ADVERTISEMENT

ನಿವೇಶನ ನೀಡದ ಸೇವಾಚ್ಯುತಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2010, 10:50 IST
Last Updated 21 ಡಿಸೆಂಬರ್ 2010, 10:50 IST

ಕೊಟ್ಟ ಭರವಸೆಯಂತೆ ಕೆಲಸ ಮಾಡಿಕೊಡಲು ಸಾಧ್ಯವಿಲ್ಲ ಎಂಬುದರ ಅರಿವಿದ್ದೂ, ಆ ಕೆಲಸ ಮಾಡಿಕೊಡುವುದಾಗಿ ಹೇಳಿ ಹಣ ಪಡೆದು ನಂತರ ಕೆಲಸ ಮಾಡಿಕೊಡದೇ ಇದ್ದರೆ ಅದು ವಂಚನೆಯಷ್ಟೇ ಅಲ್ಲ ಸೇವಾಚ್ಯುತಿಯೂ ಆಗುತ್ತದೆ. ಇಂತಹ ಸಂದರ್ಭಗಳಲ್ಲಿ ಗ್ರಾಹಕ ಸಂರಕ್ಷಣಾ ಕಾಯ್ದೆ ನಿಮ್ಮ ನೆರವಿಗೆ ಬರುತ್ತದೆ. ಈ ಪ್ರಕರಣದಲ್ಲಿ ಅರ್ಜಿದಾರರು ನವೀನ್ ಮೆಲ್ರಿಕ್ ಲೊವೆಟ್ಟೆ ಫರ್ನಾಂಡಿಸ್ ಯಾನೆ ನವೀನ್ ಫರ್ನಾಂಡಿಸ್, ಕಾಕ್ಸ್ ಟೌನ್, ಬೆಂಗಳೂರು.

ಪ್ರತಿವಾದಿಗಳು: 1) ವಿ. ಭಾಸ್ಕರ ರೆಡ್ಡಿ, ಪಾಲುದಾರರು ಮೆ. ರಾಯಲ್ ಕೌಂಟಿ ಮತ್ತು ಎಂ.ಡಿ. ಪ್ರೆಸಿಡೆನ್ಸಿ ಸಮೂಹ. 2) ಟಿ.ಆರ್. ರೆಡ್ಡಿ, ಪಾಲುದಾರರು ಮೆ. ರಾಯಲ್ ಕೌಂಟಿ, ಮಹಾಲಕ್ಷ್ಮಿ ಬಡಾವಣೆ, ಬೆಂಗಳೂರು.ಅರ್ಜಿದಾರ ನವೀನ್ ಫರ್ನಾಂಡಿಸ್ ಅವರು ಪ್ರತಿವಾದಿಗಳ ಆಕರ್ಷಕ ಪ್ರಚಾರಕ್ಕೆ ಮರುಳಾಗಿ ಮೈಸೂರಿನ ಯೆಲವಾಳ ಹೋಬಳಿ ಹುಯಿಲಾಳ ಗ್ರಾಮದಲ್ಲಿ ನಿರ್ಮಿಸಲಾಗುವ ಮೆ.  ರಾಯಲ್ ಕೌಂಟಿ ಬಡಾವಣೆಯಲ್ಲಿ ನಿವೇಶನಕ್ಕೆ ಬುಕ್ಕಿಂಗ್ ಮಾಡಿಸಿಕೊಂಡರು. ನೀರು, ವಿದ್ಯುತ್, ಒಳಚರಂಡಿ ವ್ಯವಸ್ಥೆ, ತಾರು ರಸ್ತೆ, ಬೀದಿ ದೀಪಗಳ ಸಹಿತ ಸಕಲ ವ್ಯವಸ್ಥೆಗಳುಳ್ಳ ಬಡಾವಣೆಯ ನಿವೇಶನಕ್ಕೆ ಅವರು ಕೊಡಬೇಕಾಗಿದ್ದ ಒಟ್ಟು ಮೌಲ್ಯ 6.75 ಲಕ್ಷ ರೂಪಾಯಿಗಳು.

ಈ ವ್ಯವಹಾರದ ಸಂಬಂಧ 2007ರಲ್ಲಿ ಪ್ರತಿವಾದಿಗಳ ಜೊತೆಗೆ ಒಪ್ಪಂದ ಮಾಡಿಕೊಂಡ ನವೀನ್ ಫರ್ನಾಂಡಿಸ್ ಅವರು ಚೆಕ್ ಮೂಲಕ 2.25 ಲಕ್ಷ ರೂಪಾಯಿಗಳನ್ನು ಮುಂಗಡವಾಗಿ ಪಾವತಿ ಮಾಡಿದರು.ಮೈಸೂರು ನಗರಾಭಿವೃದ್ಧಿ  ಪ್ರಾಧಿಕಾರದಿಂದ (ಮುಡಾ) ಮಂಜೂರಾತಿ ಲಭಿಸಿದ ತತ್‌ಕ್ಷಣ ನಿವೇಶನ ಹಂಚಿಕೆ ಮಾಡುವುದಾಗಿ ಪ್ರತಿವಾದಿಗಳು ಒಪ್ಪಂದ ಪತ್ರದಲ್ಲಿ ಭರವಸೆ ನೀಡಿದರು. ಇದಾಗಿ ಎರಡು ವರ್ಷಗಳಾದರೂ ಪ್ರತಿವಾದಿಗಳು ಒಪ್ಪಂದ ಪ್ರಕಾರ ನಿವೇಶನ ಹಂಚಿಕೆ ಮಾಡಲೇ ಇಲ್ಲ. ಹೀಗಾಗಿ ಅರ್ಜಿದಾರ ನವೀನ್ ಅವರು ಒಪ್ಪಂದದ ಪ್ರಕಾರ ಹಣವನ್ನು ಬಡ್ಡಿ ಸಹಿತ ಹಿಂತಿರುಗಿಸುವಂತೆ ಆಗ್ರಹಿಸಿ ಪ್ರತಿವಾದಿಗಳಿಗೆ ಪತ್ರ ಬರೆದರು. ಹಣ ಮರುಪಾವತಿಗೆ ವಿಫಲರಾದ ಪ್ರತಿವಾದಿಗಳು ಒಂದು ಲಕ್ಷ ರೂಪಾಯಿ ಮತ್ತು 1.25 ಲಕ್ಷ ರೂಪಾಯಿಗಳ  ಬ್ಯಾಂಕಿನ ಚೆಕ್‌ಗಳನ್ನು ನೀಡಿದರು. ಪ್ರತಿವಾದಿಗಳ ಮಾತು ನಂಬಿ  ಅರ್ಜಿದಾರರು ಚೆಕ್‌ಗಳನ್ನು ಬ್ಯಾಂಕಿಗೆ ಸಲ್ಲಿಸಿದರು. ಆದರೆ ಸಾಕಷ್ಟು ಹಣ ಇಲ್ಲ ಎಂಬ ಕಾರಣಕ್ಕಾಗಿ ಚೆಕ್‌ಗಳು ತಿರಸ್ಕೃತಗೊಂಡವು.

ಹೀಗಾಗಿ ನವೀನ್ ಅವರು ಪ್ರತಿವಾದಿಗೆ ಲೀಗಲ್ ನೋಟಿಸ್ ಕಳುಹಿಸಿ  ಚೆಕ್ ಪಾವತಿ ಮಾಡುವಂತೆ ಆಗ್ರಹಿಸಿದರು.  2010ರ ಏಪ್ರಿಲ್ ಮೂರನೇ ವಾರದಲ್ಲಿ ನಿವೇಶನ ಕ್ರಯಪತ್ರ ನೋಂದಣಿ ಮಾಡಿಕೊಡುವುದಾಗಿ ಪ್ರತಿವಾದಿಗಳಿಂದ ಮಾರುತ್ತರ ಬಂತು. ಆದರೆ ಅರ್ಜಿದಾರರು  ಭೇಟಿ ಮಾಡಲು ಬಂದಾಗಲೆಲ್ಲ ಒಂದಲ್ಲ ಒಂದು ಸಬೂಬು ನೀಡುತ್ತಾ ಭೇಟಿ ಸಮಯ ಮುಂದೂಡುತ್ತಾ ಬರಲಾಯಿತು. ಇದರಿಂದ ಬೇಸತ್ತ ಅರ್ಜಿದಾರರು ಪ್ರತಿವಾದಿಗಳಿಂದ ಸೇವಾಲೋಪ ಆಗಿದೆ ಎಂದು ಆಪಾದಿಸಿ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದರು.

ಅಧ್ಯಕ್ಷ ಬಿ.ಎಸ್. ರೆಡ್ಡಿ, ಸದಸ್ಯರಾದ ಎಂ. ಯಶೋದಮ್ಮ ಮತ್ತು ಎ. ಮುನಿಯಪ್ಪ ಅವರನ್ನು ಒಳಗೊಂಡ ಪೀಠವು ಅರ್ಜಿದಾರರ ಪರ ವಕೀಲ ಗಣೇಶ ಆರ್, ಪ್ರತಿವಾದಿಗಳ ಪರ ವಕೀಲ ಧನಂಜಯ ಸಿ.ಪಿ. ಅವರ ಅಹವಾಲುಗಳನ್ನು ಆಲಿಸಿ, ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿತು.2010ರ ಜನವರಿ ಅಂತ್ಯದ ಒಳಗಾಗಿ ಅರ್ಜಿದಾರರಿಗೆ ಕ್ರಯಪತ್ರ ನೋಂದಣಿ ಮಾಡಿಕೊಡಲಾಗುವುದು. ತಮ್ಮಿಂದ ಯಾವುದೇ ಸೇವಾಲೋಪ ಆಗಿಲ್ಲ  ಎಂದು ಪ್ರತಿವಾದಿಗಳು ಹೇಳಿದರು.

ಹಿಂದಿನ ಸರ್ಕಾರವೇ 2006ರಿಂದ ಭೂ ಪರಿವರ್ತನೆ ಮತ್ತು ಬಡಾವಣೆ ಅಭಿವೃದ್ಧಿಯನ್ನು ನಿಷೇಧಿಸಿತ್ತು ಎಂಬುದಾಗಿ ಪ್ರತಿವಾದಿ ತನ್ನ ಹೇಳಿಕೆಯಲ್ಲಿ ವಿವರಿಸಿದ್ದನ್ನು ಗಮನಕ್ಕೆ ತೆಗೆದುಕೊಂಡ ನ್ಯಾಯಾಲಯ, ಈ ವಿಚಾರ ಗೊತ್ತಿದ್ದೂ  ನಿವೇಶನ ನೀಡುವುದಾಗಿ ಹೇಳಿ ಅರ್ಜಿದಾರರೊಂದಿಗೆ ಪ್ರತಿವಾದಿ ಒಪ್ಪಂದ ಮಾಡಿಕೊಂಡಿದ್ದಾರೆ. ಮೂರು ವರ್ಷ ಕಳೆದರೂ ಕ್ರಯಪತ್ರ ಮಾಡಿಕೊಟ್ಟಿಲ್ಲ. ಪ್ರತಿವಾದಿಯ ಈ ರೀತಿಯ ವರ್ತನೆ ಸೇವಾಲೋಪವಾಗುತ್ತದೆ ಎಂಬ ತೀರ್ಮಾನಕ್ಕೆ ನ್ಯಾಯಾಲಯ ಬಂದಿತು. ಈ ಹಿನ್ನೆಲೆಯಲ್ಲಿ 2.25 ಲಕ್ಷ ರೂಪಾಯಿಗಳನ್ನು  ಶೇಕಡಾ 9 ಬಡ್ಡಿ ಮತ್ತು 2000 ರೂಪಾಯಿ ಖಟ್ಲೆ ವೆಚ್ಚ ಸೇರಿಸಿ ಅರ್ಜಿದಾರರಿಗೆ ಪಾವತಿ ಮಾಡಬೇಕು ಎಂದು ನ್ಯಾಯಾಲಯ ಪ್ರತಿವಾದಿಗಳಿಗೆ ಆಜ್ಞಾಪಿಸಿತು.           
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.