸುತ್ತಿರುವ ದೂರಸಂಪರ್ಕ ಉದ್ಯಮ ಕ್ಷೇತ್ರದಲ್ಲಿನ ಕಂಪೆನಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳ ಲಭಿಸುವಂತೆ ಮಾಡುವ ಸಲುವಾಗಿಯೇ `ಎಫ್‌ಡಿಐ' ಮಿತಿ ನಿರ್ಬಂಧ ತೆಗೆದು ಹಾಕಲು ಆಯೋಗ ಒಪ್ಪಿಕೊಂಡಿತು ಎಂದು ಅಧಿಕಾರಿ ಸ್ಪಷ್ಟಪಡಿಸಿದರು.

ಕಂಪೆನಿಗಳ ಸ್ವಾಗತ
ದೂರಸಂಪರ್ಕ ಆಯೋಗದ ಕ್ರಮವನ್ನು ರಿಲಯನ್ಸ್ ಕಮ್ಯುನಿಕೇಷನ್ಸ್, `ಏರ್‌ಸೆಲ್'(ಇದರಲ್ಲಿ ಮಲೇಷ್ಯಾದ ಮ್ಯಾಕ್ಸಿಸ್ ಕಮ್ಯುನಿಕೇಷನ್ ಕಂಪೆನಿಯ ಶೇ 74ರಷ್ಟು ಬಂಡವಾಳವಿದೆ) ಮತ್ತು `ಸಿಸ್ಟೆಮಾ ಶ್ಯಾಮ್ ಟೆಲಿಸರ್ವಿಸಸ್'(ಈ ಕಂಪೆನಿಯಲ್ಲಿ ರಷ್ಯಾದ `ಸಿಸ್ಟೆಮಾ' ಸಂಸ್ಥೆಯ ಬಂಡವಾಳವಿದೆ) ಸ್ವಾಗತಿಸಿವೆ.

ಹೆಚ್ಚುವರಿ ವಿದೇಶಿ ಬಂಡವಾಳ ಹರಿದು ಬರುವುದರಿಂದ ಮತ್ತು ಹೊಸ ವಿದೇಶಿ ಕಂಪೆನಿಗಳ ಆಗಮನದಿಂದ ಭಾರತದ ದೂರಸಂಪರ್ಕ ಕ್ಷೇತ್ರದಲ್ಲಿ ಸ್ಪರ್ಧೆ ಇನ್ನಷ್ಟು ತೀವ್ರಗೊಳ್ಳಲಿದೆ. ಗ್ರಾಹಕರಿಗೆ ಕಡಿಮೆ ದರದಲ್ಲಿ ಉತ್ತಮ ಸೇವೆ ಲಭಿಸಲು ಅವಕಾಶವಾಗಲಿದೆ ಎಂದು ಏರ್‌ಸೆಲ್ ಮತ್ತು ಸಿಸ್ಟೆಮಾ ಶ್ಯಾಮ್ ಕಮ್ಯುನಿಕೇಷನ್ ಕಂಪೆನಿ ಪ್ರತಿಕ್ರಿಯಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.