ADVERTISEMENT

ನೇರ ನಗದು `ಇಂದ್ರಜಾಲ ವಿದ್ಯೆ'

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2012, 19:59 IST
Last Updated 22 ಡಿಸೆಂಬರ್ 2012, 19:59 IST

ಜೈಪುರ (ಪಿಟಿಐ): ಸರ್ಕಾರದ ವಿವಿಧ ಯೋಜನೆಗಳ ಸಬ್ಸಿಡಿ ನೆರವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸುವ ವ್ಯವಸ್ಥೆಯು `ಶುದ್ಧ ಇಂದ್ರಜಾಲ ವಿದ್ಯೆ' ಎಂದು ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಬಣ್ಣಿಸಿದ್ದಾರೆ.

ಈ ವ್ಯವಸ್ಥೆ ಜಾರಿಗೆ ಸಂಬಂಧಿಸಿದಂತೆ ಬ್ಯಾಂಕುಗಳ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ.  ಯೋಜನೆ ಯಶಸ್ವಿಯಾಗಿ ಬ್ಯಾಂಕುಗಳು ಸರ್ಕಾರದ ಜತೆ ಕೈಜೋಡಿಸಿ ಕಾರ್ಯನಿರ್ವಹಿಸಬೇಕು ಎಂದು ಅವರು ಶನಿವಾರ ಇಲ್ಲಿ ನಡೆದ ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಅಂಡ್ ಜೈಪುರದ ಸ್ವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಹೇಳಿದರು.

ನೇರ ನಗದು ವರ್ಗಾವಣೆ ವ್ಯವಸ್ಥೆಯಡಿ ಸೋರಿಕೆ ಮತ್ತು ಭ್ರಷ್ಟಾಚಾರಕ್ಕೆ ಯಾವುದೇ ಅವಕಾಶ ಇಲ್ಲ. ಬ್ಯಾಂಕ್ ಮೂಲಕ ಸಬ್ಸಿಡಿ ನೆರವು ಫಲಾನುಭವಿಗಳ ಖಾತೆಗೆ ಜಮಾ ಆಗುತ್ತದೆ. ಇದೊಂದು ಇಂದ್ರಜಾಲ ವಿದ್ಯೆಯೇ ಹೌದು ಎಂದು ಅವರು ಅಭಿಪ್ರಾಯಪಟ್ಟರು.
ಜನವರಿ 1 ರಿಂದ ಈ ಸೌಲಭ್ಯವನ್ನು ಆಯ್ದ ಜಿಲ್ಲೆಗಳಲ್ಲಿ ಮಾತ್ರ ಜಾರಿಗೆ ತರುತ್ತಿದ್ದೇವೆ. ಆದರೆ, ವರ್ಷಾಂತ್ಯಕ್ಕೆ ದೇಶದಾದ್ಯಂತ ಜಾರಿಗೆ ಬರಲಿದೆ. ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ಬ್ಯಾಂಕುಗಳು ಸಿದ್ದಗೊಳ್ಳಬೇಕಿವೆ ಎಂದರು.

ಯೋಜನೆ ಜಾರಿಗೆ ಸಿದ್ಧತೆ

ನವದೆಹಲಿ (ಪಿಟಿಐ): ಜನವರಿ 1ರಿಂದ 16 ರಾಜ್ಯಗಳ 41 ಜಿಲ್ಲೆಗಳಲ್ಲಿ ಮೊದಲ ಹಂತದ ನೇರ ನಗದು ಸಬ್ಸಿಡಿ ವರ್ಗಾವಣೆ ವ್ಯವಸ್ಥೆ ಜಾರಿಗೆ ಬರಲಿದ್ದು, ಅನುಷ್ಠಾನ ಹಂತದಲ್ಲಿನ ಸಂಭವನೀಯ ಸಮಸ್ಯೆಗಳನ್ನು ಪರಿಶೀಲಿಸಲು ಕೇಂದ್ರ ಸರ್ಕಾರ ಈ ಜಿಲ್ಲೆಗಳಲ್ಲಿ 40 ಹಿರಿಯ ಅಧಿಕಾರಿಗಳನ್ನು ನಿಯೋಜಿಸಿದೆ.
ಪ್ರಧಾನ ಮಂತ್ರಿಗಳ  ಪ್ರಧಾನ ಕಾರ್ಯದರ್ಶಿ ಪಲೊಕ್ ಚಟರ್ಜಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಆಯ್ದ ಜಿಲ್ಲೆಗಳಿಗೆ ಅಧಿಕಾರಿಗಳನ್ನು ನಿಯೋಜಿಸುವ ನಿರ್ಧಾರ ಕೈಗೊಳ್ಳಲಾಯಿತು.

ಈ ಅಧಿಕಾರಿಗಳು ಜಿಲ್ಲಾಧಿಕಾರಿಗಳು, ಬ್ಯಾಂಕಿನ ವ್ಯವಸ್ಥಾಪಕರು  ಮತ್ತು ರಾಷ್ಟ್ರೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ (ಯುಐಡಿಎಐ) ಅಧಿಕಾರಿಗಳ ಜತೆಗೂಡಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಲಾಗಿದೆ.ಸರ್ಕಾರದ ಒಟ್ಟು 34 ಯೋಜನೆಗಳ ಸಬ್ಸಿಡಿ ನೆರವು ನೇರ ನಗದು ವರ್ಗಾವಣೆ ವ್ಯವಸ್ಥೆ ಮೂಲಕ ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.