ನವದೆಹಲಿ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದಲ್ಲಿ ನೇರ ತೆರಿಗೆ ಮೂಲಕ ಒಟ್ಟು ರೂ. 6.36 ಲಕ್ಷ ಕೋಟಿ ಸಂಗ್ರಹಿಸುವ ಗುರಿಯನ್ನು ಹಣಕಾಸು ಸಚಿವಾಲಯ ನಿಗದಿಪಡಿಸಿದೆ. ಇದರಲ್ಲಿ ಶೇ 73ರಷ್ಟು ಗುರಿಯನ್ನು ಈಗಾಗಲೇ ತಲುಪಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
ಇದುವರೆಗೆ ನೇರ ತೆರಿಗೆ ರೂಪದಲ್ಲಿ ರೂ. 5.44 ಲಕ್ಷ ಕೋಟಿ ಸಂಗ್ರಹವಾಗಿದೆ. ಇದರಲ್ಲಿ ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಸಿದವರಿಗೆ (ಐ.ಟಿ ರಿಟರ್ನ್ಸ್) ರೂ. 78,893 ಕೋಟಿ ಮರು ಪಾವತಿಸಲಾಗಿದೆ. ಹೀಗಾಗಿ ನಿವ್ವಳ ನೇರ ತೆರಿಗೆ ಸಂಗ್ರಹ ರೂ. 4.66 ಲಕ್ಷ ಕೋಟಿ. ಸರ್ಕಾರ ನಿಗದಿಪಡಿಸಿರುವ ಗುರಿಯನ್ನು ಹಣಕಾಸು ವರ್ಷದ ಅಂತ್ಯದೊಳಗೆ ತಲುಪುವ ವಿಶ್ವಾಸ ಇದೆ ಎಂದು ಆದಾಯ ತೆರಿಗೆ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ತೆರಿಗೆ ವಂಚಿಸಿರುವ 21.75 ಲಕ್ಷ ಜನರಿಗೆ ಇಲಾಖೆ ನೋಟಿಸ್ ನೀಡಿದೆ. ಕೇಂದ್ರ ನೇರ ತೆರಿಗೆ ಮಂಡಳಿ ವಂಚನೆ ಪ್ರಕರಣಗಳ ಮೇಲೆ ತೀವ್ರ ನಿಗಾ ವಹಿಸುತ್ತಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.